Tipu Sultan : ಟಿಪ್ಪು ಮಾತ್ರವಲ್ಲ ಯಾರ ವೈಭವಿಕರಣಕ್ಕೂ ಅವಕಾಶವಿಲ್ಲ

ಬೆಂಗಳೂರು : ರಾಜ್ಯದಲ್ಲಿ ಒಂದೆಡೆ ಧರ್ಮ ಸಂಘರ್ಷ ಕೋಲಾಹಲದ ಸ್ವರೂಪ ಪಡೆದುಕೊಳ್ತಿದ್ದರೇ ಇತ್ತ ಶಾಲಾ ಪಠ್ಯ ಪುಸ್ತಕ ತಿದ್ದುಪಡಿಯೂ ಈಗ ಹೊಸ ವಿವಾದ ಸೃಷ್ಟಿಸುತ್ತಿದೆ.‌ ಟಿಪ್ಪು ಸುಲ್ತಾನ್ (Tipu Sultan) ಪಾಠವೂ ಸೇರಿದಂತೆ ಪಠ್ಯಪುಸ್ತಕದಲ್ಲಿರುವ ಅನಗತ್ಯ ವ್ಯಕ್ತಿ ವೈಭವೀಕರಣಕ್ಕೆ ಬ್ರೇಕ್ ಹಾಕುತ್ತೇವೆ ಎಂದು ಪಠ್ಯಪುಸ್ತಕ ಪರಿಷ್ಕೃತ ಸಮಿತಿ ಅಧ್ಯಕ್ಷರ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ಮತ್ತೊಂದು ವಿವಾದ ದಟ್ಟವಾಗತೊಡಗಿದೆ.

ಟಿಪ್ಪು(Tipu Sultan) ಪಾಠದ ಕಡಿತಕ್ಕೆ ಮುಸ್ಲಿಂ ಚಿಂತಕರು ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ , ಪರಿಷ್ಕರಣೆಗೆ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸ್ಪಷ್ಟನೆ ನೀಡಿದ್ದಾರೆ, ನಾವು ಅಧ್ಯಯನ ನಡೆಸಿ ಕೆಲವೊಂದಿಷ್ಟು ವೈಭವೀಕರಣವನ್ನು ಸರಿಪಡಿಸಿದ್ದೇವೆ. ಕೆಲವು ಇತಿಹಾಸಕ್ಕೆ ಆಧಾರಗಳೇ ಅಲ್ಲ, ಅಂಥವನ್ನು ತೆಗೆದು ಹಾಕಿದ್ದೇವೆ. ಕೆಲವು ಫೋಟೋ ಗಳನ್ನು ತೆಗೆದು ಹಾಕಲಾಗಿದೆ. 2015ರಲ್ಲಿ ಬರಗೂರು ರಾಮಚಂದ್ರಪ್ಪನವರು ಕೂಡ ಹೀಗೆ ಹಲವು ಫೋಟೋಗಳನ್ನು ತೆಗೆದು ಹಾಕಿದ್ದಾರೆ. ಕರ್ನಾಟಕದ ಬಗ್ಗೆ ಇದ್ದ ಪಠ್ಯದಿಂದ ಹೈ ಕೋರ್ಟ್, ವಿಶ್ವೇಶ್ವರಯ್ಯ ಮ್ಯೂಸಿಯಂ, ಲಾಲ್ ಬಾಗ್ ಚಿತ್ರಗಳನ್ನು ತೆಗೆದಿದ್ದರು ಎಂದು ವಿವರಣೆ ನೀಡಿದ್ದಾರೆ.

ಮಾತ್ರವಲ್ಲ ವಿಧಾನಸೌಧದ ಪಕ್ಕದಲ್ಲೇ ಮಸೀದಿಯ ಫೋಟೋ ಹಾಕಿ ಮುದ್ರಣ ಮಾಡಿದ್ದರು.ಈಗ ಅನಗತ್ಯ ಎಂದು ಕಂಡಿರುವ ಕೆಲವು ಫೋಟೋಗಳನ್ನು ತೆಗೆದು ಹಾಕಲಾಗಿದೆ. ಇಲ್ಲಿ ಯಾವುದೇ ಎಡ & ಬಲದ ಸೈದ್ದಾಂತಿಕತೆಯ ಪ್ರಶ್ನೆ ಇಲ್ಲ. ಸುಳ್ಳನ್ನು ತೆಗೆದು ಸುಳ್ಳನ್ನೇ ಸೇರಿಸಲು ಸಾಧ್ಯವಿಲ್ಲ. ಇತಿಹಾಸದಲ್ಲಿ ದಾಖಲಾಗಿರುವ ವಿಚಾರಗಳನ್ನು ಇದ್ದ ಹಾಗೆಯೇ ಇದೆ ಎಂದು ವಿವರಿಸಿದ್ದಾರೆ.

