Mutual transfer of school teachers: ಅನುದಾನಿತ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆಗೆ ಅರ್ಜಿ ಆಹ್ವಾನ

ಬೆಂಗಳೂರು: (Mutual transfer of school teachers) 2023-24 ನೇ ಸಾಲಿನ ಶೈಕ್ಷಣಿಕ ಸಾಲಿನ ಅವಧಿಯಲ್ಲಿ ಖಾಸಗಿ ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಪರಸ್ಪರ ವರ್ಗಾವಣೆಗೆ ಪ್ರಸ್ತಾವನೆಯನ್ನು ಸಲ್ಲಿಸುವ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ. ಖಾಸಗಿ ಅನುದಾನಿತ ಪ್ರಾಥಮಿಕ / ಪ್ರೌಢ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಅದೇ ಆಡಳಿತ ಮಂಡಳಿಯಿಂದ ನಡೆಯುತ್ತಿರುವಂತಹ ಮತ್ತೊಂದು ಅನುದಾನಿತ ಶಾಲೆಗೆ ಅಥವಾ ಒಂದು ಆಡಳಿತ ಮಂಡಳಿಯ ಶಾಲೆಯಿಂದ ಮತ್ತೊಂದು ಆಡಳಿತ ಮಂಡಳಿಯ ಶಾಲೆಯಲ್ಲಿನ ಖಾಲಿ ಹುದ್ದೆಗಳಿಗೆ ಅನುದಾನಿತ ಶಿಕ್ಷಕರನ್ನು ಪರಸ್ಪರ ವರ್ಗಾಯಿಸಲು ಕೋರಿ ಆಡಳಿತ ಮಂಡಳಿಗಳು ಪ್ರಸ್ತಾವನೆಯನ್ನು ಸಲ್ಲಿಸಲು ಕರ್ನಾಟಕ ಶಿಕ್ಷಣ ಕಾಯಿದೆ- 1983 ರ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

2023-24 ನೇ ಶೈಕ್ಷಣಿಕ ಸಾಲಿಗೆ ಖಾಸಗಿ ಅನುದಾನಿತ ಶಾಲಾ ಆಡಳಿತ ಮಂಡಳಿಗಳು ತಮ್ಮ ಅಧೀನದಲ್ಲಿ ನಡೆಯುತ್ತಿರುವ ಶಾಲೆಗಳಲ್ಲಿನ ಶಿಕ್ಷಕರ ವರ್ಗಾವಣೆ ಪ್ರಸ್ತಾವನೆಗಳನ್ನು ಸಲ್ಲಿಸಲು ಹಾಗೂ ಪ್ರಕ್ರಿಯೆಗೊಳಿಸಲು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅದರಂತೆ ವರ್ಗಾವಣೆ ಬಯಸಿರುವ ಶಾಲೆಯಲ್ಲಿ ಮಕ್ಕಳ ಅನುಪಾತಕ್ಕೆ ಅನುಗುಣವಾಗಿ ಶಿಕ್ಷಕರ ಅವಶ್ಯಕತೆಯ ಕುರಿತು ಖಚಿತಪಡಿಸಿಕೊಂಡು ಎಲ್ಲಾ ಕ್ಷೇತ್ರದ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರುಗಳು ನಿಯಮಾನುಸಾರವಾಗಿ ಪ್ರಸ್ತಾವನೆಯನ್ನು ಪರಿಶೀಲಿಸಿ ಎಲ್ಲಾ ದಾಖಲೆಗಳನ್ನು ದೃಢಿಕರಿಸಿ ಸೂಕ್ತ ಶಿಫಾರಸ್ಸಿನೊಂದಿಗೆ ಸಲ್ಲಿಸುವಂತೆ ತಿಳಿಸಲಾಗಿದೆ.

