School Close : ರಾಜ್ಯದಲ್ಲಿ ಶಾಲೆ, ಕಾಲೇಜುಗಳು ಬಂದ್‌ : ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ

ಬೆಂಗಳೂರು : ಕೊರೊನಾ ಬೆನ್ನಲ್ಲೇ ರೂಪಾಂತರಿ ಓಮಿಕ್ರಾನ್‌ ಭೀತಿ ಹೆಚ್ಚುತ್ತಿದೆ. ಮಾರಣಾಂತಿಕ ಎನಿಸಿರುವ ಆಫ್ರಿಕನ್‌ ವೈರಸ್‌ ಸೋಂಕಿನ ಕುರಿತು ವಿಶ್ವದ ಹಲವು ರಾಷ್ಟ್ರಗಳು ಮುನ್ನೆಚ್ಚರಿಕೆಯನ್ನು ಕೈಗೊಂಡಿವೆ. ಇದರ ಬೆನ್ನಲ್ಲೇ ಕರ್ನಾಟಕ ಕೂಡ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಬೆಂಗಳೂರು, ಮೈಸೂರು, ಧಾರವಾಡ ಜಿಲ್ಲೆಗಳಲ್ಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದೂಡಿಕೆ ಮಾಡುವಂತೆ ಆರೋಗ್ಯ ಇಲಾಖೆ ಸೂಚೆಯನ್ನು ನೀಡಿದೆ. ಇನ್ನೊಂದೆಡೆಯಲ್ಲಿ ಕರುನಾಡು ಮತ್ತೆ ಲಾಕ್‌ ಆಗುವ ಮಾತುಗಳು ಕೇಳಿಬರುತ್ತಿದೆ. ಈ ನಡುವಲ್ಲೇ ಕರ್ನಾಟಕದ ಶಾಲೆ, ಕಾಲೇಜುಗಳಲ್ಲಿ ಸೋಂಕು ಹೆಚ್ಚುತ್ತಿದ್ದು, ಪರಿಸ್ಥಿತಿ ನೋಡಿಕೊಂಡು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಿಎಂ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಶಾಲೆ ಕಾಲೇಜುಗಳು (School Close) ಬಂದ್‌ ಆಗೋ ಸಾಧ್ಯತೆಯಿದೆ.

ಕಳೆದ ಎರಡು ವರ್ಷಗಳಿಂದಲೂ ಕೊರೊನಾ ವೈರಸ್‌ ಸೋಂಕಿನ ಹಾವಳಿಯ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ತಡವಾಗಿ ಆರಂಭಗೊಂಡಿತ್ತು. ರಾಜ್ಯ ಸರಕಾರ ಕರ್ನಾಟಕದಲ್ಲಿ ಶಾಲೆ ಹಾಗೂ ಕಾಲೇಜುಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಿದೆ. ಈ ನಡುವಲ್ಲೇ ರಾಜ್ಯದಲ್ಲಿ ಮೂರನೇ ಅಲೆಯ ಆತಂಕ ಸೃಷ್ಟಿಯಾಗಿದೆ. ಪೂರ್ವ ಪ್ರಾಥಮಿಕ ಶಾಲೆಯಿಂದ ಹಿಡಿದು ಸ್ನಾತಕೋತ್ತರ ತರಗತಿಗಳು ದಿನವಿಡಿ ನಡೆಯುತ್ತಿದೆ. ಈ ನಡುವಲ್ಲೇ ಧಾರವಾಡ, ಬೆಂಗಳೂರು, ಹಾವೇರಿ ಜಿಲ್ಲೆಗಳಲ್ಲಿನ ಶಾಲೆ, ಕಾಲೇಜುಗಳಲ್ಲಿ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿದೆ. ಅದ್ರಲ್ಲೂ ಧಾರವಾಡ ಎಸ್‌ಡಿಎಂ ಕಾಲೇಜಿನಲ್ಲಿ ಕೊರೊನಾ ಸ್ಪೋಟಗೊಂಡಿದೆ. ಈಗಾಗಲೇ ಮೂನ್ನೂರಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅಲ್ಲದೇ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳ ಕೊರೊನಾ ತಪಾಸಣಾ ವರದಿ ಇನ್ನಷ್ಟೇ ಬರಬೇಕಾಗಿದೆ. ಇದರಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಿಸುವ ಸಾಧ್ಯತೆಯಿದೆ. ಅಲ್ಲದೇ ಎಸ್‌ಡಿಎಂ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಉತ್ಸವದ ಬೆನ್ನಲ್ಲೇ ಕೊರೊನಾ ಸ್ಪೋಟಗೊಂಡಿದೆ ಎನ್ನಲಾಗುತ್ತಿದೆ.

