ಕೊರೊನಾ ಕರ್ತವ್ಯಕ್ಕೆ ನಿಯೋಜಿತ ಶಿಕ್ಷಕರು ವಿದ್ಯಾಗಮಕ್ಕೆ ಬಳಕೆ : ಪಾಲನೆಯಾಗುತ್ತಿಲ್ಲ ಸಾರ್ವಜನಿಕ ಶಿಕ್ಷಣ ಇಲಾಖೆಯ ಆದೇಶ ! ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ

0

ಬೆಂಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದಂತೆಯೇ ಶಿಕ್ಷಕರನ್ನು ಕೊರೊನಾ ಕಾರ್ಯಕ್ಕೆ ಬಳಕೆ ಮಾಡಲಾಗುತ್ತಿದೆ. ಸಾವಿರಾರು ಶಿಕ್ಷಕರು ರಾಜ್ಯದಾದ್ಯಂತ ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆದ್ರೆ ಕೆಲವೊಂದು ಕಡೆಗಳಲ್ಲಿ ಕೊರೊನಾ ಡ್ಯೂಟಿಯ ಜೊತೆ ಜೊತೆಗೆ ವಿದ್ಯಾಗಮ ಯೋಜನೆಗೂ ಬಳಕೆ ಮಾಡಲಾಗುತ್ತಿದೆ. ಆದರೆ ಇನ್ಮುಂದೆ ಕೊರೊನಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಶಿಕ್ಷಕರನ್ನು ವಿದ್ಯಾಗಮ ಯೋಜನೆಯ ಕಾರ್ಯಕ್ಕೆ ಬಳಕೆ ಮಾಡುವಂತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ ಸೇರಿದಂತೆ ಕೊರೊನಾ ವೈರಸ್ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಪತ್ತೆ ಕಾರ್ಯ ತಲೆನೋವಾಗಿ ಪರಿಣಮಿಸಿದೆ. ಮಾತ್ರವಲ್ಲ ಲಾಕ್ ಡೌನ್ ವೇಳೆಯಿಂದಲೂ ಚೆಕ್ ಪೋಸ್ಟ್ ಡ್ಯೂಟಿ, ಕ್ವಾರಂಟೈನ್ ಡ್ಯೂಟಿ, ಏರ್ ಪೋರ್ಟ್ ನಲ್ಲಿ ಬರುವ ಪ್ರಯಾಣಿಕರ ಮಾಹಿತಿ ಸಂಗ್ರಹ, ಹೆಲ್ತ್ ವಾಚ್, ಕೊರೊನಾ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯಕ್ಕೆ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಹಗಲಿರುಳು ಶಿಕ್ಷಕರು ಕೊರೊನಾ ವೈರಸ್ ಸೋಂಕಿನ ವಿರುದ್ದ ಹೋರಾಟವನ್ನು ನಡೆಸುತ್ತಲೇ ಇದ್ದಾರೆ. ಆದರೆ ಇಂತಹ ಶಿಕ್ಷಕರಿಗೆ ಕೆಲವೊಂದು ಕಡೆಗಳಲ್ಲಿ ವಿದ್ಯಾಗಮ ಯೋಜನೆಯ ಹೊರೆಯನ್ನೂ ಹೊರಿಸಲಾಗುತ್ತಿದೆ.

ಕೊರೊನಾ ಸಂಪರ್ಕಿತರ ಪತ್ತೆ ಕಾರ್ಯಕ್ಕೆ ನೇಮಕವಾಗಿರುವ ಶಿಕ್ಷಕರಿಗೆ ತಮ್ಮ ಮನೆ ಸಮೀಪದ ವಾರ್ಡಿನಲ್ಲಿಯೇ ಕರ್ತವ್ಯ ನಿರ್ವಹಣೆಗೆ ಅವಕಾಶ ನೀಡುವಂತೆ ಈ ಹಿಂದೆಯೇ ಸರಕಾರ ಸೂಚನೆಯನ್ನು ನೀಡಿತ್ತು. ಆದರೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ವ್ಯವಸ್ಥೆಯನ್ನು ಜಿಲ್ಲಾಡಳಿತಗಳು ಮಾಡಿಲ್ಲ.

ಅಲ್ಲದೇ ಕೊರೊನಾ ಕರ್ತವ್ಯ ನಿರ್ವಹಣೆ ಮಾಡುವ ಕೆಲ ಶಿಕ್ಷಕರಿಗೆ ವಿದ್ಯಾಗಮ ಯೋಜನೆಯ ಕಾರ್ಯ ಮಾಡುವಂತೆಯೂ ಶಿಕ್ಷಕರ ಮೇಲೆ ಒತ್ತಡವನ್ನು ಹೇರಲಾಗುತ್ತಿದೆ. ಕೊರೊನಾ ವೈರಸ್ ಸೋಂಕಿನಿಂದಾಗಿ ತತ್ತರಿಸಿ ಹೋಗಿರುವ ಶಿಕ್ಷಕರು ಇದೀಗ ಕೊರೊನಾ ಹಾಗೂ ವಿದ್ಯಾಗಮ ಯೋಜನೆಯ ಒತ್ತಡದಿಂದಾಗಿ ಬೇಸತ್ತು ಹೋಗಿದ್ದಾರೆ.

ಇದರಿಂದಾಗಿಯೇ ಸಾರ್ವಜನಿಕ ಶಿಕ್ಷಣ ಇಲಾಖೆ ಕೊರೊನಾ ಕಾರ್ಯಕ್ಕೆ ನಿಯೋಜನೆಯಾಗಿರುವ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ವಿದ್ಯಾಗಮ ಯೋಜನೆಗೆ ಬಳಸಿಕೊಳ್ಳದಂತೆ ಆದೇಶ ಹೊರಡಿಸಿದೆ. ಆದರೆ ಆದೇಶ ಹೊರಡಿಸಿ ತಿಂಗಳೇ ಕಳೆದಿದ್ದರೂ ಕೂಡ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಈ ಆದೇಶ ಪಾಲನೆಯಾಗುತ್ತಿಲ್ಲ.

ಕರಾವಳಿಯ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಕೊರೊನಾ ಸೋಂಕಿತರ ಪತ್ತೆ ಕಾರ್ಯಕ್ಕೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಆದರೆ ಕೊರೊನಾ ಕಾರ್ಯಕ್ಕೆ ನಿಯೋಜನೆಯಾಗಿರುವ ಶಿಕ್ಷಕರನ್ನು ಕೊರೊನಾ ಹಾಗೂ ವಿದ್ಯಾಗಮ ಕೆಲಸವನ್ನು ಮಾಡಿಸಲಾಗುತ್ತಿದೆ.

ಕೊರೊನಾ ಜೊತೆಗೆ ವಿದ್ಯಾಗಮ ಯೋಜನೆಯ ಕಾರ್ಯದ ಒತ್ತಡದಿಂದಾಗಿ ಕೊರೊನಾ ಸೋಂಕಿತರ ಪತ್ತೆ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ರೆಡ್ ಝೋನ್ ನಲ್ಲಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದೇ ಇದ್ರೆ ಅಪಾಯ ಎದುರಾಗೋದಂತೂ ಗ್ಯಾರಂಟಿ.

Leave A Reply

Your email address will not be published.