ಬೆಂಗಳೂರು : ರಾಜ್ಯದ ಕಾಲೇಜುಗಳಲ್ಲಿ ಸಮವಸ್ತ್ರದ ವಿವಾದಕ್ಕೆ ಕಾರಣವಾಗಿರುವ ಹಿಜಬ್ ಹಾಗೂ ಕೇಸರಿ ಶಾಲು ನಡುವಿನ ಜಟಾಪಟಿ ಹೈಕೋರ್ಟ್ ಮೆಟ್ಟಿಲೇರಿದೆ. ಇಂದು ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2:30ಕ್ಕೆ (High Court postponed hearing) ಮುಂದೂಡಿದೆ.
ಮತಾಂಧತೆಯ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯದ ವಿವಿಧ ಕಾಲೇಜುಗಳಲ್ಲಿ ಉಂಟಾಗಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದವು ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಶಿವಮೊಗ್ಗ, ದಾವಣಗೆರೆ ಹಾಗೂ ಉಡುಪಿ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಕಲ್ಲು ತೂರಾಟವನ್ನೂ ಮಾಡಿದ್ದಾರೆ.
ಹಿಜಬ್ ಧರಿಸಲು ಸರ್ಕಾರ ವಿಧಿಸಿರುವ ನಿರ್ಬಂಧವನ್ನು ಪ್ರಶ್ನಿಸಿ ಉಡುಪಿಯ ವಿದ್ಯಾರ್ಥಿನಿಯರು ಹಾಗೂ ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಇಂದು ಹೈಕೋರ್ಟ್ ಏಕ ಸದಸ್ಯ ಪೀಠ ಬೆಳಗ್ಗೆ 11:30ಕ್ಕೆ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಬಳಿಕ ಊಟದ ವಿರಾಮವನ್ನು ಘೋಷಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ ವಿಚಾರಣೆಯನ್ನು ಮಧ್ಯಾಹ್ನ 2:30ಕ್ಕೆ ಮುಂದೂಡಿದ್ದರು. ಊಟದ ವಿರಾಮ ಮುಗಿಯುತ್ತಿದ್ದಂತೆ ವಿಚಾರಣೆ ಮತ್ತೆ ಆರಂಭವಾಗಿತ್ತು. ಸಮವಸ್ತ್ರ ವಿವಾದ ಸಂಬಂಧ ವಾದ – ಪ್ರತಿವಾದಗಳನ್ನು ಆಲಿಸಿ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2 :30ಕ್ಕೆ ಮುಂದೂಡಿದ್ದಾರೆ.
ಈ ನಡುವೆ ಹೈಕೋರ್ಟ್ನಲ್ಲಿ ವಿಚಾರಣೆಯ ಬೆನ್ನಲ್ಲೇ ರಾಜ್ಯದ ವಿವಿಧ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ವಿವಾದ ಸಂಬಂಧ ನಡೆದ ಹೊಡೆದಾಟ ಹಾಗೂ ಕಲ್ಲು ತೂರಾಟವನ್ನು ತಪ್ಪಿಸಲು ಪೊಲೀಸರು ಅಲ್ಲಲ್ಲಿ ಲಘು ಲಾಠಿಚಾರ್ಜ್ ಮಾಡಿದ್ದಾರೆ. ರಾಜ್ಯ ಸರ್ಕಾರ ಕೂಡ ನಾಳೆಯಿಂದ ಮೂರು ದಿನಗಳ ಕಾಲ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.
The High Court postponed hearing at 2:30 pm tomorrow
