ನವದೆಹಲಿ : ಕೊರೊನಾ ವೈರಸ್ ಸೋಂಕು ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರನ್ನೇ ಕಾಡುತ್ತಿದೆ. ಅದ್ರಲ್ಲೂ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಅಷ್ಟಕ್ಕೂ ಮಹಿಳೆಯರಿಗೆ ಕೊರೊನಾ ಸೋಂಕು ಮಾರಕವಲ್ಲದಿರೋದು ಯಾಕೆ ಗೊತ್ತಾ ? ಈ ಪ್ರಶ್ನೆಗೆ ತಜ್ಞರು ನಡೆಸಿದ ಸಂಶೋಧನೆಯಲ್ಲಿ ಸತ್ಯ ಬಯಲಾಗಿದೆ.

ಪುರುಷರು ಹಾಗೂ ಮಹಿಳೆಯ ನಡುವಿನ ದೇಹ ರಚನೆ ಇದೀಗ ಮಹಿಳೆಯರನ್ನು ಕೊರೊನಾದಿಂದ ಕಾಪಾಡುತ್ತಿದೆ. ಮಹಿಳೆಯರಲ್ಲಿ ಸ್ರವಿಸುವ ಸ್ತ್ರೀ ಹಾರ್ಮೋನ್ ಈಸ್ಟ್ರೋಜನ್ ಪಾತ್ರ ಇದರಲ್ಲಿ ಬಹುಮುಖ್ಯವಾಗಿದೆ.

ಇದು ಹೃದಯದಲ್ಲಿರುವ ಆ್ಯಂಜಿಯೋ ಟೆನ್ಷನ್- ಕನ್ವರ್ಟಿಂಗ್ ಎನ್ಜೈಮ್ (ಏಸ್2) ಎಂಬ ಕಿಣ್ವದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ ಮಹಿಳೆಯರಲ್ಲಿ ಕೋವಿಡ್-19 ಕಾಯಿಲೆ ಗಂಭೀರ ಸ್ಥಿತಿಗೆ ತಲುಪದಂತೆ ತಡೆಯುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕೊರೊನಾ ಸೋಂಕು ಮಹಿಳೆಯರಿಗೆ ಅಷ್ಟೊಂದು ಮಾರಕವಾಗಿಲ್ಲವೇಕೆ ಅನ್ನೋ ಕುರಿತು ಅಮೆರಿಕದ ವೇಕ್ ಫಾರೆಸ್ಟ್ ಬ್ಯಾಪ್ಟಿಸ್ಟ್ ಮೆಡಿಕಲ್ ಸೆಂಟರ್ ವೈದ್ಯರು ಸಂಶೋಧನೆಯೊಂದನ್ನು ನಡೆಸಿದ್ದಾರೆ.

ಸಂಶೋಧನೆಯಲ್ಲಿ ಕರೊನಾ ವೈರಸ್ ಹೃದಯದ ಮೇಲೆ ದಾಳಿ ಮಾಡುತ್ತದೆ ಮತ್ತು ಸ್ತ್ರೀಯರಲ್ಲಿರುವ ಈಸ್ಟ್ರೋಜನ್ ಹಾರ್ಮೋನ್ ಅವರನ್ನು ಹೃದಯ ಸಂಬಂಧಿ ಕಾಯಿಲೆಯಿಂದ ರಕ್ಷಿಸುತ್ತದೆ. ಹೀಗಾಗಿ ಪುರುಷ ಹಾಗೂ ಸ್ತ್ರೀಯರಲ್ಲಿರುವ ಈ ಹಾರ್ಮೋನ್ ವ್ಯತ್ಯಾಸವೇ ಕೋವಿಡ್ ಗಂಭೀರತೆಗೆ ಕಾರಣವಾಗುತ್ತದೆ ಸಂಶೋಧಕ ಲಿಯಾನ್ ಗ್ರೊಬಾನ್ ವಿಶ್ಲೇಷಿಸಿದ್ದಾರೆ.

ಹೃದಯ, ಕಿಡ್ನಿ, ಅಪಧಮನಿಗಳು ಹಾಗೂ ಕರುಳಿನಲ್ಲಿರುವ ಜೀವಕೋಶಗಳ ಪೊರೆಗೆ ಏಸ್2 ಕಿಣ್ವಗಳು ಅಂಟಿಕೊಂಡಿದ್ದು ಕೊರೊನಾ ಸೋಂಕು ಪಸರಿಸಲು ಕಾರಣವಾಗುವ ಕಣಗಳನ್ನು ಸ್ವೀಕರಿಸುತ್ತವೆ ಮತ್ತು ಅಂಗಗಳಲ್ಲಿ ಸೇರಲು ಅವಕಾಶ ನೀಡುತ್ತವೆ.

ಈಸ್ಟ್ರೋಜನ್ ಹಾರ್ಮೋನ್ ಸ್ರವಿಸುತ್ತಿದ್ದರೆ, ದೇಹದಲ್ಲಿ ಏಸ್2 ಕಿಣ್ವದ ಪ್ರಮಾಣ ಕಡಿಮೆಯಾಗುವುದರಿಂದ ಕೊರೊನಾ ವೈರಸ್ ಸೋಂಕಿನ ತೀವ್ರತೆ ಹೆಚ್ಚದಂತೆ ತಡೆಯುತ್ತದೆ ಎಂಬ ಅಂಶವನ್ನು ಪತ್ತೆ ಹೆಚ್ಚಿದ್ದಾರೆ.