SSLC : ಎಸ್ಎಸ್ಎಲ್ ಸಿ ಪರೀಕ್ಷೆ ರದ್ದು ಮಾಡಿ : ಸಚಿವ ಸುರೇಶ್ ಕುಮಾರ್ ವಿರುದ್ದ ವಿದ್ಯಾರ್ಥಿಗಳು, ಪೋಷಕರ ಆಕ್ರೋಶ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದ ಬಹುತೇಕ ರಾಜ್ಯಗಳಲ್ಲಿ 10 ಮತ್ತು 12ನೇ ತರಗತಿ ಪರೀಕ್ಷೆ ರದ್ದು ಮಾಡಲಾಗಿದೆ. ಆದ್ರೆ ಕರ್ನಾಟಕದಲ್ಲಿ ಮಾತ್ರ ಶಿಕ್ಷಣ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಬಹು ಆಯ್ಕೆ ಪ್ರಶ್ನೆಯ ಪರೀಕ್ಷೆಗೆ ವಿರೋಧ ವ್ಯಕ್ತವಾಗಿದ್ದು, ಕೊರೊನಾ ನಡುವಲ್ಲೇ ಪರೀಕ್ಷೆ ನಡೆಸುವ ಸಚಿವ ಸುರೇಶ್ ಕುಮಾರ್ ಕ್ರಮದ ವಿರುದ್ದ ಪೋಷಕರು ಹಾಗೂ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಕೊರೊನಾ ಮೂರನೇ ಅಲೆಯ ಆತಂಕ ರಾಜ್ಯವನ್ನು ಕಾಡುತ್ತಿದೆ. ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡಲಿದೆ ಅಂತಾ ತಜ್ಞರು ಎಚ್ಚರಿಸಿದ್ದಾರೆ. ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಮಾತ್ರವಲ್ಲ ರಾಜ್ಯದಲ್ಲಿ 300ಕ್ಕೂ ಅಧಿಕ ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಆದ್ರೂ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರೀಕ್ಷೆ ನಡೆಸೋದಕ್ಕೆ ಸಜ್ಜಾಗಿದ್ದಾರೆ. ಆದ್ರೆ ಬಹು ಆಯ್ಕೆ ಪದ್ದತಿಯ ಪರೀಕ್ಷೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. 

ಕೇಂದ್ರ ಸರಕಾರ ಕೊರೊನಾ ಸೋಂಕು ಹರಡುವಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸೋದು ಸೂಕ್ತ ಅಲ್ಲಾ ಅಂತಾ ಸೂಚಿಸಿತ್ತು.. ಈ ನಡುವಲ್ಲೇ 12ನೇ ತರಗತಿ ಪರೀಕ್ಷೆಯನ್ನು ಕೂಡ ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಅಷ್ಟೇ ಅಲ್ಲಾ ರಾಜ್ಯದಲ್ಲಿಯೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ. ಇನ್ನು ಪ್ರಥಮ ಪಿಯುಸಿ ಪರೀಕ್ಷೆ ರದ್ದಾದರೂ ಮನೆಯಿಂದಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಆದ್ರೆ ಎಲ್ಲರಿಗಿಂತಲೂ ಚಿಕ್ಕವರಾದ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸೋ ಮೂಲಕ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಜುಲೈ ಮೂರನೇ ವಾರದಲ್ಲಿ ಪರೀಕ್ಷೆ ನಡೆಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಉತ್ಸುಕರಾಗಿದ್ದಾರೆ. ಎರಡು ದಿನಗಳ ಕಾಲ ಬಹು ಆಯ್ಕೆಯ ಪ್ರಶ್ನೆಗಳನ್ನು ನೀಡಿ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಬಹು ಆಯ್ಕೆಯ ಪ್ರಶ್ನೆ ವಿದ್ಯಾರ್ಥಿಯ ಸಾಮರ್ಥ್ಯವನ್ನು ಗುರುತಿಸೋದಕ್ಕೆ ಸಾಧ್ಯವಿಲ್ಲ. ಹೀಗಾಗಿ ಬಹು ಆಯ್ಕೆಯ ಪರೀಕ್ಷೆಯನ್ನು ನಡೆಸಲು ಪೋಷಕರು ಹಾಗೂ ವಿದ್ಯಾರ್ಥಿಗಳು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಇತರ ರಾಜ್ಯಗಳಂತೆ ನಮ್ಮ ರಾಜ್ಯದಲ್ಲಿಯೂ ಪರೀಕ್ಷೆಯನ್ನು ರದ್ದು ಮಾಡುವಂತೆ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲಾ ದ್ವಿತೀಯ ಪಿಯುಸಿ ಪರೀಕ್ಷೆಯನ್ನೇ ಮಾಡಿಲ್ಲದ ಮೇಲೆ ನಮಗ್ಯಾಕೆ ಪರೀಕ್ಷೆ ಅಂತಾನೂ ಪ್ರಶ್ನಿಸುತ್ತಿದ್ದಾರೆ.

