ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ: ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ
CBSE Admit Card 2026 Hall Ticket download: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSE) 2026ನೇ ಸಾಲಿನ ಹತ್ತನೇ ಮತ್ತು ಹನ್ನೆರಡನೇ ತರಗತಿಯ ವಾರ್ಷಿಕ ಪರೀಕ್ಷೆಗಳ ಪ್ರವೇಶ ಪತ್ರಗಳನ್ನು (Admit Cards) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಕುರಿತು ಸಿಬಿಎಸ್‌ಇ ತನ್ನ ಪೋರ್ಟಲ್‌ನಲ್ಲಿ ಅಧಿಕೃತ ಲಿಂಕ್ ಅನ್ನು ಸಕ್ರಿಯಗೊಳಿಸಿದ್ದು, ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳು ಈಗ ತಮ್ಮ ಪ್ರವೇಶ ಪತ್ರದ ನಿರೀಕ್ಷೆಯಲ್ಲಿದ್ದಾರೆ.
ಶಾಲೆಗಳಿಗೆ ಮಾತ್ರ ಡೌನ್‌ಲೋಡ್ ಮಾಡಲು ಅವಕಾಶ
ಈ ಬಾರಿ ಕೂಡ ವಿದ್ಯಾರ್ಥಿಗಳು ನೇರವಾಗಿ ಅಡ್ಮಿಟ್ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ಕೇವಲ ಶಾಲಾ ಆಡಳಿತ ಮಂಡಳಿಗಳಿಗೆ ಮಾತ್ರ ಮಂಡಳಿಯ ‘ಪರೀಕ್ಷಾ ಸಂಗಮ್’ ಪೋರ್ಟಲ್ ಮೂಲಕ ಪ್ರವೇಶ ಪತ್ರಗಳನ್ನು ಪಡೆಯಲು ಅನುಮತಿ ನೀಡಲಾಗಿದೆ. ಶಾಲೆಯ ಮುಖ್ಯಸ್ಥರು ತಮ್ಮ ಅಧಿಕೃತ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗ್ ಇನ್ ಆಗಿ, ಎಲ್ಲಾ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಸಹಿ ಮತ್ತು ಮುದ್ರೆ ಕಡ್ಡಾಯ
ಶಾಲೆಗಳು ಡೌನ್‌ಲೋಡ್ ಮಾಡಿದ ಪ್ರವೇಶ ಪತ್ರಗಳನ್ನು ಪ್ರಿಂಟ್ ತೆಗೆದು ವಿದ್ಯಾರ್ಥಿಗಳಿಗೆ ವಿತರಿಸಲಿವೆ. ಆದರೆ, ಪ್ರತಿಯೊಂದು ಪ್ರವೇಶ ಪತ್ರದ ಮೇಲೆ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಮತ್ತು ಶಾಲೆಯ ಅಧಿಕೃತ ಮುದ್ರೆ (Seal) ಇರುವುದು ಅತ್ಯಗತ್ಯ. ಈ ಸಹಿ ಮತ್ತು ಮುದ್ರೆ ಇಲ್ಲದ ಪ್ರವೇಶ ಪತ್ರಗಳನ್ನು ಪರೀಕ್ಷಾ ಕೇಂದ್ರದಲ್ಲಿ ಸ್ವೀಕರಿಸಲಾಗುವುದಿಲ್ಲ ಮತ್ತು ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ.
ಪರೀಕ್ಷಾ ವೇಳಾಪಟ್ಟಿ ಮತ್ತು ಕೇಂದ್ರದ ವಿವರ
2026ರ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 17 ರಿಂದ ಅಧಿಕೃತವಾಗಿ ಆರಂಭವಾಗಲಿವೆ. 10ನೇ ತರಗತಿ ಪರೀಕ್ಷೆಗಳು ಮಾರ್ಚ್ 11ರಂದು ಮುಕ್ತಾಯಗೊಳ್ಳಲಿದ್ದು, 12ನೇ ತರಗತಿ ಪರೀಕ್ಷೆಗಳು ಏಪ್ರಿಲ್ 10ರವರೆಗೆ ನಡೆಯಲಿವೆ. ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿಯ ಪರೀಕ್ಷಾ ಕೇಂದ್ರದ ಹೆಸರು, ವಿಳಾಸ ಮತ್ತು ಕೇಂದ್ರದ ಕೋಡ್ ಅನ್ನು ಸ್ಪಷ್ಟವಾಗಿ ನಮೂದಿಸಲಾಗಿರುತ್ತದೆ.
ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶಗಳು
ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ಪಡೆದ ತಕ್ಷಣ ಅದರಲ್ಲಿರುವ ತಮ್ಮ ಹೆಸರು, ರೋಲ್ ನಂಬರ್, ವಿಷಯಗಳು, ಜನ್ಮ ದಿನಾಂಕ ಮತ್ತು ಫೋಟೋ ಸರಿಯಾಗಿದೆಯೇ ಎಂದು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಪ್ರವೇಶ ಪತ್ರದಲ್ಲಿ ಯಾವುದೇ ತಪ್ಪು ಮಾಹಿತ ಕಂಡುಬಂದಲ್ಲಿ ಕೂಡಲೇ ಶಾಲೆಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬೇಕು. ಪರೀಕ್ಷಾ ದಿನದಂದು ಕಡ್ಡಾಯವಾಗಿ ಪ್ರವೇಶ ಪತ್ರದ ಮೂಲ ಪ್ರತಿಯನ್ನು ಜೊತೆಯಲ್ಲಿಟ್ಟುಕೊಳ್ಳುವುದು ಅವಶ್ಯಕ.



