ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದು, ಕೊರೊನಾದಿಂದ ನಮಗೆ ಯಾವುದೇ ತೊಂದರೆ ಇಲ್ಲಾ ಎಂದು ಖಚಿತವಾಗುವವರೆ ನಾವು ಶಾಲಾರಂಭದ ಕುರಿತು ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ, ಏಮ್ಸ್ ತಜ್ಞರು 18 ವರ್ಷದೊಳಗಿನವರು ಕೊರೊನಾ ವಿರುದ್ದ ರೋಗನಿರೋಧ ಶಕ್ತಿ ಹೊಂದಿದ್ದಾರೆ. ಹೀಗಾಗಿ ಮೂರನೇ ಅಲೆಯಿಂದ ಅಂತಹ ಸಮಸ್ಯೆಯಿಲ್ಲ ಎಂದಿದ್ದಾರೆ. ಹಾಗೆಂದ ಮಾತ್ರಕ್ಕೆ ಶಾಲೆಗಳನ್ನು ತೆರೆಯುವಂತಿಲ್ಲ. ಶಾಲೆಗಳಲ್ಲಿ ಮಕ್ಕಳ ಸಾಮಾಜಿಕ ಅಂತರ ಪಾಲನೆ ಮಾಡುವುದು ಕಷ್ಟ ಸಾಧ್ಯವಾಗಲಿದೆ. ಕೊರೊನಾ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಿಲ್ಲ ನಿಜ. ಆದ್ರೆ ನಾಳೆಯ ದಿನ ಗಾಢ ಪರಿಣಾಮ ಬೀರುವುದಿಲ್ಲ ಎನ್ನಲು ಸಾಧ್ಯವಿಲ್ಲ ಎನ್ನಲು ಯಾವುದೇ ಪುರಾವೆಗಳಿಲ್ಲ ಎಂದಿದ್ದಾರೆ.

ವಿದೇಶಗಳಲ್ಲಿ ಹೇಗೆ ಶಾಲಾರಂಭ ಮಾಡಲಾಗಿದೆ. ಮತ್ತೆ ಯಾವ ಕಾರಣಕ್ಕೆ ಶಾಲೆಯನ್ನು ಮುಚ್ಚಲಾಗಿದೆ ಅನ್ನುವ ಬಗ್ಗೆ ಗಮನ ಹರಿಸಿದ್ದೇವೆ. ನಮ್ಮ ಶಿಕ್ಷಕರು ಹಾಗೂ ಮಕ್ಕಳು ಸಂಕಷ್ಟ ಎದುರಿಸಬಾರದು. ಕೊರೊನಾದಿಂದ ಮಕ್ಕಳ ಮೇಲೆ ಉಂಟಾಗ ಬಹುದಾದ ಪರಿಣಾಮದ ಬಗ್ಗೆ ತಿಳಿದ ಬಳಿಕವೇ ಶಾಲೆ ಪುನರಾರಂಭಿಸುವ ಬಗ್ಗೆ ಯೋಜನೆ ಕೈಗೊಳ್ಳಲಾಗುವುದು ಎಂದಿದ್ದಾರೆ.

ಕೊರೊನಾ ಎರಡನೇ ಅಲೆಯ ಆರ್ಭಟದ ಹಿನ್ನೆಲೆಯಲ್ಲಿ ಈಗಾಗಲೇ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಅಲ್ಲದೇ ಹಲವು ರಾಜ್ಯಗಳು ಶಾಲಾರಂಭವನ್ನೂ ಮುಂದೂಡಿಕೆ ಮಾಡಿದ್ರೆ, ಕೆಲವು ರಾಜ್ಯಗಳಲ್ಲಿ ಕೇವಲ ಆನ್ ಲೈನ್ ಶಿಕ್ಷಣಕ್ಕೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ.