Mahabharats Bheem Praveen Kumar: ಮಹಾಭಾರತದ ಭೀಮ, ಕ್ರೀಡಾಪಟು ಪ್ರವೀಣ್‌ ಕುಮಾರ್‌ ಸೋಬ್ತಿ ನಿಧನ

1988ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಮಹಾಭಾರತ ಮೆಗಾ ಧಾರಾವಾಹಿಯಲ್ಲಿ ಭೀಮನ ಪಾತ್ರದಲ್ಲಿ ಅಭಿನಯಿಸಿದ್ದ ಮತ್ತು ಏಷ್ಯನ್‌ ಗೇಮ್ಸ್‌ನಲ್ಲಿ ಅಥ್ಲೆಟಿಕ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಕ್ರೀಡಾಪಟು 74 ವರ್ಷದ ಪ್ರವೀಣ್‌ ಕುಮಾರ್‌ ಸೋಬ್ತಿ (Mahabharats Bheem Praveen Kumar) ತೀವ್ರ ಹೃದಯಾಘಾತದಿಂದ ದೆಹಲಿಯ ಅಶೋಕ್‌ ವಿಹಾರದ ಸ್ವಗೃಹದಲ್ಲಿ ಸೋಮವಾರ ರಾತ್ರಿ ನಿಧನರಾದರು.

ಇನ್ನೇನು ಮಲಗಲು ತೆರಳುತ್ತಿದ್ದ ಅವರು 10.30ರ ಸುಮಾರಿಗೆ ಇದ್ದಕ್ಕಿದ್ದಂತೆ ಅಸ್ವಸ್ಥರಾದರು. ವೈದ್ಯರನ್ನು ಕರೆಯಿಸಿದೆವು. ಆದರೆ, ತೀವ್ರ ಹೃದಯಾಘತದಿಂದ ಕೊನೆಯುಸಿರೆಳೆದಿದ್ದಾರೆಂದು ವೈದ್ಯರು ಹೇಳಿದರು ಎಂದು ಪ್ರವೀಣ್‌ ಸಂಬಂಧಿ ತಿಳಿಸಿದ್ದಾರೆ. ಪ್ರವೀಣ್‌ಗೆ ಪತ್ನಿ, ಇಬ್ಬರು ಸೋದರರು ಮತ್ತು ಸೋದರಿ ಇದ್ದಾರೆ.

ಅನೇಕ ಕ್ರೀಡಾಕೂಟಗಳಲ್ಲಿ ಹ್ಯಾಮರ್‌, ಡಿಸ್ಕಸ್‌ ಥ್ರೋಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಅವರು, 1966 ಮತ್ತು 1970ರ ಏಷ್ಯನ್‌ ಕ್ರೀಡಾಕೂಟದಲ್ಲಿ ಎರಡು ಬಂಗಾರದ ಪದಕ ಸೇರಿ ನಾಲ್ಕು ಮೆಡಲ್‌ಗಳನ್ನು ಪಡೆದಿದ್ದರು. 1966ರ ಕಾಮನ್‌ ವೆಲ್ತ್‌ಗೇಮ್ಸ್‌ನಲ್ಲಿ ಹ್ಯಾಮರ್‌ ಥ್ರೋನಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.

1980ರ ದಶಕದ ಉತ್ತರಾರ್ಧದಲ್ಲಿ ದೂರದರ್ಶನದಲ್ಲಿ ಗಮನಸೆಳೆದ ಎರಡು ಪ್ರಮುಖ ಧಾರಾವಾಹಿಗಳು ರಮಾನಂದ ಸಾಗರ ಅವರ ರಾಮಾಯಣ ಮತ್ತು ಬಿ.ಆರ್. ಛೋಪ್ರಾ ಅವರ ಮಹಾಭಾರತ. ಇವೆರಡು ಪ್ರಸಾರವಾಗುತ್ತಿದ್ದ ಬೆಳಗ್ಗೆಯ 9ರಿಂದ ಒಂದು ತಾಸು ನಗರ, ಪಟ್ಟಣಗಳ ರಸ್ತೆಗಳು ಬಿಕೋ ಎನ್ನುತ್ತಿದ್ದವು, ಮನೆ ಮಂದಿಯಲ್ಲಾ ಟಿವಿ ಮುಂದೆ ಪ್ರತಿಷ್ಠಾಪಿತರಾಗಿರುತ್ತಿದ್ದರು. ರಾಮಾಯಣದಲ್ಲಿ ಧಾರಾ ಸಿಂಗ್‌ ಅಭಿನಯಿಸಿದ ಹನುಮಂತನ ಪಾತ್ರ ಮತ್ತು ಮಹಾಭಾರತದಲ್ಲಿ ಪ್ರವೀಣ್‌ ಕುಮಾರ್‌ ಅವರ ಭೀಮಾನ ಪತ್ರ ಮಕ್ಕಳ ಮೇಲೆ ಗಾಢ ಪ್ರಭಾವ ಬೀರಿದ್ದವು.

ಇದನ್ನೂ ಓದಿ: Cristiano Ronaldo Instagram Record: ಇನ್ಸ್ಟಾಗ್ರಾಮ್‌ನಲ್ಲಿ ಹೊಸ ದಾಖಲೆ ಬರೆದ ಫುಟ್ಬಾಲ್ ಮಾಂತ್ರಿಕ ಕ್ರಿಸ್ಟಿಯಾನೊ ರೊನಾಲ್ಡೊ!

(Mahabharats Bheem actor Praveen Kumar Sobti dies of a heart attack at 75)

Comments are closed.