ಇನ್ನು ಕೇವಲ ಟಿಪ್ಪು ಸುಲ್ತಾನ್ (Tipu Sultan) ಬಗ್ಗೆ ಮಾತ್ರವಲ್ಲ, ವೈಭವೀಕರಣ ಇರುವ ಎಲ್ಲಾ ಕಡೆ ಕತ್ತರಿ ಹಾಕಿದ್ದೇವೆ ಎಂದಿರುವ ರೋಹಿತ್ ಚಕ್ರತೀರ್ಥ, 2017ರ ಪಠ್ಯದಲ್ಲಿ ಬರಗೂರು ರಾಮಚಂದ್ರಪ್ಪನವರು ತಮ್ಮ ವೈಯಕ್ತಿಕ ನಿಲುವನ್ನು ಬರೆದಿದ್ದಾರೆ. ಅದು ಇತಿಹಾಸ ಹೇಗೆ ಆಗಲು ಸಾಧ್ಯ ? ಕೆಲವೊಂದಿಷ್ಟು ವೈಭವೀಕರಣ ಏನಿದೆ ಅದನ್ನು ಕೈ ಬಿಡಲು ಶಿಫಾರಸು ಮಾಡಲಾಗಿದೆ. ನಮ್ಮ ಸಮಿತಿಯಲ್ಲಿ ಬರಗೂರು ರಾಮಚಂದ್ರಪ್ಪನವರ ಸಮಿತಿಯಲ್ಲಿದ್ದ ಜನರೂ ಇದ್ದಾರೆ. ಒಟ್ಟು 15 ಜನರನ್ನು ಒಳಗೊಂಡ ಸಮಿತಿ ನಮ್ಮದು ಇತಿಹಾಸಕಾರರು, ಪ್ರಾಧ್ಯಾಪಕರು, ಶಿಕ್ಷಕರು, ತಜ್ಞರನ್ನು ಒಳಗೊಂಡ ಸಮಿತಿ ಎಂದು ಮಾಹಿತಿ ನೀಡಿದ್ದಾರೆ.

ಮಾತ್ರವಲ್ಲ ಸಮಿತಿ ರಚನೆ ಹಾಗೂ ಪಠ್ಯಪರಿಷ್ಕರಣೆ ಬಗ್ಗೆ ಶಿಕ್ಷಣ ಸಚಿವ ಬಿ‌.ಸಿ.ನಾಗೇಶ್ ಅವರು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಿದ್ದಾರೆ. ಯಾವುದೇ ಸಿದ್ಧಾಂತಕ್ಕೆ ಬಲಿಯಾಗದೇ ಮಕ್ಕಳಿಗೆ ನೈಜ ಇತಿಹಾಸ ಬೋಧಿಸುವ ಉದ್ದೇಶದಿಂದ ಈ ತಿದ್ದುಪಡಿ ನಡೆಯಲಿದೆ ಎಂದು ರೋಹಿತ್ ಚಕ್ರತೀರ್ಥ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ : ಸಿದ್ಧಗಂಗಾಶ್ರೀಗಳಿಗೆ ಭಾರತ ರತ್ನ: ಶಾ ಭೇಟಿ ಯಿಂದ ಮತ್ತೆ ಗರಿಗೆದರಿದ ನೀರಿಕ್ಷೆ

ಇದನ್ನೂ ಓದಿ : ಏಪ್ರಿಲ್ 1 ರಿಂದ ಶಾಲೆಯಲ್ಲೇ ಕೊರೋನಾ ಲಸಿಕೆ : ಸರ್ಕಾರದ ಪರಿಷ್ಕೃತ ಸುತ್ತೂಲೆ

Tipu Sultan Text Controversy Clarification

Comments are closed.