ಕಲಬುರಗಿ : ರಾಜ್ಯದಲ್ಲಿ ಶಾಲೆಗಳು ಆರಂಭವಾಗಬೇಕೇ ? ಬೇಡವೇ ಅನ್ನೋ ಕುರಿತು ಚರ್ಚೆ ನಡೆಯುತ್ತಿದೆ. ಈ ನಡುವಲ್ಲೇ ವಿದ್ಯಾಗಮ ಯೋಜನೆಯಡಿಯಲ್ಲಿ ವಠಾರ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಶಾಲೆಯ ನಾಲ್ಕು ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ಪೋಷಕರಿಗೆ ಆತಂಕ ಶುರುವಾಗಿದೆ.

ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಮಾಶಾಳದಲ್ಲಿ ಈ ಘಟನೆ ನಡೆದಿದೆ. ಸುಮಾರು 20 ದಿನಗಳ ಹಿಂದೆ ಮಾಶಾಳ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಶಾಲೆಯ 20 ಶಿಕ್ಷಕರಿಗೆ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ಶಿಕ್ಷಕರ ವರದಿ ನೆಗೆಟಿವ್ ಬಂದಿತ್ತು.
ಆದ್ರೀಗ ಶಾಲೆಯಲ್ಲಿರುವ 207 ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 4 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, 24 ವಿದ್ಯಾರ್ಥಿಗಳ ವರದಿಯನ್ನು ಕಾಯಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿ ರುವ ಬೆನ್ನಲ್ಲೇ 5 ಶಾಲೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

ವಠಾರ ಶಾಲೆಯಲ್ಲಿ ಕನಿಷ್ಠ ವಿದ್ಯಾರ್ಥಿಗಳನ್ನಿರಿಸಿಕೊಂಡು ಪಾಠ ಮಾಡಬೇಕೆಂಬ ನಿಯಮವಿದೆ. ಆದರೆ ಇಲ್ಲಿ 40ಕ್ಕೂ ಅಧಿಕ ವಿದ್ಯಾರ್ಥಿ ಗಳನ್ನು ಒಂದೆಡೆ ಸೇರಿಸಿಕೊಂಡು ಪಾಠ ಬೋಧನೆ ಮಾಡಲಾಗುತ್ತಿದೆ. ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಸೇರಿದಂತೆ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ಇರೋದು ಇದೀಗ ಕೊರೊನಾ ಸೋಂಕು ಹರಡುವಿಕೆಗೆ ಕಾರಣವಾಗಿದೆ.
ಕೊರೊನಾಸೋಂಕು ದೃಢಪಟ್ಟ ಬೆನ್ನಲ್ಲೇ 15 ದಿನಗಳ ಕಾಲ ಶಾಲೆಯನ್ನು ಮುಚ್ಚುವಂತೆ ಶಿಕ್ಷಣಾಧಿಕಾರಿಗಳು ಶಾಲಾ ಮುಖ್ಯ ಶಿಕ್ಷಕರಿಗೆ ತಿಳಿಸಿದ್ದಾರೆ. ಅಲ್ಲದೇ 20 ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಪಾಠ ಮಾಡಬೇಕೆಂದು ನಾವು ಶಿಕ್ಷಕರಿಗೆ ತಿಳಿಸಿದ್ದೇವೆ ಅಂತಾ ಹೇಳಿ ಶಿಕ್ಷಣಾಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ.

ಮಾಶಾಳದಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೋಂಕು ಇನ್ನಷ್ಟು ಮಂದಿಗೆ ವ್ಯಾಪಿಸೋ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ವಠಾರ ಶಾಲೆಯಲ್ಲಿ ಪಾಲ್ಗೊಂಡಿರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಕೊರೊನಾ ತಪಾಸಣೆಗೆ ಒಳಪಡಿಸಬೇಕೆಂದು ಪೋಷಕರು ಆಗ್ರಹಿಸುತ್ತಿದ್ದಾರೆ.