ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ 24ರಿಂದ ಆರಂಭಗೊಳ್ಳಬೇಕಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಅಲ್ಲದೇ ಪ್ರಥಮ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಿಸಿದ್ದಾರೆ.
ವಿಧಾನಸೌದದಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ನಂತರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದ್ವಿತೀಯ ಪಿಯುಸಿ ನಡೆಸುವ 15 ದಿನಗಳ ಮೊದಲು ದಿನಾಂಕವನ್ನು ಪ್ರಕಟಿಸಲಾಗುತ್ತದೆ. ಅಲ್ಲದೆ ಪ್ರಥಮ ಪಿಯು ಪರೀಕ್ಷೆಗಳನ್ನು ರದ್ದು ಮಾಡಲಾಗಿದ್ದು ಪ್ರಥಮ ಪಿಯು ವಿದ್ಯಾರ್ಥಿಗಳೆಲ್ಲರನ್ನೂ ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಮೇ 24ರಿಂದ ಜೂ.16ರವರೆಗೆ ದ್ವಿತೀಯ ಪಿಯುಸಿ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಈ ಬಾರಿ 5,92,816 ಹೊಸ ವಿದ್ಯಾರ್ಥಿಗಳು, 76,422 ಪುನರಾವರ್ತಿತ ಅಭ್ಯಗಳು ಹಾಗೂ 17,470 ಖಾಸಗಿ ಅಭ್ಯಗಳು ಸೇರಿ 68,6708 ವಿದ್ಯಾರ್ಥಿಗಳು ಪರೀಕ್ಷೆಯ ಬರೆಯಬೇಕಾಗಿತ್ತು. ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಿ ಸರ್ಕಾರ ಇದಾಗಲೇ ಆದೇಶ ಹೊರಡಿಸಿತ್ತು.
ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭಕ್ಕೆ ಮುನ್ನ ಬ್ರಿಡ್ಜ್ ಕೋರ್ಸ್ ನಡೆಸಲಾಗುತ್ತದೆ. ಅಲ್ಲದೆ ಇಲಾಖೆಯ ಯೂಟ್ಯೂಬ್ ಚಾನಲ್ ಮೂಲಕ ಇದೇ ಕೂಡಲೇ ಬ್ರಿಡ್ಜ್ ಕೋರ್ಸ್ ಲಭ್ಯವಾಗುವಂತೆ ಮಾಡಲಾಗುವುದು ಎಂದರು. ಪರೀಕ್ಷೆ ಮುಂದೂಡಿದ ಕಾರಣದಿಂದ ವಿದ್ಯಾರ್ಥಿಗಳೊಡನೆ ಸತತ ಸಂಪರ್ಕ ದಲ್ಲಿದ್ದು ಉಪನ್ಯಾಸಕರು ವರ್ಕ್ ಫ್ರಮ್ ಹೋಮ್ ನಡೆಸುವಂತೆ ಸಚಿವ ಸುರೇಶ್ ಕುಮಾರ್ ಸೂಚಿಸಿದ್ದಾರೆ.
Comments are closed.