ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟದ ನಡುವಲ್ಲೇ ಶಾಲೆ – ಕಾಲೇಜುಗಳನ್ನು ಆರಂಭಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಆದ್ರೀಗ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆಯನ್ನು ನೀಡಿದ್ದಾರೆ.

ರಾಜ್ಯದಲ್ಲಿ ಜನಪ್ರತಿನಿಧಿಗಳು, ಶಿಕ್ಷಕರು ಈಗಾಗಲೇ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಶಾಲೆಗಳು ಆರಂಭಗೊಂಡ್ರೆ ಕೊರೊನಾ ಸೋಂಕು ತೀವ್ರ ತೆರನಾಗಿ ಹರಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವುದಕ್ಕೆ ಪರ್ಯಾಯ ಮಾರ್ಗಗಳನ್ನು ಅನುಸರಿಸುವ ಕುರಿತು ಶಿಕ್ಷಣ ತಜ್ಞರೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಶಾಲಾರಂಭದ ಕುರಿತು ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಚಿವರು ಮುಂದಾಗುತ್ತಿದ್ದಂತೆಯೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸುರೇಶ್ ಕುಮಾರ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೆಯನ್ನು ನೀಡಿದ್ದಾರೆ.

ರಾಜ್ಯದಲ್ಲಿ ಶಾಲೆ- ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಸದ್ಯಕ್ಕೆ ಶಾಲೆ – ಕಾಲೇಜುಗಳನ್ನು ಪ್ರಾರಂಭ ಮಾಡುವ ಯೋಜನೆಯು ಸರಕಾರ ಮುಂದೆ ಇಲ್ಲ. ಈ ಕುರಿತು ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಹ್ವಾನಿಸುತ್ತಿದ್ದೇನೆ. ಇದರ ಜೊತೆಗೆ ಶಿಕ್ಷಕ ಸಂಘಟನೆಗಳೊಂದಿಗೆ ಹಾಗೂ ಶಿಕ್ಷಣ ತಜ್ಞರ ಜೊತೆಗೆ ಸಂವಾದ ನಡೆಸುತ್ತಿದ್ದೇನೆ.

ನಾನು ಬೆಂಗಳೂರಿಗೆ ಬಂದ ನಂತರದಲ್ಲಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುತ್ತೇನೆ. ಮತ್ತೊಮ್ಮೆ ನಾನು ಸ್ಪಷ್ಟನೆಯನ್ನು ನೀಡುತ್ತಿದ್ದು, ನಮ್ಮ ರಾಜ್ಯದ ಶಾಲೆ – ಕಾಲೇಜು ಪ್ರಾರಂಭ ಮಾಡುವ ದಿನಾಂಕದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸುರೇಶ್ ಕುಮಾರ್ ಅವರು ಹೇಳಿದ್ದಾರೆ.