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಪರೀಕ್ಷೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಸಚಿವರ ಸುರೇಶ್ ಕುಮಾರ್ ಶಿಕ್ಷಕರಿಗೆ ಕೊರೊನಾ ವ್ಯಾಕ್ಸಿನ್ ಕೊಡಿಸೋದಾಗಿ ತಿಳಿಸಿದ್ದಾರೆ. ಆದರೆ ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆಯಿದೆ ಅನ್ನೋ ವಿಚಾರ ಖುದ್ದು ಸುರೇಶ್ ಕುಮಾರ್ ಅವರಿಗೆ ಅರಿವಿಲ್ಲವೇ, 60 ವರ್ಷ ಮೇಲ್ಪಟ್ಟ ಬಹುತೇಕರಿಗೆ ಇನ್ನೂ ವ್ಯಾಕ್ಸಿನ್ ಸಿಕ್ಕಿಲ್ಲ, 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡುವ ಕಾರ್ಯ ಸರಿಯಾಗಿ ಆರಂಭವಾಗಿಲ್ಲ. ಶಿಕ್ಷಕರಿಗೆ ವ್ಯಾಕ್ಸಿನ್ ನೀಡುತ್ತೀರಿ, ಆದರೆ ಮಕ್ಕಳಿಗೆ ವ್ಯಾಕ್ಸಿನ್ ಅಗತ್ಯವಿಲ್ಲವೇ ? ಎನ್ 95 ಮಾಸ್ಕ್ ಬಳಸಿದ ಮಾತ್ರಕ್ಕೆ ಕೊರೊನಾ ಹರಡೋಕೆ ಸಾಧ್ಯವೇ ಇಲ್ಲವೇ…? 11 ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಿದೆ. ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಾರದೆ ಪರೀಕ್ಷೆ ನಡೆಸುವ ಅಗತ್ಯವೇನಿದೆ ಅಂತಾ ಪೋಷಕರು ಪ್ರಶ್ನಿಸುತ್ತಿದ್ದಾರೆ. ಪರೀಕ್ಷೆ ನಡೆಸಲೇ ಬೇಕಾದ್ರೆ ಎಲ್ಲಾ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ಹಾಕಿಸಲಿ ಅಂತಿದ್ದಾರೆ. 

ಎಸ್ಎಸ್ಎಲ್ ಸಿಯ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಎಂದು ಘೋಷಿಸಿದ ಮೇಲೆ ಪರೀಕ್ಷೆಯ ಅಗತ್ಯವೇನಿದೆ. ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳೆದ ಎರಡು ವರ್ಷಗಳಿಂದಲೂ ಶಾಲೆಯನ್ನೇ ತೆರೆದಿಲ್ಲ. ಆದರೂ 10ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆ ಯಿಲ್ಲದೇ ಉತ್ತೀರ್ಣಗೊಳಿಸಿ ಅಂಕಗಳನ್ನೂ ನೀಡುತ್ತಿದ್ದಾರೆ. ಅದೇ ಮಾದರಿಯನ್ನೇ ರಾಜ್ಯದಲ್ಲಿಯೂ ಅಳವಡಿಸಿಕೊಳ್ಳಲಿ. ಒಂದೊಮ್ಮೆ ಪರೀಕ್ಷೆಯಿಂದ ಮಕ್ಕಳಿಗೆ ಕೊರೊನಾ ಸೋಂಕು ವ್ಯಾಪಿಸಿದ್ರೆ ಅದಕ್ಕೆ ಸಚಿವರು, ಶಿಕ್ಷಣ ಇಲಾಖೆ ಜವಾಬ್ದಾರಿಯಾಗಿರುತ್ತಾ. ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿಯೇ 24 ಮಂದಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಇದೀಗ ನಮ್ಮ ಮಕ್ಕಳ ಜೀವದ ಜೊತೆ ಚೆಲ್ಲಾಟ ವಾಡೋದು ಬೇಕಾ ಅಂತಾ ಪೋಷಕ ಸತೀಶ್ ಪ್ರಶ್ನಿಸುತ್ತಿದ್ದಾರೆ.

ಕಳೆದ ಮೂರು ತಿಂಗಳಿನಿಂದಲೂ ಎಸ್ಎಸ್ಎಲ್ ಸಿ ಪರೀಕ್ಷೆಯ ಒತ್ತಡದಲ್ಲಿದ್ದಾರೆ. ಒಂದೊಮ್ಮೆ ಸೋಂಕು ಹೆಚ್ಚಾದ್ರೆ ಪರೀಕ್ಷೆಯೇ ರದ್ದಾಗುವ ಸಾಧ್ಯತೆಯಿದೆ. ಇನ್ನೊಂದೆಡೆ ಪೋಷಕರು ಪರೀಕ್ಷೆಯನ್ನೇ ರದ್ದು ಮಾಡುವಂತೆ ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಲು ಸಜ್ಜಾಗಿದ್ದಾರೆ, ಒಂದೊಮ್ಮೆ ಒಂದಿಲ್ಲೊಂದು ಕಾರಣದಿಂದ ಪರೀಕ್ಷೆ ರದ್ದಾದ್ರೆ ಮತ್ತೆ ವಿದ್ಯಾರ್ಥಿಗಳು ಒತ್ತಡದಲ್ಲಿ ಸಿಲುಕಲಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಪರೀಕ್ಷೆ ರದ್ದಾಗಿರುವಾಗ ಶಿಕ್ಷಣ ಸಚಿವರು ಪ್ರತಿಷ್ಠೆಯನ್ನು ಕೈಬಿಟ್ಟು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಠಿಯಿಂದ ಪರೀಕ್ಷೆ ರದ್ದು ಮಾಡಬೇಕೆಂಬ ಕೂಗು ಸಾರ್ವಜನಿಕ ವಲಯದಿಂದಲೂ ಕೇಳಿಬರುತ್ತಿದೆ.

Comments are closed.