ಮುಂಬೈ : ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮೊದಲ ಹಾಗೂ ದ್ವಿತೀಯ ವರ್ಷದ ಪದವಿ ತರಗತಿಗಳಿಗೆ ಪರೀಕ್ಷೆಯಿಲ್ಲದೇ ಪಾಸ್ ಮಾಡಲು ಕೇಂದ್ರ ಸರಕಾರ ಸೂಚನೆಯನ್ನು ನೀಡಿದೆ. ಆದ್ರೆ ಇದೀಗ ಅಂತಿಮ ವರ್ಷದ ವಿದ್ಯಾರ್ಥಿಗಳನ್ನೂ ಕೂಡ ಪರೀಕ್ಷೆಯಿಲ್ಲದೇ ಕೇವಲ ಸರಾಸರಿ ಅಂಕಗಳ ಆಧಾರದ ಮೇಲೆ ಪಾಸ್ ಮಾಡಲು ಮಹಾರಾಷ್ಟ್ರ ಸರಕಾರ ತೀರ್ಮಾನಕೈಗೊಂಡಿದೆ.

ಕೊರೊನಾ ಸೊಂಕು ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸಿದ್ರೆ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುವುದರಿಂದ ಸೋಂಕು ಇನ್ನಷ್ಟು ವ್ಯಾಪಕವಾಗಿ ಹರಡುವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಬವ್ ಠಾಕ್ರೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳ ಜೊತೆ ಸಭೆ ನಡೆಸಿದ್ದರು. ಬಹುತೇಕ ವಿಶ್ವವಿದ್ಯಾಲಯಗಳ ಕುಲಪತಿಗಳು ಪರೀಕ್ಷೆಯನ್ನು ನಡೆಸದಿರುವುದೇ ಸೂಕ್ತ ಅನ್ನುವ ತೀರ್ಮಾನಕ್ಕೆ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ ಪರೀಕ್ಷೆಯಿಲ್ಲದೇ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ನಿರ್ಧಾರ ಕೈಗೊಂಡಿದೆ.