ಕಂಡ ಕಂಡಲ್ಲಿ ಅಡ್ಡ ಹಾಕುವಂತಿಲ್ಲ ಸಂಚಾರಿ ಪೊಲೀಸರು : ಏನು ಹೇಳುತ್ತೆ ಗೊತ್ತಾ ಕಾನೂನು ..?

ಬೆಂಗಳೂರು : ದಾಖಲೆ ಪರಿಶೀಲನೆಯ ನೆಪದಲ್ಲಿ ಕಂಡ ಕಂಡಲ್ಲಿ ಸಂಚಾರಿ ಪೊಲೀಸರು ಅಡ್ಡಹಾಕುವಂತಿಲ್ಲ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ಕಾನೂನಿನಲ್ಲಿಯೂ ಪೊಲೀಸರಿಗೆ ಅವಕಾಶವಿದೆಯೇ ಅನ್ನೋ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ಕಾನೂನು ಏನು ಹೇಳುತ್ತಿದೆ ಅನ್ನೋ ಮಾಹಿತಿ ಇಲ್ಲಿದೆ.

ಸಂಚಾರಿ ಪೊಲೀಸರು ವಾಹನ ಸವಾರರಿಗೆ ಕಿರಿಕಿರಿಯನ್ನುಂಟು ಮಾಡುತ್ತಿರುವ ಆರೋಪದ ಬೆನ್ನಲ್ಲೇ ವಿಧಾನ ಪರಿಷತ್ ನಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಜೆಡಿಎಸ್ ಸದಸ್ಯ ರಮೇಶ್ ಗೌಡ ಅವರ ಪ್ರಧ್ನೆಗೆ ಉತ್ತರಿಸಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನೀವು ಯಾವುದೇ ಸಂಚಾರ ಕಾನೂನನ್ನು ಉಲ್ಲಂಘಿಸದಿದ್ದರೆ, ನಿಮ್ಮ ದಾಖಲೆಗಳನ್ನು ಪರಿಶೀಲಿಸಲು ಸಂಚಾರ ಪೊಲೀಸರು ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ಟ್ರಾಫಿಕ್ ಪೊಲೀಸರು ರಸ್ತೆಯ ಮಧ್ಯದಲ್ಲಿ ವಾಹನಗಳನ್ನು ನಿಲ್ಲಿಸಿದ ನಂತರ ವಾಹನ ದಾಖಲೆಗಳನ್ನು ಕೇಳಬೇಕಾಗಿಲ್ಲ ಎಂದು ಹೇಳಿದ್ದಾರೆ.

ಸಂಚಾರ ನಿಯಮಗಳ ಉಲ್ಲಂಘನೆಯ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರು ವಾಹನಗಳನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ ಎಂದಿರುವ ಬೊಮ್ಮಾಯಿ, ವಾಹನಗಳನ್ನು ನಿಲ್ಲಿಸುವಾಗ ಅಪಘಾತಗಳು ಮತ್ತು ಇತರ ಅಹಿತಕರ ಘಟನೆಗಳನ್ನು ತಪ್ಪಿಸಲು ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಂತಹ ಸಂದರ್ಭಗಳಲ್ಲಿ ನೀತಿಗಳನ್ನು ಅನುಸರಿಸಬೇಕು. ಈ ನಿಟ್ಟಿನಲ್ಲಿ ಇಲಾಖೆಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ಸಿಸಿಟಿವಿ ಕ್ಯಾಮೆರಾಗಳಿಲ್ಲದ ಪ್ರದೇಶಗಳಲ್ಲಿ ಅತಿಯಾದ ವೇಗ ಅಥವಾ ಸಿಗ್ನಲ್ ಜಂಪಿಂಗ್ ಘಟನೆಗಳಂತಹ ಸಂಚಾರ ಉಲ್ಲಂಘನೆಯನ್ನು ಪತ್ತೆಹಚ್ಚಲು ಸುಧಾರಿತ ತಂತ್ರಜ್ಞಾನವನ್ನು ಬಳಸಲಾಗುತ್ತದೆ ಎಂದಿದ್ದಾರೆ.

ವಾಹನಗಳು ರಸ್ತೆಯಲ್ಲಿ ಸಂಚರಿಸುವ ವೇಳೆಯಲ್ಲಿ ವಾಹನಗಳನ್ನು ಬೇಕಾಬಿಟ್ಟಿಯಾಗಿ ಅಡ್ಡಹಾಕಲು ಕಾನೂನಿನ ಪ್ರಕಾರ ಅವಕಾಶವಿಲ್ಲ. ಅದ್ರಲ್ಲೂ ಟ್ರಾಫಿಕ್ ಕಾನ್ ಸ್ಟೇಬಲ್ ಗಳು ವಾಹನ ಅಡ್ಡಹಾಕಿ ದಾಖಲೆ ಪರಿಶೀಲನೆ ಮಾಡುವಂತಿಲ್ಲ. ಒಂದೊಮ್ಮೆ ದಾಖಲೆ ಪರಿಶೀಲನೆಯನ್ನು ಮಾಡಲು ಕೇವಲ ಎಐಎಸ್ ಐ ಶ್ರೇಣಿಯ ಅಥವಾ ಅದಕ್ಕಿಂತ ಮೇಲಿನ ಶ್ರೇಣಿಯ ಅಧಿಕಾರಿಗಳಿಗೆ ಮಾತ್ರವೇ ಅವಕಾಶವನ್ನು ಕಲ್ಪಿಸಲಾಗಿದೆ. ಒಂದೊಮ್ಮೆ ಎಎಸ್ಐ ಕೆಳಗಿನ ದರ್ಜೆಯ ಸಿಬ್ಬಂದಿಗಳು ದಾಖಲೆ ಪರಿಶೀಲನೆಗೆ ಮುಂದಾದ್ರೆ ವಾಹನ ಸವಾರರು ನಿರಾಕರಿಸಬಹುದಾಗಿದೆ.

ಭಾರತೀಯ ಮೋಟಾರು ವಾಹನ ಕಾಯ್ದೆ, ಸೆಕ್ಷನ್ 132, ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಸಿಂಗಲ್ ಸ್ಟಾರ್), ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಡಬ್ಬಲ್ ಸ್ಟಾರ್) ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ (ತ್ರಿಬ್ಬಲ್ ಸ್ಟಾರ್) ಮಾತ್ರ ಉಲ್ಲಂಘನೆಯ ವಿರುದ್ಧ ದಂಡ ವಿಧಿಸಲು ಹಾಗೂ ರಶೀದಿಯನ್ನು ಪಡೆಯಲು ಅಧಿಕಾರವನ್ನು ಹೊಂದಿದ್ದಾರೆ. ಒಂದು ವೇಳೆ ಕಾನ್‌ಸ್ಟೆಬಲ್ ಅಥವಾ ಹೆಡ್ ಕಾನ್‌ಸ್ಟೆಬಲ್ ನಿಮಗೆ ಸ್ಪಾಟ್ ದಂಡ ವಿಧಿಸುವುದಾಗಿ ಬೆದರಿಕೆ ಹಾಕಿದರೆ, ರಶೀದಿ ಪಡೆಯಲು ಒತ್ತಾಯಿಸಿ ಮತ್ತು ಅವರು ರಶೀದಿ ನೀಡಲು ಅಥವಾ ಹಣವನ್ನು ಸ್ವೀಕರಿಸಲು ಅಧಿಕಾರವಿಲ್ಲ. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಬಹುದಾಗಿದೆ.

Comments are closed.