Massive House Fire : ಸೊಳ್ಳೆ ಕಾಯಿಲ್‌ನಿಂದ ಅಗ್ನಿದುರಂತ : ಉಸಿರುಗಟ್ಟಿ ಒಂದೇ ಕುಟುಂಬದ ನಾಲ್ವರ ದುರ್ಮರಣ

ನವದೆಹಲಿ : ಬೃಹತ್‌ ಮನೆಯೊಂದರಲ್ಲಿ ಮುಂಜಾನೆಯ ವೇಳೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ದಟ್ಟ ಹೊಗೆಯಿಂದ ಉಸಿರುಗಟ್ಟಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ದೆಹಲಿಯ ಓಲ್ಡ್‌ ಸೀಮಾಪುರ ಪ್ರದೇಶದಲ್ಲಿ ನಡೆದಿದೆ.

ಹೋರಿಲಾಲ್‌ ( 58 ವರ್ಷ), ಪತ್ನಿ ರೀನಾ ( 55 ವರ್ಷ), ಮಗ ಅಶು ( 24 ವರ್ಷ), ಮತ್ತು ಮಗಳು ರೋಹಿಣಿ (18 ವರ್ಷ ) ಎಂಬವರೇ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೂರು ಅಂತಸ್ತಿನ ಕಟ್ಟಡದಲ್ಲಿ ಮೂರನೇ ಮಹಡಿಯ ಕೊಠಡಿಯಲ್ಲಿ ನಾಲ್ವರು ಕೂಡ ಮನೆಯಲ್ಲಿ ಮಲಗಿದ್ದರು, ಮುಂಜಾನೆ 4 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ.

ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಬೆಂಕಿ ನಂದಿಸುವ ಹೊತ್ತಿಗಾಗಲೇ ನಾಲ್ವರು ಕೂಡ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಅಗ್ನಿಶಾಮಕ ಸಿಬ್ಬಂದಿಗಳು ನಾಲ್ವರ ಮೃತದೇಹಗಳನ್ನು ಕೊಠಡಿಯಿಂದ ಹೊರಗೆ ತೆಗೆದಿದ್ದಾರೆ. ಆದರೆ ಹೋರಿಲಾಲ್‌ ಹಾಗೂ ರೀನಾ ದಂಪತಿಗಳ ಮತ್ತೋರ್ವ ಮಗ ಅಕ್ಷಯ್‌ ಎರಡನೇ ಮಹಡಿಯಲ್ಲಿ ಮಲಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

ಹೋರಿಲಾಲ್ ಅವರು ಶಾಸ್ತ್ರಿ ಭವನದಲ್ಲಿ IV ವರ್ಗದ ಉದ್ಯೋಗಿಯಾಗಿದ್ದರು. ಅಲ್ಲದೇ ಮಾರ್ಚ್ 2022 ರಲ್ಲಿ ನಿವೃತ್ತರಾಗಬೇಕಿತ್ತು, ಅವರ ಪತ್ನಿ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ ನಲ್ಲಿ ಸ್ವೀಪರ್ ಆಗಿದ್ದರು. ರೋಹಿಣಿ ಸೀಮಾಪುರಿಯ ಸರ್ಕಾರಿ ಶಾಲೆಯಲ್ಲಿ 12ನೇ ತರಗತಿ ಓದುತ್ತಿದ್ದಾಗ ಅವರ ಮಗ ಆಶು ಇನ್ನೂ ಕೆಲಸ ಹುಡುಕುತ್ತಿದ್ದ. ಅಕ್ಷಯ್ ಕೂಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಸೊಳ್ಳೆ ಕಾಯಿಲ್‌ಗೆ ಬೆಂಕಿ ತಗುಲಿ ದಟ್ಟವಾದ ಹೊಗೆ ತುಂಬಿಕೊಂಡಿರುವುದು ಘಟನೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಕಂಡು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾರತೀಯ ದಂಡ ಸಂಹಿತೆಯ 436 ಮತ್ತು 304 ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಉತ್ತರ ಪ್ರದೇಶದಲ್ಲಿ ಮೀನಿನ ಮಳೆ, ಆಗಸದಿಂದ ಉದುರಿಬಿದ್ದ ಮೀನಿನ ಮರಿಗಳು

ಇದನ್ನೂ ಓದಿ : ಶಿಕ್ಷಣದ ವ್ಯವಸ್ಥೆ ಸರಿಯಿಲ್ಲ, ಅಂತ್ಯಕ್ರಿಯೆಗೆ ಬೊಮ್ಮಾಯಿ ಬರಬೇಕು : ವಿಡಿಯೋ ಮಾಡಿ ಇಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

4 Members Of Family Killed In Massive House Fire In Delhi

Comments are closed.