ಕೇರಳ: ಇತ್ತೀಚಿನ ದಿನಗಳಲ್ಲಿ ಮದುವೆ,ಎಂಗೇಜಮೆಂಟ್,ಬೇಬಿಶೋವರ್,ನಾಮಕರಣ ಹೀಗೆ ಎಲ್ಲವೂ ಪೋಟೋಶೂಟ್ ನಿಂದಲೇ ಶುರುವಾಗೋದು ಸಾಮಾನ್ಯ ಎನ್ನಿಸಿಬಿಟ್ಟಿದೆ. ಫ್ರೀ ವೆಡ್ಡಿಂಗ್ ಶೂಟ್, ಪೋಸ್ಟ್ ವೆಡ್ಡಿಂಗ್ ಶೂಟ್ ಹೀಗೆ ಮದುವೆಗಳಲ್ಲಿ ಶಾಸ್ತ್ರಕ್ಕಿಂತ ಪೋಟೋಗಳೇ ಮುಖ್ಯವಾಗಿದೆ. ಆದರೆ ಇಲ್ಲೊಂದು ಜೋಡಿ ಮಾತ್ರ ಮದುವೆಯಲ್ಲಿ ಪೋಟೋ ಶೂಟ್ ಮಾಡಿಸಿಕೊಳ್ಳೋ ಬದಲು ಮದುವೆಯಾದ ಬರೋಬ್ಬರಿ 58 ವರ್ಷಗಳ ಬಳಿಕ ಪೋಟೋಶೂಟ್ ಗೆ ಪೋಸ್ ನೀಡುವ ಮೂಲಕ ಸುದ್ದಿಯಾಗಿದೆ.

ಹೌದು ಕೇರಳದ ಈ ವೃದ್ಧದಂಪತಿ ಬರೋಬ್ಬರಿ 58 ವರ್ಷಗಳ ಸಾರ್ಥಕ ದಾಂಪತ್ಯ ಕಂಡಿದ್ದಾರೆ. ಮೂವರು ಮಕ್ಕಳು ಆರು ಮೊಮ್ಮಕ್ಕಳನ್ನು ಕಂಡ ಈ ಜೋಡಿಗೆ ಒಂದೇ ಒಂದು ಕೊರತೆ ಕಾಡುತ್ತಿತ್ತು. ಅದೇನೆಂದರೇ ಮದುವೆಯಾಗಿ 58 ವರ್ಷವೇನೋ ಕಳೆದಿತ್ತು. ಆದರೆ ಮದುವೆ ಹೇಗಿತ್ತು ಅಂತ ನೆನಪಿಸಿಕೊಳ್ಳೋಕೆ ಇವರ ಬಳಿ ಒಂದೇ ಒಂದು ಪೋಟೋ ಇರಲಿಲ್ಲ. ಕಾರಣ ಇವರ ಮದುವೆ ನಡೆದಿದ್ದು 1962 ರಲ್ಲಿ. ಆಗೆಲ್ಲ ಪೋಟೋ,ವಿಡಿಯೋ ಶೂಟಿಂಗ್ ಈಗಿನಷ್ಟು ಸುಲಭವಾಗಿರಲಿಲ್ಲ.

ಕೇರಳದ ಇಡುಕ್ಕಿ ಜಿಲ್ಲೆಯ ನಿವಾಸಿಯಾದ 85 ವರ್ಷದ ಕುಂಜೆಟ್ಟು ಹಾಗೂ 80 ವರ್ಷದ ಚಿನ್ನಮ್ಮ ಬದುಕಿನ ಸಂಧ್ಯಾಕಾಲದಲ್ಲಿ ತಮ್ಮ ಮದುವೆದೊಂದು ಪೋಟೋ ಇಲ್ವಲ್ಲ ಎಂದು ಕೊರಗುತ್ತಿದ್ದರು. ಇದನ್ನು ಗಮನಿಸಿದ ವೆಡ್ಡಿಂಗ್ ಪೋಟೋಗ್ರಾಫರ್ ಆಗಿರೋ ಅವರ ಮೊಮ್ಮಗ ಅಜ್ಜ-ಅಜ್ಜಿಯ ಸ್ಪೆಶಲ್ ವೆಡ್ಡಿಂಗ್ ಪೋಟೋಶೂಟ್ ಮಾಡಿಸೋ ಮೂಲಕ ವೃದ್ಧ ದಂಪತಿಯ ಆಸೆ ಈಡೇರಿಸಿದ್ದಾನೆ.
ಪೋಟೋಶೂಟ್ ಗಾಗಿ 80 ವರ್ಷದ ಚಿನ್ನಮ್ಮ ಬಂಗಾರದ ಬಣ್ಣದ ಬಾರ್ಡರ್ ಇರೋ ಶ್ವೇತವರ್ಣದ ಸಾಂಪ್ರದಾಯಿಕ ಸೀರೆ ಉಟ್ಟು ಮಧುಮಗಳಂತೆ ಸಜ್ಜಾಗಿದ್ದರೇ, ಅವರ ಪತಿ ಕುಂಜೆಟ್ಟು ಸೂಟ್ ನಲ್ಲಿ ಮಿಂಚಿದ್ದಾರೆ. ಹೂವಿನ ಬೊಕೆ ಜೊತೆ ಥೇಟ್ ಮದುಮಕ್ಕಳಂತೆ ಈ ದಂಪತಿ ಪೋಸು ನೀಡಿದ್ದು, ಸಂಭ್ರಮಿಸಿದ್ದಾರೆ.
ಈ ಪೋಟೋಗಳನ್ನು ಕುಂಜೆಟ್ಟು ಹಾಗೂ ಚಿನ್ನಮ್ಮನವರ ಮೊಮ್ಮಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, 58 ವರ್ಷಗಳ ಈ ಪ್ರೇಮಬಂಧಕ್ಕೆ ಸಾಟಿ ಇಲ್ಲ ಎಂಬರ್ಥದಲ್ಲಿ ತಮ್ಮ ಸಂದೇಶ ಹಂಚಿಕೊಂಡಿದ್ದಾರೆ. ಈ ಪೋಸ್ಟ್ 600ಕ್ಕೂ ಹೆಚ್ಚು ಜನರು ಕಮೆಂಟ್ ಮೂಲಕ ಸಂತೋಷ ವ್ಯಕ್ತಪಡಿಸಿದ್ದರೇ, 2 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ.