ನವದೆಹಲಿ : ದೇಶದಾದ್ಯಂತ ಟೋಲ್ ಪ್ಲಾಜಾಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಆದರೆ ಬಹುತೇಕ ವಾಹನ ಸವಾರರು ಫಾಸ್ಟ್ಯಾಗ್ ಅಳವಡಿಸಿಕೊಳ್ಳದೇ ಕ್ಯಾಸ್ ನೀಡಿ ಟೋಲ್ ಗಳಲ್ಲಿ ಸಂಚರಿಸುತ್ತಿದ್ದಾರೆ. ಫಾಸ್ಟ್ಯಾಗ್ ಹೊಂದಿಲ್ಲದ ವಾಹನಗಳು ಫಾಸ್ಟ್ಯಾಗ್ ಲೈನಿನಲ್ಲಿ ಸಂಚರಿಸಿದ್ರೆ ಇನ್ಮುಂದೆ ದುಪ್ಪಟ್ಟು ಶುಲ್ಕ ನೀಡಬೇಕಾಗುತ್ತದೆ.

ಟೋಲ್ ಗಳನ್ನು ಡಿಜಿಟಲ್ ಗೆ ಅಳವಡಿಸಿ, ಕ್ಯಾಶ್ ಲೆಸ್ ಮಾಡುವುದರ ಜೊತೆಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಟೋಲ್ ಗಳಲ್ಲಿ ಸಂಚರಿಸುವ ವಾಹನಗಳು ಕಡ್ಡಾಯವಾಗಿ ಫಾಸ್ಟ್ಯಾಗ್ ಅಳವಡಿಸಿಕೊಳ್ಳಲು ಕೇಂದ್ರ ಸೂಚನೆಯನ್ನು ನೀಡಿತ್ತು.


ಕಳೆದ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ 30 ಲಕ್ಷಕ್ಕೂ ಅಧಿಕ ಫಾಸ್ಟ್ಯಾಗ್ ಗಳನ್ನು ನೀಡಲಾಗಿದ್ದು, ಅಲ್ಲದೇ ಎನ್ಎಚ್ಎಐಗೆ ಸೇರಿದ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಡಿಸೆಂಬರ್ 15 ರಿಂದ ಫಾಸ್ಟ್ಯಾಗ್ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣಾ ವ್ಯವಸ್ಥೆಯನ್ನು ಸರ್ಕಾರ ರೂಪಿಸಿತ್ತು. ಆದರೂ ಹಲವು ವಾಹನಗಳ ಸವಾರರು ಫಾಸ್ಟ್ಯಾಗ್ ಅಳವಡಿಸಿಕೊಂಡಿಲ್ಲ.

ಆದ್ರೀಗ ಕೇಂದ್ರ ಸರಕಾರ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ನ್ನು ತಿದ್ದುಪಡಿ ಮಾಡಿ ಸಚಿವಾಲು ಮೇ 15ರಂದು ಜಿಎಸ್ಆರ್ 298 ಇ ಅಡಿಯಲ್ಲಿ ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಫಾಸ್ಟ್ಯಾಗ್ ಹೊಂದಿಲ್ಲ ವಾಹನ ಸವಾರರು ಟೋಲ್ ಪ್ಲಾಝಾಗಳಲ್ಲಿ ಸಂಚಾರ ಮಾಡಿದ್ರೆ, ಟೋಲ್ ಶುಲ್ಕದ ಎರಡು ಪಟ್ಟು ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.