ಬಸ್ ಸಂಚಾರ ಆರಂಭದವರೆಗೆ ಶಿಕ್ಷಕರಿಗೆ ವರ್ಕ್ ಫ್ರಂ ಹೋಮ್ : ನಾಳೆ ಸಿಎಂ ಜೊತೆ ಚರ್ಚೆ, ಶಿಕ್ಷಕರ ನೆರವಿಗೆ ನಿಂತ ಸಿಎಸ್ ಷಡಕ್ಷರಿ

ಬೆಂಗಳೂರು : ರಾಜ್ಯದಲ್ಲಿ ಶಿಕ್ಷಕರನ್ನು ಜೂನ್ 15ರಿಂದ ಶಾಲೆಗೆ ಬರುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿರುವುದು ಸರಿಯಲ್ಲ. ಬಸ್ ಸಂಚಾರವಿಲ್ಲದೇ ಶಿಕ್ಷಕರು ಶಾಲೆಗೆ ತೆರಳಲು ಸಾಧ್ಯವೇ ಇಲ್ಲ. ಹೀಗಾಗಿ ಬಸ್ ಆರಂಭವಾಗುವವರೆಗೆ ವರ್ಕ್ ಫ್ರಂ ಹೋಮ್ ಗೆ ಆದೇಶ ಹೊರಡಿಸಬೇಕು. ಈ ಕುರಿತು ನಾಳೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಮಾಡುತ್ತೇನೆ. ಶಿಕ್ಷಕರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರು ತಿಳಿಸಿದ್ದಾರೆ.

NewsNext ಜೊತೆ ಮಾತನಾಡಿದ ಅವರು, ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಇನ್ನು ಉಳಿದ ಜಿಲ್ಲೆಗಳಲ್ಲಿ ಅನ್ ಲಾಕ್ ಜಾರಿ ಮಾಡಿದ್ದರೂ ಕೂಡ ಬಸ್ ಸೌಕರ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಶಿಕ್ಷಕರು ಶಾಲೆಗೆ ತೆರಳಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಿದೆ. ಇನ್ನು ಹಲವು ಶಿಕ್ಷಕರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಇಂತಹ ಶಿಕ್ಷಕರು ಬಸ್ ಸೌಕರ್ಯವಿಲ್ಲದೇ ಶಾಲೆಗೆ ಹಾಜರಾಗಲು ಸಾಧ್ಯವಿಲ್ಲ. ಸಮಸ್ಯೆಯ ಅರಿವಿದ್ದರೂ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿರುವುದು ಸರಿಯಲ್ಲ.

ಇನ್ನೊಂದೆಡೆ ಕೊರೊನಾ ಮೂರನೇ ಅಲೆ ಮಕ್ಕಳಿಗೆ ಅಪಾಯ ಎನ್ನುವ ಕುರಿತು ತಜ್ಞರು ಎಚ್ಚರಿಸಿದ್ದಾರೆ. ಇಂತಹ ಸ್ಥಿತಿಯಲ್ಲಿ ಬಹುತೇಕ ಶಿಕ್ಷಕರಿಗೆ ಕೊರೊನಾ ಲಸಿಕೆ ನೀಡಿಲ್ಲ. ಲಸಿಕೆ ನೀಡದೆ ಶಿಕ್ಷಕರನ್ನು ಶಾಲೆಗೆ ಕರೆಯಿಸುವುದು ಸರಿಯಲ್ಲ. ಕೊರೊನಾ ಸಂಪೂರ್ಣ ಹತೋಟಿಗೆ ಬರುವವರೆಗೂ ಮಕ್ಕಳಿಗೆ ಭೌತಿಕ ತರಗತಿಗಳ ಬದಲು ಆನ್ ಲೈನ್ ಶಿಕ್ಷಣವನ್ನು ನೀಡುವ ವ್ಯವಸ್ಥೆಯನ್ನು ಮಾಡಲಿ ಎಂದಿದ್ದಾರೆ.

ಶಿಕ್ಷಕರ ಸಮಸ್ಯೆಯ ಕುರಿತು ಸಚಿವ ಸುರೇಶ್ ಕುಮಾರ್ ಅವರ ಜೊತೆಗೆ ಚರ್ಚಿಸಿದ್ದು, ಆಯುಕ್ತರ ಜೊತೆಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದರು. ಆದ್ರೀಗ ಆಯುಕ್ತರು ಆತುರಾತುರವಾಗಿ ಶಿಕ್ಷಕರು ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆಯನ್ನು ನೀಡಿದ್ದಾರೆ. ಸಂಕಷ್ಟದಲ್ಲಿರುವ ಶಿಕ್ಷಕರು ಆತಂಕಕ್ಕೆ ಒಳಗಾಗುವುದು ಬೇಡ. ನಾಳೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಶಿಕ್ಷಕರ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುತ್ತೇವೆ. ಸಿಎಂ ಯಡಿಯೂರಪ್ಪ ಅವರು ಶಿಕ್ಷಕರ ಸಮಸ್ಯೆಗೆ ಪರಿಹಾರ ನೀಡುವ ವಿಶ್ವಾಸವಿದೆ ಎಂದಿದ್ದಾರೆ.

ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ನಡೆಸಲು ಮುಖ್ಯಶಿಕ್ಷಕರು ಮಾತ್ರವೇ ಸಾಕು. ಹೀಗಾಗಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಶಿಕ್ಷಕರು ತಮ್ಮ ಮನೆಯಿಂದಲೇ ಆನ್ ಲೈನ್ ಶಿಕ್ಷಣವನ್ನು ಬೋಧನೆ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿಯೇ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರು ಮನೆಯಿಂದಲೇ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿಕೊಡಬೇಕು. ಶಿಕ್ಷಕರ ಸಮಸ್ಯೆಯ ಪರಿಹಾರದ ಕುರಿತು ಹೋರಾಟ ನಡೆಸುತ್ತಿದ್ದೇನೆ. ಶಿಕ್ಷಕರ ಸಮಸ್ಯೆಯ ಬಗ್ಗೆ ಸಚಿವರಿಗೂ ಅರಿವಿದೆ. ಸಿಎಂ ಯಡಿಯೂರಪ್ಪ ಅವರು ಪರಿಹಾರ ಮಾಡುತ್ತಾರೆನ್ನುವ ವಿಶ್ವಾಸವಿದೆ ಎಂದಿದ್ದಾರೆ.

Comments are closed.