ಕೊರೊನಾ ನಡುವಲ್ಲೇ ಇದೆಂಥಾ ಆಘಾತ : ರಾಜ್ಯಕ್ಕೆ ಕಾಲಿಟ್ಟಿದೆ ‘ಕ್ಯಾಟ್‌ ಕ್ಯೂ’ ಹೊಸ ಚೀನಿ ವೈರಸ್ !

0

ಬೆಂಗಳೂರು : ಕೊರೊನಾ ಅನ್ನೋ ಹೆಮ್ಮಾರಿ ದೇಶವನ್ನು ತಲ್ಲಣಗೊಳಿಸಿದೆ. ಭಾರತದಲ್ಲಿ ಬರೋಬ್ಬರಿ 60 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಮಾತ್ರವಲ್ಲ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ನಡುವಲ್ಲೇ ರಾಜ್ಯ ಬೆಚ್ಚಿಬೀಳುವ ಸುದ್ದಿಯೊಂದು ಹೊರಬಿದ್ದಿದ್ದು, ಕರ್ನಾಟಕದಲ್ಲಿ ಕ್ಯಾಟ್ ಕ್ಯೂ ಅನ್ನೋ ಚೀನಿ ಹೊಸ ವೈರಸ್ ಪತ್ತೆಯಾಗಿದೆ.

ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ನಿಯಂತ್ರಣಕ್ಕೆ ಕೇಂದ್ರ, ರಾಜ್ಯ ಸರಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಕೊರೊನಾ ಸೋಂಕಿಗೆ ಇನ್ನೂ ಔಷಧಿ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಈ ನಡುವಲ್ಲೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ವಿಜ್ಞಾನಿಗಳು ನೀಡಿದ ಮಾಹಿತಿ ಪ್ರಕಾರ, ಚೀನ ದಿಂದ ‘ಕ್ಯಾಟ್‌ ಕ್ಯೂ ವೈರಸ್‌ (Cat Que Virus-CQV)’ ಭಾರತ ಪ್ರವೇಶಿಸಿದೆ. ಕರ್ನಾಟಕದಲ್ಲಿ ನಡೆಸಲಾಗಿರುವ ಎರಡು ಮಾದರಿ ಪರೀಕ್ಷೆಯಲ್ಲಿ ಇದು ದೃಢಪಟ್ಟಿದೆ.

ಸಾಮಾನ್ಯವಾಗಿ ಕ್ಯಾಟ್ ಕ್ಯೂ ವೈರಸ್ ಹಂದಿ ಹಾಗೂ ಕ್ಯೂಲೆಕ್ಸ್ ಸೊಳ್ಳೆಗಳಿಂದಲೇ ಸೋಂಕು ಹರಡುತ್ತಿದೆ. ಅಲ್ಲದೇ ಚೀನಾ ಹಾಗೂ ವಿಯೆಟ್ನಾಂಗಳಲ್ಲಿ ಹೆಚ್ಚಾಗಿ ಈ ಸೋಂಕು ಕಂಡುಬರುತ್ತಿದ್ದು, ದೇಶದಲ್ಲಿ ಇದೀಗ ಕ್ಯುಲೆಕ್ಸ್‌  ಸೊಳ್ಳೆಗಳು ಪತ್ತೆಯಾಗಿದೆ. ಮಾತ್ರವಲ್ಲ ಪೂನಾದಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ ಹಾಗೂ ಐಸಿಎಂಆರ್‌ನ ವಿಜ್ಞಾನಿಗಳು ಭಾರತದಲ್ಲಿ ಇದರ ಪ್ರತಿರೋಧಗಳ ಪತ್ತೆಗೆ ಸೆರಮ್‌ ಪರೀಕ್ಷೆ ನಡೆಸಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಕ್ಯಾಟ್ ಕೂ ವೈರಸ್  ಸೋಂಕು ಇದೀಗ ಇಬ್ಬರಲ್ಲಿ ದೃಢಪಟ್ಟಿದೆ. ಅಲ್ಲದೇ ವೈದ್ಯ ವಿಜ್ಞಾನಿಗಳು ಈಗಾಗಲೇ ಕ್ಯಾಟ್ ಕ್ಯೂ ವೈರಸ್ ಸೋಂಕಿನ ಕುರಿತು ಸಂಶೋಧನೆಯನ್ನು ನಡೆಸುತ್ತಿದ್ದಾರೆ. ದೇಶದಲ್ಲಿ ಕ್ಯಾಟ್ ಕ್ಯೂ ವೈರಸ್ ಕಾಣಿಸಿಕೊಳ್ಳುತ್ತಿದ್ದಂತೆ ಯೇ ದೇಶದ ವಿವಿಧ ರಾಜ್ಯಗಳಲ್ಲಿನ ಸುಮಾರು 88 ಮಂದಿಯ ಸರಮ್ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ.

ರಾಜ್ಯದಲ್ಲಿ ಈ ಹಿಂದೆಯೇ ಕ್ಯಾಟ್ ಕ್ಯೂ ವೈರಸ್ ಸೋಂಕು ಪತ್ತೆಯಾಗಿತ್ತು. 2014 ರಿಂದ 2017ರ ಅವಧಿಯಲ್ಲಿ ನಡೆದಿರುವ ಪರೀಕ್ಷೆಗಳಲ್ಲಿ ಕ್ಯಾಟ್ ಕ್ಯೂ ವೈರಸ್ ಪತ್ತೆಯಾಗಿತ್ತು. ಹೀಗಾಗಿ ಕೊರೊನಾ ಸೋಂಕಿಗಿಂತಲೂ ಮೊದಲೇ ರಾಜ್ಯದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರು ಕೂಡ ಅಷ್ಟಾಗಿ ಭಾರತದಲ್ಲಿ ಪ್ರಭಾವ ಬೀರಿಲ್ಲ.

ಒಂದೆಡೆ ಕೊರೊನಾ ಸೋಂಕಿನ ಆರ್ಭಟ ಹೆಚ್ಚುತ್ತಿರುವ ನಡುವಲ್ಲೇ ಇದೀಗ ಕ್ಯಾಟ್ ಕ್ಯೂ ವೈರಸ್ ಸೋಂಕು ಪತ್ತೆಯಾಗಿರುವುದು ಆತಂಕವನ್ನು ಮೂಡಿಸಿದೆ.  ಸಸ್ತನಿ, ಸೊಳ್ಳೆ ಹಾಗೂ ಹಂದಿಗಳಿಂದಾಗಿ ಈ ಸೋಂಕು ಹರಡುತ್ತಿರುವುದರಿಂದಾಗಿ ಆರೋಗ್ಯ ಇಲಾಖೆ ಕೂಡ ತಲೆ ಕೆಡಿಸಿಕೊಂಡಿದೆ. ಕ್ಯಾಟ್ ಕ್ಯೂ ಮಾನವನ ಮೇಲೆ ಯಾವ ರೀತಿಯಲ್ಲಿ ಪರಿಣಾಮವನ್ನು ಬೀರುತ್ತದೆ ಅನ್ನೋ ಬಗ್ಗೆಯೂ ಸಂಶೋಧನೆ ನಡೆಸುತ್ತಿದ್ದಾರೆ.

Leave A Reply

Your email address will not be published.