Goolihatti Shekhar resigns : ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ ರಾಜೀನಾಮೆ: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ

ಶಿರಸಿ: (Goolihatti Shekhar resigns) ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಟಿಕೆಟ್‌ ಹಂಚಿಕೆಯ ನಡುವೆ ರಣರಂಗವೇ ಸೃಷ್ಟಿಯಾಗಿದೆ. ಟಿಕೆಟ್‌ ಹಂಚಿಕೆಯ ಬೆನ್ನಲ್ಲೇ ಬಿಜೆಪಿಯಲ್ಲಿ ಬಂಡಾಯದ ಬಾವುಟವೆದ್ದಿದೆ. ಈ ನಡುವೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ ಗುರುವಾರ ರಾತ್ರಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ನಗರದ ಸ್ಪೀಕರ್‌ ಕಾಗೇರಿ ಅವರ ಕಚೇರಿಗೆ ರಾತ್ರಿ 8 ಗಂಟೆ ಸುಮಾರಿಗೆ ಆಗಮಿಸಿದ ಗೂಳಿಹಟ್ಟಿ ಶೇಖರ್‌ ರಾಜೀನಾಮೆ ಪತ್ರ ನೀಡಿದರು

ಹೊಸದುರ್ಗ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಹಾಲಿ ಶಾಸಕ ಗೂಳಿಹಟ್ಟಿ ಶೇಖರ್ ಗೆ ಹೈಕಮಾಂಡ್ ಟಿಕೆಟ್ ನೀಡಲಿಲ್ಲ. ಬದಲಿಗೆ ಖನಿಜ ನಿಗಮದ ಅಧ್ಯಕ್ಷ ಎಸ್ ಲಿಂಗಮೂರ್ತಿ ಗೆ ಟಿಕೆಟ್ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಗೂಳಿಹಟ್ಟಿ ಅವರು ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿಸುದ್ದಿಗಾರರೊಂದಿಗೆ ಮಾತನಾಡಿ, ”ಬಿಜೆಪಿ ನನಗೆ ಸಾಕಷ್ಟು ಅವಕಾಶ ಮಾಡಿಕೊಟ್ಟಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸಹಕಾರದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲು ಅನುಕೂಲವಾಗಿದೆ. ಆದರೆ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡುವ ಇಚ್ಛೆ ಇರುವುದರಿಂದ ರಾಜೀನಾಮೆ ನೀಡುತ್ತಿದ್ದೇನೆ,” ಎಂದರು. ”ವಿವಿಧ ಪಕ್ಷಗಳ ನಾಯಕರು ನನ್ನನ್ನು ಸಂಪರ್ಕಿಸಿದ್ದಾರೆ. ಆದರೆ ಒಂದು ಹಂತದಲ್ಲಿ ಸ್ವತಂತ್ರವಾಗಿ ನಿಲ್ಲಬೇಕು ಎಂಬ ಮನಸ್ಸಿದೆ. ಆದರೆ ಚಿಹ್ನೆಯೂ ಬೇಕಾಗಿದೆ. ಈಗಾಗಲೇ ಒಮ್ಮೆ ಬೆಂಬಲಿಗರ ಸಭೆ ನಡೆಸಿದ್ದೇನೆ. ಇನ್ನೊಮ್ಮೆ ಸಭೆ ನಡೆಸಿ ಒಂದೆರಡು ದಿನದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇನೆ,” ಎಂದರು.

