ಕೊರೊನಾದಿಂದ ಮೃತಪಟ್ಟ ಶಿಕ್ಷಕರಿಗೆ 50 ಲಕ್ಷ ಪರಿಹಾರ ನೀಡಿ : ಎಚ್.ಡಿ.ಕುಮಾರಸ್ವಾಮಿ ಆಗ್ರಹ

ಬೆಂಗಳೂರು : ಕೊರೊನಾ ವೈರಸ್ ಸೋಂಕಿಗೆ ರಾಜ್ಯದಲ್ಲಿ ಶಿಕ್ಷಕರ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಚುನಾವಣಾ ಕರ್ತವ್ಯ ಹಾಗೂ ವಿದ್ಯಾಗಮ ಪಾಠ ಬೋಧನೆಯಿಂದಾಗಿ ರಾಜ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ಶಿಕ್ಷಕರು ಸಾವನ್ನಪ್ಪಿದ್ದಾರೆ. ಹೀಗೆ ಸಾವನ್ನಪ್ಪಿದ ಶಿಕ್ಷಕರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ 145 ಶಿಕ್ಷಕರು ಹಾಗೂ ರಾಜ್ಯದಾದ್ಯಂತ ಸಾಕಷ್ಟು ಶಿಕ್ಷಕರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಮೃತ ಶಿಕ್ಷಕರು ಚುನಾವಣಾ ಕರ್ತವ್ಯ ಹಾಗೂ ವಿದ್ಯಾಗಮ ಯೋಜನೆಯಡಿಯಲ್ಲಿ ಪಾಠ ಬೋಧನೆಯನ್ನು ಮಾಡಿದವರೇ ಆಗಿದ್ದಾರೆ. ಹೀಗಾಗಿ ಶಿಕ್ಷಕರಿಗೆ ಕೂಡಲೇ ಪರಿಹಾರವನ್ನು ನೀಡಬೇಕೆಂದು ಅವರು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಬೇಕು. ಅವರನ್ನು ಚುನಾವಣೆ ಹಾಗೂ ಮತ್ಯಾವುದೋ ಕಾರಣಕ್ಕೆ ನಿಯೋಜಿಸಿದ ಸರಕಾರವೇ ಈ ಸಾವುಗಳ ಸಂಪೂರ್ಣ ಹೊಣೆ ಹೊರಬೇಕು. ಇನ್ನೂ ಸಾವಿರಾರು ಶಿಕ್ಷಕರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಭವಿಷ್ಯ ಕಟ್ಟುವ ಶಿಕ್ಷಕರ ಬಗ್ಗೆ ಸರಕಾರದ ಉಡಾಫೆ ಹಾಗೂ ದಿವ್ಯ ನಿರ್ಲಕ್ಷ್ಯ ಧೋರಣೆ ಬಗ್ಗೆ ನನ್ನ ಧಿಕ್ಕಾರವಿದೆ. ಸರಕಾರ ಈ ಬಗ್ಗೆ ತುರ್ತು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Comments are closed.