ಒಂದೆಡೆಯಲ್ಲಿ ಆಫ್ರಿಕಾದ ರಾಷ್ಟ್ರಗಳಲ್ಲಿ ಓಮಿಕ್ರಾನ್‌ ಸೋಂಕಿನ ಆರ್ಭಟ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗುತ್ತಿದೆ. ಇನ್ನೊಂಡೆಯಲ್ಲಿ ಡೆಲ್ಟಾ ಪ್ಲಸ್‌ ಹಾಗೂ ಕೊರೊನಾ ಸೋಂಕಿನ ಆರ್ಭಟವೂ ಹೆಚ್ಚುತ್ತಿದೆ. ಈಗಾಗಲೇ ತಜ್ಞರು ರಾಜ್ಯದಲ್ಲಿ ಲಾಕ್‌ಡೌನ್‌ ಹೇರಿಕೆ ಮಾಡುವ ಕುರಿತು ಸಲಹೆಯನ್ನು ನೀಡಿದ್ದಾರೆ. ನವೆಂಬರ್‌ 30 ರಂದು ಕೋವಿಡ್‌ ತಾಂತ್ರಿಕ ಸಮಿತಿಯ ಸಭೆ ನಡೆಯಲಿದೆ. ಈಗಾಗಲೇ ಸಿಎಂ ಬಿಬಿಎಂಪಿ ಸೇರಿದಂತೆ ಕೊರೊನಾ ಆತಂಕವಿರುವ ಜಿಲ್ಲೆಗಳಲ್ಲಿನ ಅಧಿಕಾರಿಗಳ ಜೊತೆಗೆ ಸಭೆಯನ್ನು ನಡೆಸಿದ್ದಾರೆ. ಸಭೆಯ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಕುರಿತು ಸೂಚಿಸಿದ್ದಾರೆ.

ರಾಜ್ಯದಲ್ಲಿ ಇದುವರೆಗೆ ಓಮಿಕ್ರಾನ್‌ ಸೋಂಕು ಇದುವರೆಗೂ ಪತ್ತೆಯಾಗಿಲ್ಲ. ಆದರೆ ರಾಜ್ಯದಲ್ಲಿ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳಿಂದಲೂ ನಿತ್ಯವೂ ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ. ಒಂದೊಮ್ಮೆ ಆಫ್ರಿಕನ್‌ ವೈರಸ್‌ ಸೋಂಕು ರಾಜ್ಯಕ್ಕೆ ವ್ಯಾಪಿಸಿದ್ರೆ ನಿಯಂತ್ರಣ ಕಷ್ಟ ಸಾಧ್ಯ. ಇನ್ನೊಂದೆಡೆಯಲ್ಲಿ ಕೊರೊನಾ ಹಾಗೂ ಡೆಲ್ಟಾ ಪ್ಲಸ್‌ ಹಾವಳಿ ಮಿತಿಮೀರುತ್ತಿದೆ. ಹೀಗಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ತರಗತಿಗಳನ್ನು ಬಂದ್‌ (School Close) ಮಾಡುವ ಕುರಿತು ಸರಕಾರದ ವಲಯದಲ್ಲಿ ಚಿಂತನೆ ನಡೆಯುತ್ತಿದ ಎನ್ನಲಾಗುತ್ತಿದೆ.

ನರ್ಸಿಂಗ್‌ ವಿದ್ಯಾರ್ಥಿಗಳ ಮೇಲೆ ಹದ್ದಿನಕಣ್ಣು

ಎಸ್‌ಡಿಎಂ ಕಾಲೇಜಿನಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ ನರ್ಸಿಂಗ್‌ ವಿದ್ಯಾರ್ಥಿಗಳ ಮೇಲೆ ನಿಗಾ ಇರಿಸಲಾಗುತ್ತಿದೆ. ನರ್ಸಿಂಗ್‌, ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸುವಂತೆ ಈಗಾಗಲೇ ರಾಜ್ಯ ಆರೋಗ್ಯ ಇಲಾಖೆ ಸೂಚನೆಯನ್ನು ನೀಡಿದೆ. ನರ್ಸಿಂಗ್‌ ಶಿಕ್ಷಣಕ್ಕಾಗಿ ಕೇರಳದಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಹೀಗಾಗಿ ಅಂತಹ ವಿದ್ಯಾರ್ಥಿಗಳ ಮೇಲೆ ನಿಗಾ ಇರಿಸಲು ರಾಜ್ಯ ಸರಕಾರ ಸೂಚನೆ ನೀಡಿದೆ.

ರಾಜ್ಯಕ್ಕೆ ಬಂದ್ರು ಹೊರ ರಾಜ್ಯದ 293 ವಿದ್ಯಾರ್ಥಿಗಳು

ಕೇರಳ, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವವರ ಮೇಲೆ ನಿಗಾ ಇರಿಸಲಾಗುತ್ತಿದೆ. ಓಮಿಕ್ರಾನ್‌ ಭೀತಿಯ ನಡುವಲ್ಲೇ ರಾಜ್ಯಕ್ಕೆ ಹೊರ ರಾಜ್ಯಗಳಿಂದ ಬರೋಬ್ಬರಿ 293ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಹೀಗಾಗಿ ಅಂತಹ ವಿದ್ಯಾರ್ಥಿಗಳ ಕುರಿತು ಮಾಹಿತಿಯನ್ನು ಕಲೆ ಹಾಕುವ ಕಾರ್ಯವನ್ನು ರಾಜ್ಯ ಆರೋಗ್ಯ ಇಲಾಖೆ ಮಾಡುತ್ತಿದೆ. ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಿಸಲು ಮುಂದಾಗಿದೆ.

