ಶಿವಮೊಗ್ಗ : Shivamogga riot case: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನಿವಾಸಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಮಾಸುವ ಮುನ್ನವೇ ಇದೀಗ ಶಿವಮೊಗ್ಗ ನಗರವು ರಣಾರಂಗವಾಗಿ ಬದಲಾಗಿದೆ. ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಇರಬೇಕಿದ್ದ ಮಲೆನಾಡ ಹೆಬ್ಬಾಗಿಲು ಇಬ್ಬರು ಯುವಕರಿಗೆ ಚಾಕು ಇರಿತದ ಪ್ರಕರಣದ ಬಳಿಕ ಕಾದ ಕೆಂಡವಾಗಿದೆ. ವೀರ ಸಾರ್ವಕರ್ ಫೋಟೋ ವಿಚಾರವಾಗಿ ನಡೆದ ಗಲಾಟೆಯಿಂದಾಗಿ ಶಿವಮೊಗ್ಗ ನಗರವೀಗ ಬಿಕೋ ಎನ್ನುತ್ತಿದೆ.
ವೀರ ಸಾವರ್ಕರ್ ಫೋಟೋವನ್ನು ತೆರವುಗೊಳಿಸಿ ಟಿಪ್ಪು ಸುಲ್ತಾನನ ಫೋಟೋವನ್ನು ಅಳವಡಿಸಲು ಮುಂದಾದ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರು ಹಾಗೂ ಮುಸ್ಲಿಂ ಸಂಘಟನೆಗಳ ನಡುವೆ ಉಂಟಾದ ವಾಗ್ವಾದವು ವಿಕೋಪಕ್ಕೆ ತಿರುಗಿದ ಬೆನ್ನಲ್ಲೇ ಶಿವಮೊಗ್ಗದ ಅಶೋಕ್ ನಗರ ಬಡಾವಣೆಯಲ್ಲಿ ಪ್ರವೀಣ್ ಕುಮಾರ್ ಹಾಗೂ ಗಾಂಧಿ ಬಜಾರ್ನಲ್ಲಿ ಪ್ರೇಮ್ ಸಿಂಗ್ ಎಂಬವರ ಮೇಲೆ ಚಾಕು ಇರಿತವಾಗಿದ್ದು ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ಪ್ರೇಮ್ ಸಿಂಗ್ ಎಂಬವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಶಿವಮೊಗ್ಗದಲ್ಲಿ ಚಾಕು ಇರಿತಕ್ಕೆ ಒಳಗಾದ ಪ್ರೇಮ್ ಸಿಂಗ್ ಗಾಂಧಿ ಬಜಾರ್ನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎನ್ನಲಾಗಿದೆ. ಶಿವಮೊಗ್ಗದಲ್ಲಿ ಈ ರೀತಿ ಧರ್ಮ ಸಂಘರ್ಷ ಆರಂಭಗೊಂಡಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಪ್ರೇಮ್ ಸಿಂಗ್ ಅಂಗಡಿಯ ಬಾಗಿಲನ್ನು ಮುಚ್ಚಿ ಮನೆ ಕಡೆಗೆ ತೆರಳಲು ಮುಂದಾಗಿದ್ದರಂತೆ. ಆದರೆ ಈ ವೇಳೆಗೆ ಸರಿಯಾಗಿ ಅಂಗಡಿ ಬಳಿಗೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದ ದುಷ್ಕರ್ಮಿಗಳು ಪ್ರೇಮ್ ಸಿಂಗ್ಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ.
ರಕ್ತದ ಮಡುವಿನಲ್ಲಿದ್ದ ಪ್ರೇಮ್ ಸಿಂಗ್ರನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರೇಮ್ ಸಿಂಗ್ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು ವೈದ್ಯರು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ವೀರ ಸಾವರ್ಕರ್ ಗಲಾಟೆ ವಿಚಾರವಾಗಿ ನಡೆದ ಗಲಭೆಯಿಂದಾಗಿ ಶಿವಮೊಗ್ಗ ನಗರದಲ್ಲಿ ಸೆಕ್ಷನ್ 144 ಜಾರಿಯಾಗಿದ್ದು ಶಿವಮೊಗ್ಗ ನಗರ ಸಂಪೂರ್ಣ ಸ್ತಬ್ಧವಾಗಿದೆ. ಶಿವಮೊಗ್ಗದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು ಶಿವಮೊಗ್ಗ ನಗರ ಬಿಕೋ ಎನ್ನುತ್ತಿದೆ. ನಗರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದ್ಯದ ಅಂಗಡಿಗಳನ್ನು ಖುದ್ದು ಪೊಲೀಸರೇ ಬಂದ್ ಮಾಡಿಸಿದ್ದಾರೆ. ನಗರದ ಎಲ್ಲಾ ಕಡೆಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ.
ಇದನ್ನು ಓದಿ : araga jnanendra jeep accident : ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಾವಲು ವಾಹನ ಅಪಘಾತ
ಇದನ್ನೂ ಓದಿ : Shivamogga riot case: ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೋ ವಿವಾದ : ರಾಜ್ಯ ಸರ್ಕಾರಕ್ಕೆ ನನ್ನ ಧಿಕ್ಕಾರ ಎಂದ ಪ್ರಮೋದ್ ಮುತಾಲಿಕ್
Shivamogga riot case: Prem Singh, who was stabbed with a knife, is in critical condition