ಬೆಂಗಳೂರು : ಕೊನೆಗೂ ರಾಜ್ಯದ ಎಸ್ಎಸ್ಎಲ್ ಸಿ ಪರೀಕ್ಷೆಗಳ ದಿನಾಂಕ ಪ್ರಕಟವಾಗಿದ್ದು, ಜೂನ್ 25 ರಿಂದ ಜುಲೈ 4 ರವರೆಗೆ ನಡೆಸಲು ದಿನಾಂಕ ಉದ್ದೇಶಿಸಲಾಗಿದೆ. ಒಟ್ಟು 10 ದಿನಗಳ ಕಾಲ ಪರೀಕ್ಷೆ ನಡೆಸಲಿದ್ದ, ಭಾಷಾ ವಿಷಯ ಹೊರತು ಪಡಿಸಿ ಉಳಿದ ವಿಷಯಗಳಿಗೆ ಒಂದೊಂದು ದಿನ ಮೀಸಲು ದಿನ ನಿಗದಿ ಪಡಿಸಲಾಗಿದೆ. ಅಲ್ಲದೇ ಜೂನ್ 18ರಂದು ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿ, ಪರೀಕ್ಷೆಗೆ ಬರುವ ಎಲ್ಲಾ ವಿದ್ಯಾರ್ಥಿಗಳಿಗೂ ಮಾಸ್ಕ್ ವಿತರಿಸಲಾಗುತ್ತದೆ. ರಾಮಕೃಷ್ಣ ಮಿಷನ್ ನಿಂದ 2 ಲಕ್ಷ ಮಾಸ್ಕ್ ಗಳ ಬಳಕೆ , ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಥರ್ಮಲ್ ಸ್ಕ್ಯಾನರ್ ಬಳಸಲಾಗುತ್ತಿದೆ. ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂಧಿಗಳು ಸ್ಯಾನಿಟೈಸರ್ ಬಳಕೆ ಮಾಡುವ ಕುರಿತು ಮಾರ್ಗದರ್ಶನ ಮಾಡಲಿದ್ದಾರೆ, ಪರೀಕ್ಷಾ ಕೇಂದ್ರಗಳಿಗೆ ಬಂದ ನಂತರ ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆಯಿದ್ದರೆ, ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಸ್ಟೇಲ್, ಸಮಾಜ ಕಲ್ಯಾಣ ಇಲಾಖೆ ಹಾಸ್ಟೇಲ್, ಮೊರಾರ್ಜಿ ದೇಸಾಯಿ ಶಾಲೆಗಳನ್ನು ಕ್ವಾರಂಟೈನ್ ಗೆ ಬಳಸಲಾಗಿದೆ. ಇಂತಹ ಕೇಂದ್ರಗಳಲ್ಲಿ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿಗಳು ಮನೆ ಸಮೀಪದ ಕೇಂದ್ರಗಳಲ್ಲಿಯೇ ಪರೀಕ್ಷೆ ಬರೆಯಬಹುದಾಗಿದೆ. ಈ ಕುರಿತು ವಿದ್ಯಾರ್ಥಿಗಳು ಮೇ 25ರ ಒಳಗಾಗಿ ತಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಬಹುದಾಗಿದೆ. ವಲಸೆ ಹೋಗಿರುವ ವಿದ್ಯಾರ್ಥಿಗಳು ಕೂಡ ತಮ್ಮ ಮನೆ ಸಮೀಪದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.