- ಭಾಗ್ಯ ದಿವಾಣ
ಹಬ್ಬಗಳು ಬಂತೆಂದರೆ ಸಾಕು ಆಯಾ ಪ್ರದೇಶಗಳು, ಅಲ್ಲಿನ ಆಚಾರ ವಿಚಾರಗಳಿಗೆ ಅನುಗುಣವಾಗಿ ಹಬ್ಬದ ಸಡಗರ ಸಂಭ್ರಮ ಬಲು ಜೋರಾಗಿಯೇ ಇರುತ್ತದೆ. ಗಣೇಶ ಹಬ್ಬದ ವೇಳೆ ಮೋದಕ ಪ್ರಿಯನ ವಿಭಿನ್ನ ಅವತಾರಗಳ ಮೂರ್ತಿಗಳು ಮಾರುಕಟ್ಟೆಯಲ್ಲಿ ಹೇಗೆ ಜನಸಾಮಾನ್ಯರನ್ನು ಆಕರ್ಷಿಸುತ್ತವೆಯೋ ಹಾಗೆಯೇ ನವರಾತ್ರಿಯ ಸಂದರ್ಭದಲ್ಲಿ ದುರ್ಗೆಯ ವಿಭಿನ್ನ ಲುಕ್ ನ ಮೂರ್ತಿಗಳು ಶಿಲ್ಪಿಯ ಕುಂಚದಿಂದ ರೂಪ ಪಡೆದುಕೊಳ್ಳುತ್ತವೆ.

ಸದ್ಯ ದುರ್ಗಾಪೂಜೆ ಹಿನ್ನೆಲೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ದುರ್ಗೆಯ ಪ್ರತಿಮೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹೌದು, ಕೋಲ್ಕತ್ತಾದಲ್ಲಿ ವೈದ್ಯೆ ರೂಪದ ದುರ್ಗೆಯ ಪ್ರತಿಮೆಯೊಂದು ಸಿದ್ಧಗೊಂಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಜನ ಮನಗೆದ್ದಿದೆ.

ಕರ್ನಾಟಕದಲ್ಲಿ ದಸರಾ ಈಗಾಗಲೇ ಆರಂಭವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಆರಂಭವಾಗುತ್ತಿದೆಯಷ್ಟೇ. ದುರ್ಗಾಪೂಜೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ದುರ್ಗಾ ಮೂರ್ತಿಗಳು ಸಿದ್ಧವಾಗುತ್ತಿದ್ದು, ವೈದ್ಯೆರೂಪದ ದುರ್ಗೆಯ ಪ್ರತಿಮೆ ಎಲ್ಲರನ್ನೂ ಸೆಳೆಯುತ್ತಿದೆ.
ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವವರಲ್ಲಿ ವೈದ್ಯರು ಪ್ರಮುಖರಾಗಿದ್ದಾರೆ. ಅಂತಹ ಕೊರೋನಾ ವಾರಿಯರ್ಸ್ ಗೆ ನಮನ ಸಲ್ಲಿಸುವ ನಿಟ್ಟಿನಲ್ಲಿ ದುರ್ಗೆಯನ್ನು ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯೆಯಾಗಿ ಇಲ್ಲಿ ಚಿತ್ರಿಸಲಾಗಿದೆ. ಮೂರ್ತಿಯನ್ನು ನಿರ್ಮಿಸಿದ ಕಲಾವಿದನ ಬಗ್ಗೆಯೂ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ಈ ಮೂರ್ತಿಯ ವಿಶೇಷತೆ ಏನು ಗೊತ್ತಾ..? ಮೂರ್ತಿಯಲ್ಲಿ ವೈದ್ಯರ ಕೋಟ್ ಧರಿಸಿ ಮಹಿಷಾಸುರ ಎಂಬ ರಾಕ್ಷಸನೊಂದಿಗೆ ಹೋರಾಡುವ ವೈದ್ಯನಾಗಿ ಚಿತ್ರಿಸಲಾಗಿದೆ. ಕೈಯಲ್ಲಿ ಸಿರಿಂಜ್ ಇದ್ದು, ಅದು ಕೊರೊನಾಸುರನ್ನು ಕೊಲ್ಲುವ ಸಂಕೇತವೆಂಬಂತೆ ಬಿಂಬಿಸಲಾಗಿದೆ.

ಇದರ ಹೊರತಾಗಿ ಗಣೇಶ ಹಾಗೂ ಸುಬ್ರಹ್ಮಣ್ಯ ದೇವರನ್ನು ಪೊಲೀಸ್ ಅಧಿಕಾರಿ ಮತ್ತು ನೈರ್ಮಲ್ಯ ಕೆಲಸಗಾರರೆಂದು, ಲಕ್ಷ್ಮೀ ಮತ್ತು ಸರಸ್ವತಿ ದೇವಿಯರನ್ನು ನರ್ಸ್ ಮತ್ತು ಆರೋಗ್ಯ ಕಾರ್ಯಕರ್ತೆಯಾಗಿ ಚಿತ್ರಿಸಲಾಗಿದೆ. ಟ್ವೀಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರವು ವೈರಲ್ ಆಗಿದ್ದು, ದೇಶ ವಿದೇಶದಲ್ಲಿರುವ ಈ ಮೂರ್ತಿಗಳಿಗೆ ಫುಲ್ ಫಿದಾ ಆಗಿದ್ದಾರೆ.