ಶಾಲೆ, ಕಾಲೇಜುಗಳಲ್ಲಿ ಕೊರೊನಾ ಪರೀಕ್ಷೆ

ರಾಜ್ಯದಲ್ಲಿ ಶಾಲೆ, ಕಾಲೇಜುಗಳು ಆರಂಭವಾಗಿದ್ದರೂ ಕೂಡ ಬಹುತೇಕ ಶಾಲೆಗಳಲ್ಲಿ ಕೊರೊನಾ ನಿಯಮವನ್ನು ಪಾಲನೆ ಮಾಡುತ್ತಿಲ್ಲ. ವಿದ್ಯಾರ್ಥಿಗಳಿಗೆ ಮಾಸ್ಕ್‌, ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಹೊರಡಿಸಿದ್ದರೂ ಕೂಡ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ, ಕೊರೊನಾ ಮಾರ್ಗಸೂಚಿಯ ಪಾಲನೆಯ ವಿಚಾರದಲ್ಲಿ ನಿರ್ಲಕ್ಷ್ಯವನ್ನು ವಹಿಸಿದೆ. ಇದೇ ಕಾರಣದಿಂದಾಗಿಯೇ ಶಾಲೆ, ಕಾಲೇಜುಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ ಅನ್ನೋ ಆರೋಪ ಕೇಳಿಬರುತ್ತಿದೆ. ರಾಜ್ಯದ ಬಹುತೇಕ ಶಾಲೆಗಳಲ್ಲಿ ಮಕ್ಕಳು ಮಾಸ್ಕ್‌ ಇಲ್ಲದೇ ಪಾಠ ಕೇಳುವಂತೆ ಖುದ್ದು ಶಿಕ್ಷಕರೇ ಹೇಳುತ್ತಿದ್ದಾರೆ. ಇದೀಗ ಎಸ್‌ಡಿಎಂ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಶಾಲೆ, ಕಾಲೇಜುಗಳಲ್ಲಿ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ನಡೆಸಲು ರಾಜ್ಯ ಸರಕಾರ ಸೂಚನೆಯನ್ನು ನೀಡಿದೆ.

ಇದನ್ನೂ ಓದಿ : ABCD ಬರೆಯಲು ಬಾರದ ಶಿಕ್ಷಕ, ಶಿಕ್ಷಕಿ ಸಸ್ಪೆಂಡ್‌ : ವಿಡಿಯೋ ವೈರಲ್‌

ಇದನ್ನೂ ಓದಿ : ಶಾಲೆ, ಕಾಲೇಜುಗಳೇ ಕೊರೊನಾ ಹಾಟ್‌ಸ್ಪಾಟ್‌ : ಚನ್ನರಾಯಪಟ್ಟಣದಲ್ಲಿ 13 ಮಕ್ಕಳಿಗೆ ಕೊರೊನಾ

ಶೈಕ್ಷಣಿಕ ಚಟುವಟಿಕೆ ಮುಂದೂಡುವಂತೆ ಆರೋಗ್ಯ ಇಲಾಖೆ ಆದೇಶ

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಬೆಂಗಳೂರು, ಮೈಸೂರು ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಮುಂದಿನ ಎರಡು ತಿಂಗಳುಗಳ ಕಾಲ ಶೈಕ್ಷಣಿಕ ಚಟುವಟಿಕೆಯನ್ನು ಮುಂದೂಡುವಂತೆ ಸೂಚನೆಯನ್ನು ನೀಡಿದೆ. ಪ್ರಮುಖವಾಗಿ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆ, ಕಾನ್ಪರೆನ್ಸ್‌, ಸೆಮಿನಾರ್‌ ಸೇರಿದಂತೆ ಯಾವುದೇ ಕಾರ್ಯಕ್ರಮವನ್ನು ಆಯೋಜನೆ ಮಾಡದಂತೆ ಸೂಚಿಸಿದೆ. ಅಲ್ಲದೇ ಶೈಕ್ಷಣಿಕ ಸಂಸ್ಥೆಗಳು 18 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಕೊರೊನಾ ಲಸಿಕೆಯನ್ನು ನೀಡುವಂತೆ ಸೂಚಿಸಿದೆ.

ಇದನ್ನೂ ಓದಿ :Omicron Karnataka : ಕರ್ನಾಟಕಕ್ಕೆ ಒಮಿಕ್ರಾನ್‌ ಭೀತಿ : ಬೆಂಗಳೂರಿಗೆ ಬಂದ ಇಬ್ಬರಿಗೆ ಕೊರೊನಾ ಸೋಂಕು ದೃಢ !

ಇದನ್ನೂ ಓದಿ : ಓಮಿಕ್ರಾನ್‌ ಭೀತಿ : ಡಿ.15ರ ನಂತರ ಕರ್ನಾಟಕ ಲಾಕ್‌ಡೌನ್‌ !

( Schools and Colleges close in Karnataka, Chief minister hinted after New Variant Omicron fear )

Comments are closed.