araga jnanendra : ಕೊರಗರ ಮೇಲಿನ ದೌರ್ಜನ್ಯ ಪ್ರಕರಣ ಸಿಒಡಿ ತನಿಖೆಗೆ ಒಪ್ಪಿಸಿ ಆದೇಶ

ಉಡುಪಿ : ಜಿಲ್ಲೆಯ ಕೋಟತಟ್ಟುವಿನಲ್ಲಿ ಕೊರಗರ ಮೇಲೆ ಪೊಲೀಸರಿಂದ ನಡೆದ ದೌರ್ಜನ್ಯದ ಪ್ರಕರಣವನ್ನು ರಾಜ್ಯ ಸರ್ಕಾರ ಸಿಒಡಿ ತನಿಖೆಗೆ ವಹಿಸಲು ನಿರ್ಧರಿಸಿದೆ. ಈ ಸಂಬಂಧ ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ (araga jnanendra) ಮಾಹಿತಿ ನೀಡಿದ್ದಾರೆ.

ಈ ವಿಚಾರವಾಗಿ ಉಡುಪಿ ಜಿಲ್ಲೆ ಬ್ರಹ್ಮಾವರದ ಕೋಟತಟ್ಟು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊರಗರ ಕಾಲೋನಿಯಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಡಿಜೆ ವಿಚಾರವಾಗಿ ಕೊರಗರ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಆರೋಪ ಎದುರಾಗಿದೆ. ಘಟನೆ ನಡೆದು ಎರಡ್ಮೂರು ದಿನಗಳ ಬಳಿಕ ಕಾನ್​​ಸ್ಟೇಬಲ್​ ಒಬ್ಬರು ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಅಲ್ಲದೇ ಕೊರಗರ ವಿರುದ್ಧ ಸರ್ಕಾರಿ ಕೆಲಸಕ್ಕೆ ಧಕ್ಕೆ ತಂದ ಆರೋಪವನ್ನೂ ಪೊಲೀಸರು ಹೊರಿಸಿದ್ದಾರೆ. ಆದರೆ ಮೇಲ್ನೋಟಕ್ಕೆ ಇವೆಲ್ಲ ಸತ್ಯಕ್ಕೆ ದೂರವಾಗಿರುವಂತೆ ಕಾಣುತ್ತಿದೆ.

ರಕ್ಷಣೆ ನೀಡಬೇಕಾದ ಪೊಲೀಸರೇ ಈ ರೀತಿ ಮಾಡಿರುವುದು ನಿಜಕ್ಕೂ ಖಂಡನೀಯ. ಈಗಾಗಲೇ ಪ್ರಕರಣ ಸಂಬಂಧ ಕೋಟ ಪಿಎಸ್​ಐಯನ್ನು ಅಮಾನತು ಮಾಡಲಾಗಿದೆ. ಅಲ್ಲದೇ ಐವರು ಪೊಲೀಸ್​ ಸಿಬ್ಬಂದಿಗೆ ವರ್ಗಾವಣೆ ಮಾಡಲಾಗಿದೆ. ಕೊರಗರ ಮೇಲೆ ನಡೆದ ಹಲ್ಲೆ ಹಾಗೂ ಅವರ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಸಂಬಂಧ ಸಿಒಡಿ ತನಿಖೆ ನಡೆಸಲಿದೆ. ತನಿಖೆಯಲ್ಲಿ ಪ್ರಕರಣದ ನಿಜಾಂಶ ಬಯಲಾಗಲಿದ್ದು ತಪ್ಪಿತಸ್ಥರು ಯಾರೆಂಬುದು ತಿಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊರಗರು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ. ಸರ್ಕಾರ ನಿಮ್ಮೊಂದಿಗಿದೆ.ನಿಮಗೆ ಯಾವುದೇ ತೊಂದರೆ ಆಗದಂತೆ ಸರ್ಕಾರ ನಿಗಾ ವಹಿಸಲಿದೆ. ಸರ್ಕಾರದ ಪರಿಹಾರ ಧನದಿಂದ ನಿಮಗಾದ ಅವಮಾನ ಕಡಿಮೆಯಾಗೋಕೆ ಸಾಧ್ಯವಿಲ್ಲ. ಆದರೂ ನೀವು ಸರ್ಕಾರ ನಿಮ್ಮೊಂದಿಗೆ ಇದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಕೊರಗರ ಮೇಲೆ ಹಲ್ಲೆ ನಡೆದ ದಿನ ಪಿಎಸ್​ಐ ಮೇಲಾಧಿಕಾರಿಗಳಿಗೆ ವಿಚಾರವನ್ನು ತಿಳಿಸಬೇಕಿತ್ತು. ಆದರೆ ಪೊಲೀಸರು ಈ ಪ್ರಕರಣದಲ್ಲಿ ಮನುಷತ್ವ ಕಳೆದುಕೊಂಡವರಂತೆ ವರ್ತಿಸಿದ್ದಾರೆ. ಇದರಿಂದ ಇಡೀ ಪೊಲೀಸ್​​ಗೆ ಇಲಾಖೆಗೆ ಕೆಟ್ಟ ಹೆಸರು ಬರುವಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಇದನ್ನು ಓದಿ : New Year Party in School : ಸರ್ಕಾರಿ ಶಾಲೆಯಲ್ಲಿಯೇ ಮದ್ಯದ ಪಾರ್ಟಿ ಮಾಡಿದ ದುಷ್ಕರ್ಮಿಗಳು

ಇದನ್ನೂ ಓದಿ : Youth commits suicide: ಸಾಲ ತೀರಿಸಲಾಗದೇ ನೇಣಿಗೆ ಶರಣಾದ ಯುವಕ

police brutality case in udupi district cod investigation araga jnanendra

Comments are closed.