nurse and stole the baby :ನರ್ಸ್ ವೇಷಧಾರಿಯಾಗಿ ಬಂದು ನವಜಾತ ಶಿಶುವನ್ನು ಕದ್ದೊಯ್ದ ಖದೀಮರ ಗ್ಯಾಂಗ್

ಬೆಳಗಾವಿ: nurse and stole the baby : ವ್ಯಕ್ತಿಯ ಗಮನ ಬೇರೆಡೆ ಸೆಳೆದು ಚಿನ್ನ‌, ಬ್ಯಾಗ್, ಪರ್ಸ್ ಎಗರಿಸುವ ಖದೀಮರ ಬಗ್ಗೆ ಕೇಳಿರ್ತಿರಾ. ಆದ್ರೆ ಬೆಳಗಾವಿ‌‌‌‌ ಜಿಲ್ಲೆಯಲ್ಲಿ ಬಾಣಂತಿಯೊಬ್ಬರ ಗಮನ ಬೇರೆಡೆ ಸೆಳೆದು‌ ನವಜಾತ ಶಿಶುವನ್ನು ಕಳವು ಮಾಡಿರುವ ಘಟನೆ ನಡೆದಿದೆ. ಆದ್ರೆ ಸಿನಿಮೀಯ ಮಾದರಿಯಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಕಳ್ಳತನವಾಗಿದ್ದ ನವಜಾತ ಶಿಶುವನ್ನು ಘಟನೆ ನಡೆದ ಎರಡೂವರೆ ಗಂಟೆಯಲ್ಲೇ ಪತ್ತೆ ಹಚ್ಚುವಲ್ಲಿ ಬೆಳಗಾವಿ ಜಿಲ್ಲಾ ಪೋಲಿಸರು ಯಶಸ್ವಿಯಾಗಿದ್ದಾರೆ.

ಹೌದು..ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ನಿನ್ನೆಯಷ್ಟೇ ಜನಿಸಿದ್ದ ನವಜಾತ ಗಂಡು ಮಗುವನ್ನು ಪತ್ತೆ ಹಚ್ಚಿ ತಾಯಿಗೆ ಹಸ್ತಾಂತರಿಸುವಲ್ಲಿ ಅಥಣಿ ಮತ್ತು ಕಾಗವಾಡ ಪೋಲಿಸರು ಯಶಸ್ವಿಯಾಗಿದ್ದು ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಸರ್ಕಾರಿ ಆಸ್ಪತ್ರೆಗೆ ನರ್ಸ್ ವೇಷಧಾರಿಯಾಗಿ ಓರ್ವ ಮಹಿಳೆ ಮತ್ತು ಅವರ ತಂಡ ಆಗಮಿಸಿದೆ.‌ ಬಳಿಕ ನೇರವಾಗಿ ಆಸ್ಪತ್ರೆಯ ವಾರ್ಡ್ ಗೆ ತೆರಳಿ ಎಲ್ಲ ಬಾಣಂತಿಯರು ತಾಯಿ ಕಾರ್ಡ್ ಹಾಗೂ ಆಧಾರ ಕಾರ್ಡ್ ಜೆರಾಕ್ಸ್ ಕೊಡಬೇಕು ಅಂತ ಹೇಳಿ ಅವರ ಗಮನ ಬೇರೆಡೆ ಸೆಳೆದಿದೆ‌. ಈ ಸಂದರ್ಭ ಅಂಬಿಕಾ ಅಮೀತ ಭೋವಿ ಎಂಬ ಬಾಣಂತಿಯ ಮಗುವನ್ನು ತೂಕ ಮಾಡಿಸಿ ತಂದು ಕೊಡುವದಾಗಿ ಹೇಳಿ ವಾರ್ಡನಿಂದ ಹೊರಗೆ ತೆಗೆದುಕೊಂಡು ಈ ತಂಡ ಹೋಗಿದೆ. ಆದ್ರೆ ಅರ್ಧ ಗಂಟೆಯಾದರೂ ಮಗುವನ್ನು ಮರಳಿ ಕೊಡದೇ ಇದ್ದಾಗ ಆಸ್ಪತ್ರೆಯ ಸಿಬ್ಬಂದಿಯಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ‌.‌ ಈ ಸಂದರ್ಭ ಆಸ್ಪತ್ರೆಯ ಸಿಬ್ಬಂದಿಗಳು ಯಾರು ಸಹ ಈ ರೀತಿ ಮಗುವನ್ನು ತೆಗೆದುಕೊಂಡು ಹೋಗಿಲ್ಲ ಎಂದು ಗೊತ್ತಾಗಿದೆ.

ಹೀಗಾಗಿ ನವಜಾತ ಮಗುವನ್ನು ಕಳವು ಮಾಡಿರುವ ಬಗ್ಗೆ ಅಥಣಿ ಪೋಲಿಸರಿಗೆ ಮಾಹಿತಿ ರವಾನಿಸಲಾಗಿದೆ. ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದ ಅಥಣಿ ಪೋಲಿಸರು ಬೆಳಗಾವಿ ಎಸ್ಪಿ ಸಂಜೀವ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ ನೇತೃತ್ವದಲ್ಲಿ ಸಿಪಿಐ ರವೀಂದ್ರ ನಾಯ್ಕೋಡಿ ಮತ್ತು ಪಿಎಸ್ಐ ಶಿವಶಂಕರ ಮುಕ್ರಿ ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ತನಿಖೆ ನಡೆಸಿದ್ದು ಮಗುವನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಮೈಶಾಳ ಗ್ರಾಮದ ಮಹಿಳೆಯೊಬ್ಬಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಇನ್ನು ಮಗು ನಾಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಆಸ್ಪತ್ರೆಯಲ್ಲಿ ಜಮಾವಣೆಗೊಂಡಿದ್ದು ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿದ್ದಲ್ಲದೇ ಮಗು ಪತ್ತೆಯಾದ ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಬೆಳಗಾವಿ ಎಸ್ಪಿ ಸಂಜೀವ ಪಾಟೀಲ್ ಅಥಣಿ ಮತ್ತು ಕಾಗವಾಡ ಪೋಲಿಸರ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ‌.

ಇದನ್ನು ಓದಿ : India Vs Pak Jersey Fight : ಟಿ20 ವಿಶ್ವಕಪ್: “ಕಲ್ಲಂಗಡಿ Vs ಹಾರ್ಪಿಕ್” ; ಭಾರತ Vs ಪಾಕ್ ಜರ್ಸಿ ಜಟಾಪಟಿ ; ಏನಿದು ಹೊಸ ರಗಳೆ ?

ಇದನ್ನೂ ಓದಿ : Bigg boss Kannada season 9: ಸೆಪ್ಟೆಂಬರ್‌ 24 ರಿಂದ ಬಿಗ್‌ಬಾಸ್‌ ಸೀಸನ್ 9 ಆರಂಭ : ವಾಹಿನಿ ಮುಂದೆ ಬೇಡಿಕೆ ಇಟ್ಟ ವೀಕ್ಷಕರು

Thieves came disguised as a nurse and stole the baby

Comments are closed.