ವರ್ಗಾವಣಾ ವೇಳಾಪಟ್ಟಿ ಈ ಕೆಳಕಂಡಂತಿವೆ ;

  1. ಆಡಳಿತ ಮಂಡಳಿಗಳು ವರ್ಗಾವಣೆ ಪ್ರಸ್ತಾವನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸುವ ಅಂತಿಮ ದಿನಾಂಕ : 21-03-2023 ರಿಂದ 31-05-2023
  2. ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಸ್ತಾವನೆ ಪರಿಶೀಲಿಸಿ ಉಪನಿರ್ದೇಶಕರುಗಳಿಗೆ ಸಲ್ಲಿಸುವ ಅಂತಿಮ ದಿನಾಂಕ : 23-03-2023 ರಿಂದ 08-06-2023
  3. ಉಪನಿರ್ದೇಶಕರು ಸೂಕ್ತ ಶಿಫಾರಸ್ಸಿನೊಂದಿಗೆ ಆಯಾ ವಿಭಾಗದ ಒಳಗೆ ಅಂದರೆ ಬೆಂಗಳೂರು/ಮೈಸೂರು ವಿಭಾಗದ ನಿರ್ದೇಶಕರು(ಪ್ರಾಥಮಿಕ/ಪ್ರೌಢ ಶಿಕ್ಷಣ) ಅದೇ ರೀತಿ ಕಲಬುರ್ಗಿ, ಧಾರವಾಡ ವಿಭಾಗದವರು ಆಯಾ ವ್ಯಾಪ್ತಿಯ ನಿರ್ದೇಶಕರು ಅಪರ ಆಯುಕ್ತರ ಕಛೇರಿಗೆ ಸಲ್ಲಿಸಲು ಕೊನೆಯ ದಿನಾಂಕ :29-03-2023 ರಿಂದ 20-06-2023
  4. ಅಂತರ ವಿಭಾಗದ ವರ್ಗಾವಣೆ ಕೋರಿ ಬಂದ ಪ್ರಸ್ತಾವನೆಗಳನ್ನು ಸಂಬಂಧಿಸಿದ ಅಪರ ಆಯುಕ್ತರ ಶಿಫಾರಸ್ಸಿನೊಂದಿಗೆ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರಿಗೆ ಸಲ್ಲಿಸುವ ಕೊನೆಯ ದಿನಾಂಕ : 30-03-2023 ರಿಂದ 22-06-2023
  5. ವರ್ಗಾವಣೆ ಕೋರಿ ಬಂದ ಪ್ರಸ್ತಾವನೆಯನ್ನು ಸಂಬಂಧಿಸಿದ ಪ್ರಾಧಿಕಾರಗಳನ್ನು ಇತ್ಯರ್ಥಪಡಿಸಲು ಕೊನೆಯ ದಿನಾಂಕ : 01-06-2023 ರಿಂದ 31-07-2023

ಅನುದಾನಿತ ಶಿಕ್ಷಕರ ವರ್ಗಾವಣಾ ಪ್ರಸ್ತಾವನೆಯಲ್ಲಿ ಕಡ್ಡಾಯಪಡಿಸಿರುವ ದಾಖಲೆಗಳು/ಷರತ್ತುಗಳು ;

