ಕೊಲಂಬೋ : ರಾಜಕಾರಣಿಗಳು ಸಾಮಾನ್ಯವಾಗಿ ಪ್ರಚಾರ ಬಯಸೋದು ಮಾಮೂಲು. ಈ ಹಿಂದೆ ಹೊಲದಲ್ಲಿ ಸುದ್ದಿಗೋಷ್ಠಿ ನಡೆಸಿ ಕೃಷಿ ಸಚಿವರು ಸುದ್ದಿಯಾಗಿದ್ರು. ಆದ್ರೀಗ ಸಚಿವರೋರ್ವರು ತೆಂಗಿನ ಮರವೇರಿ ಸುದ್ದಿಗೋಷ್ಠಿ ನಡೆಸುವ ಮೂಲಕ ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ತೆಂಗಿನ ಮರವೇರಿ ವಿಭಿನ್ನವಾಗಿ ಸುದ್ದಿಗೋಷ್ಠಿ ನಡೆಸಿರೋದು ಅರುಂಧಿಕಾ ಫರ್ನಾಂಡೊ. ನೆರೆಯ ಶ್ರೀಲಂಕಾ ದೇಶದ ತೆಂಗು ಸಚಿವ. ಶ್ರೀಲಂಕಾದ ಡಂಕೋಟುವಾದಲ್ಲಿರುವ ತಮ್ಮ ತೋಟದಲ್ಲಿ ಸುದ್ದಿಗೋಷ್ಠಿಯನ್ನು ಆಯೋಜಿಸಿದ್ದರು. ಈ ವೇಳೆ ಸುದ್ದಿಗೋಷ್ಠಿಗೆ ತೆರಳಿದ್ದ ಮಾಧ್ಯಮದ ಮಂದಿಗೆ ಅಚ್ಚರಿಯೋಂದು ಕಾದಿತ್ತು. ಸಚಿವ ಅರುಂಧಿಕಾ ಫರ್ನಾಂಡೊ ಮರ ಹತ್ತುವ ಯಂತ್ರದ ಮೂಲಕ ತೆಂಗಿನ ಮರವೇರಿ, ಅಲ್ಲಿಂದಲೇ ಮಾಧ್ಯಮದವರೊಂದಿಗೆ ಸುದ್ದಿಗೋಷ್ಠಿ ನಡೆಸಿದ್ದಾರೆ.

ತೆಂಗು ಸಚಿವರು ತೆಂಗಿನ ಮರವೇರಿ ಸುದ್ದಿಗೋಷ್ಟಿ ನಡೆಸಿರುವ ವಿಡಿಯೋ ವೈರಲ್ ಆಗಿದ್ದು, ಸಚಿವರ ಕಾರ್ಯಕ್ಕೆ ಹಲವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇನ್ನೂ ಹಲವರು ಟ್ರೋಲ್ ಮಾಡಿದ್ದಾರೆ. ಇನ್ನು ಡಿಫ್ರೆಂಟ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ದೇಶದಲ್ಲಿ ದಿನೇ ದಿನೇ ತೆಂಗಿಗೆ ಬೇಡಿಕೆ ಹೆಚ್ಚುತ್ತಿದೆ. ವ್ಯಕ್ತಿಯೋರ್ವ ತೆಂಗನ ಮರವೇರುವ ಯಂತ್ರ ಸಂಶೋಧಿಸಿದ್ದು, ನಾನು ಆ ಯಂತ್ರವನ್ನು ಪರೀಕ್ಷಿಸಿದ್ದೇನೆ. ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಯಂತ್ರವನ್ನು ಪರಿಚಯಿಸುವ ಉದ್ದೇಶವನ್ನು ಹೊಂದಿದ್ದೇನೆ ಎಂದರು.