Lt.Soma Bangera Govt High School Kodi Kanyana : ರಜತ ಮಹೋತ್ಸವದ ಸಂಭ್ರಮದಲ್ಲಿ ಕೋಡಿ ಕನ್ಯಾನದ ಸೋಮ ಬಂಗೇರ ಸರಕಾರಿ ಪ್ರೌಢಶಾಲೆ

ಬ್ರಹ್ಮಾವರ : ಒಂದು ಕಾಲದಲ್ಲಿ ಕಡಲತಡಿಯಲ್ಲಿರುವ ಈ ಗ್ರಾಮದ ಜನರಿಗೆ ಪ್ರೌಢಶಿಕ್ಷಣ ಅನ್ನೋದು ಮರಿಚಿಕೆಯಾಗಿತ್ತು. (Lt.Soma Bangera Govt High School Kodi Kanyana) ದುಬಾರಿ ಹಣಕೊಟ್ಟು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಬಡತನ ತೊಡಕಾಗುತ್ತಿತ್ತು. ಇಂತಹ ಸಂದರ್ಭದಲ್ಲಿಯೇ ಮಕ್ಕಳ ಓದಿಗೆ ದಾರಿದೀಪವಾಗಿ ಕಂಡಿದ್ದು ಕೋಡಿ ಕನ್ಯಾನದ ಸೋಮಬಂಗೇರ ಸರಕಾರಿ ಪ್ರೌಢಶಾಲೆ. ಕಳೆದ ಇಪ್ಪತೈದು ವರ್ಷಗಳ ಹಿಂದೆ ಆರಂಭಗೊಂಡ ಶಾಲೆ ಇದೀಗ ರಜತ ಮಹೋತ್ಸವದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾನದ ಕಡಲತಡಿಯಲ್ಲಿ ದಾನಿಗಳ ನೆರವಿನೊಂದಿಗೆ ಜುಲೈ 15, 1996ರಲ್ಲಿ ಸ್ಥಾಪನೆಗೊಂಡ ಸೋಮ ಬಂಗೇರ ಸರಕಾರಿ ಪ್ರೌಢಶಾಲೆ ಇದುವರೆಗೂ ಸಾವಿರಾರು ವಿದ್ಯಾರ್ಥಿಗಳನ್ನು ಸುಸಂಸ್ಕೃತ, ವಿದ್ಯೋನ್ನತ ಘನತೆಯಿಂದ ಸಮಾಜಕ್ಕೆ ಹಾಗೂ ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಇದೀಗ ಬೆಳ್ಳಿ ಮಹೋತ್ಸವನ್ನು ಆಚರಿಸಿಕೊಳ್ಳುತ್ತಿರುವ ಸೋಮ ಬಂಗೇರ ಸರಕಾರಿ ಪ್ರೌಢಶಾಲೆ ಕೇವಲ ಶಿಕ್ಷಣವಷ್ಟೇ ಅಲ್ಲದೇ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ತೊಡಗಿಸಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಬೆಳೆಸಿದ್ದಾರೆ. ಏಳನೇ ತರಗತಿ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ದೂರದ ಪಟ್ಟಣಕ್ಕೆ ಹೋಗಿ ಖಾಸಗಿ ಶಾಲೆಗೆ ಹಣ ಕೊಟ್ಟು ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಾಗದೇ ಮೀನುಗಾರಿಕೆ, ಕೃಷಿ, ಹೋಟೆಲ್‌, ಸೇರಿದಂತೆ ಬೇರೆ ಉದ್ಯೋಗದಲ್ಲಿ ತೊಡಬೇಕಾದ ಅನಿವಾರ್ಯತೆಯ ಹೊತ್ತಲೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಂಜೀವಿನಿಯಾಗಿ ಪರಿಣಮಿಸಿದೆ.

ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮೂಲಕ ಸೋಮ ಬಂಗೇರ ಪ್ರೌಢ ಶಾಲೆ ಇಂದು ಮಾದರಿ ಶಾಲೆಯಾಗಿ ರೂಪುಗೊಂಡಿದೆ. ತೀರಾ ಹಿಂದುಳಿರುವ ಪ್ರದೇಶದಲ್ಲಿ ಶಿಕ್ಷಣದ ಕ್ರಾಂತಿಯನ್ನು ಮಾಡುವ ಮೂಲಕ ಕೋಡಿ ಕನ್ಯಾನ ಮಾತ್ರವಲ್ಲದೇ ಸುತ್ತಮುತ್ತಿನ ಗ್ರಾಮಗಳಲ್ಲಿನ ವಿದ್ಯಾರ್ಥಿಗಳು ಕೂಡ ಇಂದು ಸೋಮ ಬಂಗೇರ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಕಡಲತಡಿ ಎಂದರೆ ಪಟ್ಟಣವಲ್ಲ. ಒಂದು ಸುಂದರ ಗ್ರಾಮೀಣ ಸೊಗಡಿನ, ಹಳ್ಳಿ ಸೊಗಸಿನ ಸಾಮರಸ್ಯದ ಪರಿಸರ. ಇಲ್ಲಿ ಹುಟ್ಟಿ ಬೆಳೆದ ಬಡ, ಮಧ್ಯಮವರ್ಗದ ಕುಟುಂಬದ ವಿದ್ಯಾರ್ಥಿಗಳಿಗೆ ಈ ಶಾಲೆ ಅಕ್ಕರೆಯಿಂದ ಕರೆದು ಅಕ್ಷರದಾನ ಮಾಡಿದೆ. ಇಲ್ಲಿ ವಿದ್ಯಾಭ್ಯಾಸವನ್ನು ಪಡೆದವರು ಸಮಾಜದಲ್ಲಿ ಉತ್ತಮ ಸ್ಥಾನಮಾನದಲ್ಲಿ ಶಾಲೆಗೂ ಕೀರ್ತಿ ತಂದಿದ್ದಾರೆ. ಈ ವಿದ್ಯಾಮಂದಿರವನ್ನು ಬೆಳೆಸಿ, ಬೆಳಗಿಸಿದ ಮಹಾನ್‌ ಕರ್ತವ್ಯನಿಷ್ಠೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸರ್ವ ಶಿಕ್ಷಕರ ಪಾತ್ರ ಕೂಡ ಮಹತ್ವದ್ದು. ಪ್ರಾಮಾಣಿಕವಾಗಿ ಶಿಕ್ಷಕರು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ. ಇದೀಗ ರಜತ ಮಹೋತ್ಸವಕ್ಕೆ ಶಾಲೆಯ ಹಳೆಯ ವಿದ್ಯಾರ್ಥಿಗಳು, ಪೋಷಕರು, ಸಿಬ್ಬಂದಿಗಳು ಹಾಗೂ ಊರಿನ ಸಮಸ್ತರು ಕೂಡ ಶ್ರಮಿಸುತ್ತಿದ್ದಾರೆ.

ಡಿಸೆಂಬರ್ 3 ರಂದು ರಜತ ಮಹೋತ್ಸವ ಸಮಾರಂಭ ನಡೆಯಲಿದೆ. ಗುರು ವಂದನೆ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಸಂಜೆ 6.30ಕ್ಕೆ ನಡೆಯುವ ಗುರುವಂದನೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ.ಸುನಿಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ಎಲ್. ಭೋಜೇಗೌಡ, ತೇಜಸ್ವಿನಿ ಗೌಡ,ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭಾಕರ್ ಮೆಂಡನ್, ಜಿಲ್ಲಾಧಿಕಾರಿ ಕೂರ್ಮರಾವ್, ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಎಚ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಅಕ್ಷಯ್ ಮಚ್ಚೀಂದ್ರ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ : Azan Controversy: ಮದರ್‌ ಥೆರೆಸಾ ಶಾಲೆಯಲ್ಲಿ ಮೊಳಗಿದ ಆಝಾನ್‌; ಹಿಂದೂಪರ ಸಂಘಟನೆಗಳಿಂದ ಆಕ್ರೋಶ

ಇದನ್ನೂ ಓದಿ : Chithrapady Children Santhe : ಮಕ್ಕಳ ದಿನಾಚರಣೆ : ಚಿತ್ರಪಾಡಿ ಶಾಲೆಯಲ್ಲಿ ಗಮನ ಸೆಳೆದ ಮಕ್ಕಳ ಸಂತೆ

ಮಧ್ಯಾಹ್ನ 1 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಅಂಗನವಾಡಿ ಮತ್ತು ಶಿಶುಮಂದಿರದ ಪುಟಾಣಿಗಳಿಂದ ನೃತ್ಯವೈಭವ, ಮಧ್ಯಾಹ್ನ 3 ಗಂಟೆಯಿಂದ 4 ಗಂಟೆಯ ವರೆಗೆ ಕೋಡಿ ಕನ್ಯಾಣ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರಾಥಮಿಕ ಶಾಲೆ ಕೋಡಿ ತಲೆ ಇಲ್ಲಿನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಸಂಜೆ 4 ಗಂಟೆಯಿಂದ 6.30 ರ ವರೆಗೆ ಸೋಮ ಬಂಗೇರ ಸ್ಮಾರಕ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಯಕ್ಷಗುರು ಎಂ.ಎಚ್.ಪ್ರಸಾದ್ ಕುಮಾರ್ ಮೊಗೆಬೆಟ್ಟು ನಿರ್ದೇಶನದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ರಾತ್ರಿ 8.30 ರಿಂದ 11 ಗಂಟೆಯ ವರೆಗೆ ಕೋಡಿ ಕನ್ಯಾಣದ ಸೋಮ ಬಂಗೇರ ಸ್ಮಾರಕ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 11 ಗಂಟೆಯಿಂದ 12 ಗಂಟೆಯ ವರೆಗೆ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭಾಕರ ಮೆಂಡನ್, ಉದ್ಯಮಿ ಶಿವಣ್ಣ, ಹಳೆ ವಿದ್ಯಾರ್ಥಿ ರಾಘವೇಂದ್ರ ಕರ್ಕೇರಾ, ಸೋಮ ಬಂಗೇರ ಪದವಿಪೂರ್ವ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ರಾಘವೇಂದ್ರ ಕೆ., ಸೋಮ ಬಂಗೇರ ಸ್ಮಾರಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಾಧಿಕಾ ಮುಂತಾದವರು ಉಪಸ್ಥಿತರಿದ್ದರು.

https://www.youtube.com/watch?v=92QtgeTX168

Lt.Soma Bangera Govt High School Kodi Kanyana on Silver Jubilee celebrations

Comments are closed.