  1. ವರ್ಗಾವಣೆ ಪ್ರಸ್ತಾವನೆಗಳನ್ನು ಸಲ್ಲಿಸುವಂತಹ ಸಂದರ್ಭದಲ್ಲಿ ಅನುದಾನಸಹಿತವಾಗಿ ಮಂಜೂರಾದ ಹುದ್ದೆಯ ಪ್ರತಿ, ಕರ್ತವ್ಯ ನಿರ್ವಹಿಸುತ್ತಿರುವ ವಿವರ, ಖಾಲಿ ಹುದ್ದೆ ವಿವರ ನೀಡಬೇಕು.
  2. ಎರಡೂ ಶಾಲೆಗಳಲ್ಲಿ ಎಸ್.ಎ.ಟಿ.ಎಸ್‌ ಪ್ರಕಾರ ಇರುವಂತಹ 2022-23 ನೇ ಸಾಲಿನ ಫೆಬ್ರವರಿ-2023 ರ ಅಂತ್ಯಕ್ಕೆ ಇದ್ದಂತೆ ಮಕ್ಕಳ ದಾಖಲಾತಿ-ಹಾಜರಾತಿ ಪ್ರತಿ
  3. ಪ್ರಸ್ತುತ ಹೆಚ್‌. ಆರ್‌.ಎಂ.ಎಸ್‌ ಬಿಲ್ಲಿನ ಪ್ರತಿ
  4. ಶಿಕ್ಷಕರ/ಅಂತರ್‌ ಆಡಳಿತ ಮಂಡಳಿ ವರ್ಗಾವಣೆಗಾಗಿ ಎರಡೂ ಆಡಳಿತ ಮಂಡಳಿಯವರೂ ನೀಡಿರುವ ಒಪ್ಪಿಗೆ ಪತ್ರ
  5. ಶಿಕ್ಷಕರನ್ನು ವರ್ಗಾಯಿಸಲು ಶಿಕ್ಷಕರ ಒಪ್ಪಿಗೆ ಪತ್ರ
  6. ಶಿಕ್ಷಕರ ನೇಮಕಾತಿಯನ್ನು ಅನುಮೋದಿಸಿರುವ ಪ್ರತಿ
  7. ಶಿಕ್ಷಕರನ್ನು ಶಾಲೆಯಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸುತ್ತಿದ್ದಲ್ಲಿ ಹುದ್ದೆ ತೆರವಾಗಿರುವ ಬಗ್ಗೆ ಅಗತ್ಯ ಪೂರಕ ದಾಖಲಾತಿಯ ಪ್ರತಿ
  8. ಅಂತರ ಜಿಲ್ಲಾ/ಅಂತರ್‌ ಆಡಳಿತ ಮಂಡಳಿ ವರ್ಗಾವಣೆ ಬಯಸುವಂತಹ ಶಾಲಾ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಸ್ತಾವನೆಯಲ್ಲಿ ಎಲ್ಲಾ ದಾಖಲೆಗಳನ್ನು ದೃಢೀಕರಿಸಿ ಶಿಕ್ಷಕರ ಅಗತ್ಯತೆಯ ಬಗ್ಗೆ ಸ್ಪಷ್ಟಪಡಿಸಿ ಶಿಕ್ಷಕರು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನಿರ್ದೇಶಕರಿಗೆ ಸ್ಪಷ್ಟ ಅಭಿಪ್ರಾಯದೊಂದಿಗೆ ಸಲ್ಲಿಸುವುದು.
  9. ಉಪನಿರ್ದೇಶಕರು ಪ್ರಸ್ತಾವನೆಯನ್ನು ರಾಜ್ಯ ಕಛೇರಿಗಳಿಗೆ ಸಲ್ಲಿಸುವಂತಹ ಸಂದರ್ಭದಲ್ಲಿ ಸೂಕ್ತ ಶಿಫಾರಸ್ಸಿನೊಂದಿಗೆ ಸಲ್ಲಿಸಬೇಕು.
  10. ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ನಿಯಮ 99 ರ ಅನೆಕ್ಷರ್‌ 04 ರ ಸಿಬ್ಬಂದಿ ರಚನಾ ವಿನ್ಯಾಸದ ಅನ್ವಯ ಹುದ್ದೆ ಅಗತ್ಯತೆ ಮತ್ತು ವಿಷಯ ಹೊಂದಾಣಿಕೆ ಹೊಂದಿರತಕ್ಕದ್ದು.
  11. ಎರಡೂ ಶಾಲೆಗಳ ಶಿಕ್ಷಕರ/ ಸಿಬ್ಬಂದಿಗಳ ಸೇವಾ ವಿವರ
  12. ವರ್ಗಾವಣೆ ಬಯಸುವ ಶಿಕ್ಷಕರು ಸದರಿ ಶಾಲೆಯಲ್ಲಿ ಕನಿಷ್ಟ ಸೇವಾವಧಿ ಮೂರು ವರ್ಷಗಳನ್ನು ಪೂರೈಸಿರತಕ್ಕದ್ದು, ಅದನ್ನು ಖಚಿತಪಡಿಸಿಕೊಂಡೇ ಉಪನಿರ್ದೇಶಕರು ಪ್ರಸ್ತಾವನೆಯನ್ನು ಸಲ್ಲಿಸತಕ್ಕದ್ದು.

ಇದನ್ನೂ ಓದಿ : MCC NEET PG 2023 Counselling : 50% ಅಖಿಲ ಭಾರತ ಕೋಟಾ ಪ್ರವೇಶಗಳ ಅವಲೋಕನ

Mutual transfer of school teachers: Application invitation for mutual transfer of aided school teachers

Comments are closed.