ಕುಂದಾಪುರ : ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲೆಗಳನ್ನು ತೆರೆಯುವಂತಿಲ್ಲ ಎಂದು ಸರಕಾರವೇ ಆದೇಶ ಹೊರಡಿಸಿದೆ. ಆದರೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಮಾತ್ರ ಸರಕಾರದ ಆದೇಶವನ್ನು ಗಾಳಿಗೆ ತೂರಲಾಗಿದೆ. ಅದ್ರಲ್ಲೂ ಗುಡ್ಡಟ್ಟುವಿನಲ್ಲಿರುವ ಲಿಟ್ಲ್ ಸ್ಟಾರ್ ಶಾಲೆಯಲ್ಲಿ ತರಗತಿಗಳನ್ನು ನಡೆಸೋ ಮೂಲಕ ಶಿಕ್ಷಕರು ವಿದ್ಯಾರ್ಥಿ ಗಳ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಈ ಕುರಿತು NEWS NEXT EXCLUSIVE ವರದಿ ಇಲ್ಲಿದೆ.

ಕರಾವಳಿ ಭಾಗದಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಡೇಂಜರ್ ಝೋನ್ ಜಿಲ್ಲೆಗಳ ಪಟ್ಟಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಶಿಕ್ಷಣಾಧಿಕಾರಿಗಳು ಮಾತ್ರ ವಿದ್ಯಾರ್ಥಿಗಳ ಜೀವದ ಜೊತೆಗೆ ಆಟವಾಡುತ್ತಿರೋದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಗುಡ್ಡಟ್ಟುವಿನಲ್ಲಿರುವ ಲಿಟ್ಲ್ ಸ್ಟಾರ್ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳನ್ನು ತರಗತಿಗೆ ಕರೆಯಿಸಿ ಪಾಠವನ್ನು ಬೋಧಿಸ ಲಾಗುತ್ತಿದೆ. ನಿತ್ಯವೂ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿ ಪಾಠ ಕೇಳಿಸಿಕೊಳ್ಳುತ್ತಿದ್ದಾರೆ. ಮಾಸ್ಕ್ ಬಳಕೆ ಮಾಡುತ್ತಿರೋದನ್ನು ಬಿಟ್ರೆ ವಿದ್ಯಾರ್ಥಿಗಳ ಸುರಕ್ಷತೆಗೆ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ. ಶಾಲೆಯಲ್ಲಿ ನಿತ್ಯವೂ ಪಾಠ ಬೋಧನೆ ಮಾಡಲಾಗುತ್ತಿದ್ದರೂ ಕೂಡ ತರಗತಿಗಳಿಗೆ ಸ್ಯಾನಿಟೈಸ್ ಮಾಡಿಲ್ಲ.

ಶಾಲೆಯ ಆಡಳಿತ ಮಂಡಳಿ ಕಡ್ಡಾಯವಾಗಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವಂತೆ ಕಟ್ಟಪ್ಪಣೆಯನ್ನು ಹೊರಡಿಸಿದೆ. ಹೀಗಾಗಿ ಪೋಷಕರ ವಿರೋಧವಿದ್ದರೂ ಕೂಡ ವಿದ್ಯಾರ್ಥಿಗಳು ಭಯದಲ್ಲಿಯೇ ಅನಿವಾರ್ಯವಾಗಿ ತರಗತಿಗೆ ಹಾಜರಾಗುತ್ತಿದ್ದಾರೆ. ಆದೇಶವನ್ನು ಉಲ್ಲಂಘಿಸಿ ಶಾಲೆ ನಡೆಸುತ್ತಿರೋ ಕುರಿತು ಶಾಲೆಯ ಶಿಕ್ಷಕರಲ್ಲಿ ಕೇಳಿದ್ರೆ ಶಿಕ್ಷಣಾಧಿಕಾರಿಗಳೇ ನಮಗೆ ಶಾಲೆ ನಡೆಸಲು ಅನುಮತಿ ಕೊಟ್ಟಿದ್ದಾರೆ ಅಂತಾ ಹೇಳುತ್ತಿದ್ದಾರೆ. ನಮ್ಮ ಶಾಲೆಯಷ್ಟೇ ಅಲ್ಲಾ ಕುಂದಾಪುರ ತಾಲೂಕಿನ ಹಲವು ಕಡೆಗಳಲ್ಲಿಯೂ ಶಾಲೆ ನಡೆಸಲಾಗುತ್ತಿದೆ ಎನ್ನುತ್ತಿದ್ದಾರೆ. ಆದರೆ ಶಾಲೆಯ ಕ್ರಮವನ್ನು ಪೋಷಕರು ಮಾತ್ರ ಖಂಡಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿಯೂ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯನ್ನು ಕಾಣುತ್ತಿದೆ. ಒಂದೆಡೆ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಉಡುಪಿ ಜಿಲ್ಲೆಯಲ್ಲಿನ ಬಹುತೇಕ ಶಾಲೆಗಳಲ್ಲಿ ಸರಕಾರದ ಆದೇಶವನ್ನೇ ಧಿಕ್ಕರಿಸಿ ಮಕ್ಕಳಿಗೆ ಶಾಲೆಯಲ್ಲಿಯೇ ಪಾಠ ಬೋಧನೆ ಮಾಡಲಾಗುತ್ತಿದೆ.