”2018 ರಲ್ಲಿ ಬಿಜೆಪಿ ಸೇರಿ ಅಧಿಕಾರಕ್ಕೆ ಬರಲು ನಾನು ಕಾರಣನಾಗಿದ್ದೇನೆ. ಆದರೆ ಈಗ ಟಿಕೆಟ್‌ಗೆ ಸಾಮಾಜಿಕ ನ್ಯಾಯ ಪ್ರಸ್ತಾಪ ಮಾಡಲಾಗಿದೆ. ಯಡಿಯೂರಪ್ಪ ಅವರ ಶಿಷ್ಯ ಹಾಗೂ ಅವರ ಮಗ ವಿಜಯೇಂದ್ರರ ಗೆಳೆಯಗೆ ಟಿಕೆಟ್‌ ನೀಡಿದ್ದಾರೆ. ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಯಾರನ್ನೂ ಟೀಕೆ ಮಾಡಿ ಏನು ಪ್ರಯೋಜನವಿಲ್ಲ,” ಎಂದರು. ಇನ್ನು ಈ ಕುರಿತು ತನ್ನ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಗೂಳಿಹಟ್ಟಿ ” ಜನಸೇವೆಯನ್ನೇ ಗುರಿಯನ್ನಾಗಿಸಿಕೊಂಡು ಸಮಾಜಸೇವೆಗಾಗಿ ಕಾಲಿಟ್ಟವನು ನಾನು. ಇಲ್ಲಿಯವರೆಗೂ ನನ್ನ ಸೇವಾಕಾರ್ಯಕ್ಕೆ ಬೆಂಬಲವಾಗಿ ನಿಂತಂತಹ ನನ್ನ ಹೊಸದುರ್ಗದ ಜನತೆ, ಗೂಳಿ ಅಭಿಮಾನಿ ಬಳಗ, ಬಿಜೆಪಿ ಪಕ್ಷದ ದೇಶ, ರಾಜ್ಯ, ತಾಲೂಕಿನ ಮುಖಂಡರು ಹಾಗೂ ಎಲ್ಲಾ ಬಿಜೆಪಿ ಕಾರ್ಯಕರ್ತರು ಸೇರಿದಂತೆ ನನ್ನನ್ನು ಹಾರೈಸಿದ ಎಲ್ಲಾ ಜನತೆಗೆ ಸದಾ ನಾನು ಚಿರಋಣಿ.

ನಿಮ್ಮೆಲ್ಲರ ಬೆಂಬಲ ಹಾಗೂ ಆಶಿರ್ವಾದದಿಂದ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಜನತೆಗೆ ವೈಯಕ್ತಿವಾಗಿಯೂ ಸಾಕಷ್ಟು ಸಹಾಯಮಾಡುವ ನನ್ನ ಕಾರ್ಯ ಶಕ್ತಿ ಮೀರಿ ನಿರಂತರವಾಗಿದೆ. ಆದರೂ ನನ್ನ ಇತಿಮಿಯಲ್ಲಿ ಕೆಲವೊಮ್ಮೆ ನನ್ನಿಂದ‌ ನನ್ನ ಕ್ಷೇತ್ರದ ಯಾರಿಗಾದರೂ ಅಸಮಾಧಾನ ಎದುರಾಗಿದ್ದರೆ ಅವರಲ್ಲಿ ಕ್ಷಮೆಕೋರುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಬಿಜೆಪಿಯಲ್ಲಿ ಹಾರಿದ ಬಂಡಾಯದ ಬಾವುಟ : ಹೆಚ್ಚುತ್ತಿದೆ ಕರ್ನಾಟಕ ಕುರುಕ್ಷೇತ್ರದ ಕೌತುಕತೆ

ರಾಜಿನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಾಮಾನ್ಯ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಬಿಜೆಪಿ ವಿಫಲವಾಗಿದೆ. ಹೀಗಾಗಿ ಬೇಸರದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದರು. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ಧನ ರೆಡ್ಡಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ಒಂದು ಟಿಕೆಟ್ ನೀಡಿದ್ರೆ ಆ ಪಕ್ಷದಿಂದ ಸ್ಪರ್ಧಿಸುವೆ. ಇಲ್ಲಾಂದ್ರೆ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡುವುದು ಸತ್ಯ ಎಂದು ತಿಳಿಸಿದರು. ನನ್ನನ್ನು ನಂಬಿಕೊಂಡಿರುವ ಕಾರ್ಯಕರ್ತರಿಗೆ ಅನ್ಯಾಯವಾಗಲು ಬಿಡಲಾರೆ ಎಂದು ಹೇಳಿದರು.

Goolihatti Shekhar resigns: BJP MLA Goolihatti Shekhar resigns: contest as a non-party candidate

Comments are closed.