ಬೆಂಗಳೂರು : ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಈ ನಡುವಲ್ಲಿಯೇ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ಕಲ್ಯಾಣ ನಡೆದಿದೆ. ಆದ್ರೆ ನಿಖಿಲ್ ಕಲ್ಯಾಣದ ಕುರಿತು ಇದೀಗ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಬಾರೀ ಟೀಕೆಗಳು ಕೇಳಿಬರುತ್ತಿವೆ.

ಮಾಜಿ ಪ್ರಧಾನಿ ದೇವೆಗೌಡರ ಮೊಮ್ಮಗ, ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ರಾಮನಗರ ಜಿಲ್ಲೆಯಲ್ಲಿರುವ ಹೆಚ್ ಡಿ ಕುಮಾರಸ್ವಾಮಿಯವರ ಫಾರ್ಮ್ ಹೌಸ್ ನಲ್ಲಿ ನಡೆಯಿತು.

ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಜನದಟ್ಟಣೆ ಸೇರುವುದಕ್ಕೆ ನಿಯಂತ್ರಣ ಹೇರಲಾಗಿತ್ತು. ಅಲ್ಲದೇ ಲಾಕ್ ಡೌನ್ ಆದೇಶವನ್ನು ಪಾಲನೆ ಮಾಡುವ ಮೂಲಕ ಸರಳವಾಗಿ ವಿವಾಹವನ್ನು ನಡೆಸಲಾಗಿದೆ ಎಂದು ಎಚ್ ಡಿಕೆ ಕುಟುಂಬಸ್ಥರು ಹೇಳುತ್ತಿದ್ದಾರೆ.

ನಟ ನಿಖಿಲ್ ಕುಮಾರ ಸ್ವಾಮಿ ಹಾಗೂ ರೇವತಿ ಅವರು ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ. ಮದುವೆ ನಡೆದ ಫಾರ್ಮ ಹೌಸ್ ನಿಂದ ಕನಿಷ್ಟ 10 ಕಿ.ಮೀ. ದೂರದ ವರೆಗೂ ಸಂಚಾರ ನಿಷೇಧಿಸಲಾಗಿತ್ತು. ಲಾಕ್ ಡೌನ್ ಆದೇಶವನ್ನು ಚಾಚೂ ತಪ್ಪದೇ ಪಾಲಿಸಿದ್ದೇವೆ ಅಂತಾ ಕುಮಾರಸ್ವಾಮಿ ಅವರು ಹೇಳುತ್ತಿದ್ರೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರೋ ಪೋಟೋ ಹಾಗೂ ವಿಡಿಯೋಗಳು ಬಾರೀ ಚರ್ಚೆಗೆ ಗ್ರಾಸವಾಗಿವೆ.

ಮದುವೆಯಲ್ಲಿ ಸುಮಾರು 150 ಮಂದಿ ಪಾಲ್ಗೊಂಡಿದ್ದರು. ಯಾರೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಧರಿಸಿಲ್ಲ. ವಿವಾಹ ಮಂಟಪವನ್ನು ದುಬಾರಿ ವಸ್ತುಗಳನ್ನು ಬಳಕೆ ಮಾಡಲಾಗಿದೆ. ನಿಯಮದ ಪ್ರಕಾರ 50 ರಿಂದ 60 ಮಂದಿಗೆ ಅವಕಾಶವಿದ್ದರೂ ನೂರೈವತ್ತು ಮಂದಿಗೆ ಅವಕಾಶ ನೀಡಿದ್ಯಾರು ಅಂತಾ ಟೀಕೆಗಳು ಕೇಳಿಬರುತ್ತಿವೆ.

ಜನಪ್ರತಿನಿಧಿಗಳೇ ಲಾಕ್ ಡೌನ್ ಆದೇಶ ಧಿಕ್ಕರಿಸಿರುವುದು ಎಷ್ಟು ಸರಿ ಅನ್ನೋ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು, ಒಂದೊಮ್ಮೆ ಮದುವೆಯಲ್ಲಿ ಲಾಕ್ ಡೌನ್ ಆದೇಶ ಪಾಲನೆ ಮಾಡದೇ ಇದ್ರೆ ಕ್ರಮಕೈಗೊಳ್ಳುವುದಾಗಿಯೂ ಎಚ್ಚರಿಸಿದ್ದಾರೆ. ಈ ಕುರಿತು ವರದಿ ನೀಡುವಂತೆ ಎಸಿ ಅವರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.