ಒಂದೆಡೆ ವಿದ್ಯಾಗಮ ಯೋಜನೆಯ ಮೂಲಕ ವಿದ್ಯಾರ್ಥಿಗಳನ್ನು ಸಾಮಾಜಿಕ ಅಂತರವಿಲ್ಲದೇ ಒಟ್ಟಾಗಿ ಪಾಠ ಮಾಡುವುದು ಕಂಡುಬರುತ್ತಿದೆ. ಕುಂದಾಪುರ ತಾಲೂಕಿನ ಬಹುತೇಕ ಕಡೆಗಳಲ್ಲಿ ವಿದ್ಯಾಗಮ ಹೆಸರಲ್ಲಿ 20 ರಿಂದ 30 ವಿದ್ಯಾರ್ಥಿಗಳನ್ನು ಒಟ್ಟಾಗಿ ಕೂರಿಸಿ ಪಾಠ ಮಾಡುವುದು ಕಂಡುಬರುತ್ತಿದೆ. ಇನ್ನೂ ಹಲವು ಕಡೆಗಳಲ್ಲಿ ಶಾಲೆಗಳಲ್ಲಿಯೇ ಪಾಠ ಪ್ರವಚನ ಮಾಡಲಾಗುತ್ತಿದೆ. ಶಿಕ್ಷಣಾಧಿಕಾರಿಗಳೇ ಮೌಖಿಕವಾಗಿ ಶಾಲೆಗಳನ್ನು ತೆರೆಯಲು ಅನುಮತಿಯನ್ನು ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕಾರ್ಕಳದಲ್ಲಿಯೂ ಶಿಕ್ಷಣಾಧಿಕಾರಿಗಳು ಶಾಲೆಗಳನ್ನು ತೆರೆಯುವಂತೆ ಮೌಖಿಕ ಆದೇಶ ನೀಡಿದ್ದರು. ನಂತರದಲ್ಲಿ ಶಿಕ್ಷಣಾಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಆದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ಎಚ್ಚೆತ್ತು ಕೊಂಡಿಲ್ಲ. ಇದೀಗ ಕುಂದಾಪುರ ತಾಲೂಕಿನಲ್ಲಿಯೂ ಇದೇ ಪರಿಸ್ಥಿತಿ ಎದುರಾಗಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಶಿಕ್ಷಣಾಧಿಕಾರಿ ಗಳು ವಿದ್ಯಾರ್ಥಿಗಳ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ.

ಕುಂದಾಪುರ ತಾಲೂಕಿನ ಬಹುತೇಕ ಶಾಲೆಗಳಲ್ಲಿ ಎಸ್ಎಸ್ಎಲ್ ಸಿ ತರಗತಿಗಳನ್ನು ಆರಂಭಿಸಲಾಗಿದೆ. ಎಸ್ಎಸ್ ಎಲ್ ಸಿ ಫಲಿತಾಂಶ ಕಡಿಮೆಯಾಗಬಾರದು ಅಂತಾ ಮೇಲಾಧಿಕಾರಿಗಳ ಒತ್ತಡದಿಂದಾಗಿಯೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳನ್ನು ತೆರೆಯಲು ಮೌಖಿಕ ಆದೇಶ ನೀಡಿದ್ದಾರೆ ಅಂತಾ ಹೇಳಲಾಗುತ್ತಿದೆ. ರಾಜ್ಯ ಸರಕಾರವೇ ಶಾಲೆಗಳನ್ನು ಆರಂಭಿಸೋದಿಲ್ಲಾ ಅಂತಾ ಹೇಳುತ್ತಿರುವಾಗ ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಶಾಲೆ ಆರಂಭವಾಗಿರೋದು ನಿಜಕ್ಕೂ ಆತಂಕವನ್ನು ಮೂಡಿಸುತ್ತಿದೆ.

ಅದ್ರಲ್ಲೂ ಡಿಡಿಪಿಐ ಅವರು ಕಣ್ಣಾರೆ ಕಂಡು ಸುಮ್ಮನಿದ್ದಾರೆ. ಇನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಕೂಡ ಕ್ಯಾರೇ ಅನ್ನುತ್ತಿಲ್ಲ. ಕೊರೊನಾ ಸೋಂಕು ಹರಡುತ್ತಿರುವ ಸಮಯದಲ್ಲಿ ಅಕ್ರಮವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ಶಾಲೆಗಳನ್ನು ಆರಂಭಿಸುತ್ತಿ ರೋದು ಅಪಾಯವನ್ನು ತಂದೊಡ್ಡುತ್ತಿದೆ.ಗುಡ್ಡಟ್ಟು ಶಾಲೆ ಮಾತ್ರವಲ್ಲದೇ ಜಿಲ್ಲೆಯ ಹಲವು ಕಡೆಗಳಲ್ಲಿಯೂ ತರಗತಿಗಳನ್ನು ಆರಂಭಿಸಿರುವ ಆರೋಪ ಕೇಳಿಬರುತ್ತಿದೆ. ಇನ್ನಾದ್ರೂ ಜಿಲ್ಲಾಡಳಿತ ಅಕ್ರಮವಾಗಿ ಶಾಲೆಗಳನ್ನು ಆರಂಭಿಸಿರುವವರ ವಿರುದ್ದ ಸೂಕ್ತಕ್ರಮ ಕೈಗೊಳ್ಳ ಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.