ಶಿವಮೊಗ್ಗ : ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಶಿಕ್ಷಕರ ನೇಮಕಾತಿಯ ಕುರಿತು ಕಳೆದ ಕೆಲವು ವರ್ಷಗಳಿಂದಲೂ ಆಗ್ರಹ ಕೇಳಿಬರುತ್ತಿದೆ. ಇದೀಗ ರಾಜ್ಯ ಸರಕಾರ 5 ಸಾವಿರ ಶಿಕ್ಷಕರ ನೇಮಕಾತಿಗೆ ಮುಂದಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಶಿವಮೊಗ್ಗಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ವಿಜ್ಞಾನ ಮತ್ತು ಗಣಿತ ಶಿಕ್ಷಕರ ನೇಮಕಾತಿಗೆ ತಾಂತ್ರಿಕ ತೊಡಕು ಎದುರಾಗಿದೆ. ಈ ತಾಂತ್ರಿಕ ತೊಡಕನ್ನು ನಿವಾರಣೆ ಮಾಡಿಕೊಂಡು ರಾಜ್ಯದಲ್ಲಿ ಶಿಕ್ಷಕರ ಕೊರತೆ ನೀಗಿಸುವ ಸಲುವಾಗಿ 5 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ತಡವಾಗಿ ಶಾಲೆಗಳು ಆರಂಭಗೊಂಡಿವೆ. ಮಕ್ಕಳು ಹುಮ್ಮಸ್ಸಿನಿಂದಲೇ ಶಾಲೆಗೆ ಬರುತ್ತಿದ್ದಾರೆ. ಶಾಲೆಯಲ್ಲಿ ಸಿಲೆಬಸ್ ಕಡಿತದ ಕುರಿತು ಡಿಸೆಂಬರ್ ತಿಂಗಳಲ್ಲಿ ಕ್ರಮಕೈಗೊಳ್ಳಲಾಗುತ್ತದೆ. ಈ ಕುರಿತು ತಜ್ಞರ ಸಭೆಯನ್ನು ನಡೆಸಿ, ಅಗತ್ಯ ಬಿದ್ದರೆ ಮಾತ್ರವೇ ಪಠ್ಯಕ್ರಮ ಕಡಿತಗೊಳಿಸಲಾಗುವುದು ಎಂದಿದ್ದಾರೆ.
ರಾಜ್ಯದಲ್ಲಿ ಮಕ್ಕಳಿಗೆ ಸ್ಥಳೀಯವಾಗಿ ಹಾಗೂ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದಲೇ ಗ್ರಾಮ ಪಂಚಾಯಿತಿಗೆ ಒಂದು ಮಾದರಿ ಶಾಲೆಯನ್ನು ನಿರ್ಮಿಸಲಾಗುತ್ತದೆ. ಅಲ್ಲದೇ ಸಣ್ಣ ಸಣ್ಣ ಶಾಲೆಗಳನ್ನು ವಿಲೀನ ಮಾಡುವ ಸರಕಾರದ ಮುಂದಿದೆ. ಈ ಕುರಿತು ತಜ್ಞರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.
( 5000 Teachers Recruitment: Good News for Teachers )