ಬಿಜೆಪಿ ಭದ್ರಕೋಟೆ ಮಡಿಕೇರಿಯಲ್ಲಿ 50,000 ಅಧಿಕ ಮತ : ರಾಜ್ಯದಲ್ಲೇ ಅಚ್ಚರಿಯ ಫಲಿತಾಂಶ ನೀಡಿದ ಡಾ. ಮಂತರ್ ಗೌಡ

ಮಡಿಕೇರಿ: ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿತವಾಗಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ (Madikeri Assembly Constituency) ಕಳೆದ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ಸಿಗೆ ಸಿಕ್ಕಿದ ಮತಗಳು ಕೇವಲ 35,000. ಆದರೆ ಈ ಬಾರಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 84,000 ಮತಗಳನ್ನು ಪಡೆದು ಡಾ. ಮಂಥರ್ ಗೌಡ (Dr. Mantar Gowda) ವಿಜಯದ ಮಾಲೆಯನ್ನು ಕೊರಳಿಗೆ ಹಾಕಿಕೊಂಡಿದ್ದಾರೆ. ಬರೋಬ್ಬರಿ 50,000 ಗೂ ಅಧಿಕ ಮತಗಳನ್ನು ಬಿಜೆಪಿಯ ಭದ್ರಕೋಟೆಯಲ್ಲಿ ಡಾ. ಮಂತರ್ ಗೌಡ ತನ್ನ ಬುಟ್ಟಿಗೆ ಹಾಕಿಕೊಂಡಿರುವುದು ಕರಾವಳಿ- ಮಲೆನಾಡಿನ ಮುಂದೆ ದೊಡ್ಡ ಸಾಧನೆಯಾಗಿ ಗೋಚರಿಸಿದೆ.

ಪ್ರತಿಯೊಂದು ಗ್ರಾಮದ ಜನರನ್ನು ಭೇಟಿಮಾಡುವ ಮೂಲಕ ಜನರಿಗೆ ಹತ್ತಿರವಾದ ಡಾ.ಮಂತರ್ ಗೌಡ ಕೇವಲ 6 ತಿಂಗಳಿನಲ್ಲಿ ಯಾರು ಊಹಿಸದ ರೀತಿಯಲ್ಲಿ ಜನಪ್ರಿಯತೆಗಳಿಸಿದ್ದರು. ತನ್ನ ಸರಳತೆ, ಜನಸಂಪರ್ಕದ ಗುಣದಿಂದ ಕಡಿಮೆ ಅವಧಿಯಲ್ಲಿ ಜನರ ಮನವನ್ನು ಗೆದ್ದಿದ್ದರು. ಕಳೆದ ಬಾರಿ ಜೆಡಿಎಸ್ ಎರಡನೇ ಸ್ಥಾನದಲ್ಲಿತ್ತು. ಆದರೆ ತನ್ನ ಅಬ್ಬರದ ಸಾಮಾಜಿಕ ಜಾಲತಾಣದ ಪ್ರಚಾರದ ಮೂಲಕ ರಾಜ್ಯದ ಗಮನವನ್ನು ಈ ಮೊದಲೇ ಡಾ. ಮಂತರ್ ಗೌಡ ಸೆಳೆದಿದ್ದರು. ಡಾ. ಮಂತರ್ ಗೌಡ ಯೋಚನೆ-ಯೋಜನೆಯ ಅಭಿವೃದ್ಧಿಯ ಸಮೃದ್ಧ ಕೊಡಗು, ಅಭಿವೃದ್ಧಿಯ ಗಟ್ಟಿ ಧ್ವನಿ, ಅಭಿವೃದ್ಧಿ ಚಿಂತಕ, ಈ ಬಾರಿ ಮಡಿಕೇರಿಗೆ ಡಾ. ಮಂತರ್ ಗೌಡ ಎಂಬ ಪ್ರಚಾರದ ವೈಖರಿ ಬಿಜೆಪಿಯನ್ನು ದಿಗಿಲು ಮುಟ್ಟುವಂತೆ ಮಾಡಿತು. ಆರಂಭದಲ್ಲಿ ಡಾ. ಮಂತರ್ ಗೌಡ ಸಾಮಾಜಿಕ ಜಾಲತಾಣದ ಪ್ರಚಾರದ ಬಗ್ಗೆ ಬಿಜೆಪಿ ಇದರಿಂದ ತೊಂದರೆ ಇಲ್ಲ ಎಂದು ಭಾವಿಸಿ ಸುಮ್ಮನಿತ್ತು. ಕೊನೆ ಹಂತದಲ್ಲಿ ಎಚ್ಚೆತ್ತುಕೊಂಡ ಬಿಜೆಪಿ ಡಾ. ಮಂತರ್ ಗೌಡ ಪರವಾದ ಸಾಮಾಜಿಕ ಜಾಲತಾಣ ತಂತ್ರಗಾರಿಕೆ ಹಾಗೂ ಇತರ ತಂತ್ರಗಾರಿಕೆ ನಡುವೆ ಏನು ಮಾಡಲಾಗದೆ ಒದ್ದಾಡಿತು ಎಂದು ಬಿಜೆಪಿಯ ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ : ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು : ಸಿಎಂ ಬಸವರಾಜ್‌ ಬೊಮ್ಮಾಯಿ ರಾಜೀನಾಮೆ

ಕರಾವಳಿ, ಮಲೆನಾಡುಗಳಲ್ಲಿ ಬಿಜೆಪಿಯನ್ನು ತಂತ್ರಗಾರಿಕೆಯ ಮೂಲಕ ಸೋಲಿಸಬಹುದು ಎಂಬುದನ್ನು ಡಾ. ಮಂಥರ್ ಗೌಡ ತನ್ನ ತಂಡದ ತಂತ್ರಗಾರಿಕೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಡಾ. ಮಂತರ್ ಗೌಡ ಚುನಾವಣಾ ತಂತ್ರಗಾರಿಕೆ ಹಿಂದುಗಡೆ ನುರಿತ ಮಂಗಳೂರು ಮೂಲದ ಚುನಾವಣಾ ತಜ್ಞರೊಬ್ಬರು ಆರು ತಿಂಗಳಿಂದ ತನ್ನ ತಂಡ ಹಾಗೂ ಸ್ಥಳೀಯ ಕಾರ್ಯಕರ್ತರೊಂದಿಗೆ ಜೊತೆ ಸೇರಿ ಕೆಲಸ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಡಾ. ಮಂತರ್ ಗೌಡ ಪ್ರಬಲ ಬಿಜೆಪಿಯ ಸಂಘಟನಾತ್ಮಕ ನೆಲೆಯಲ್ಲಿ ಬರೋಬ್ಬರಿ 50,000 ಅಧಿಕ ಮತಗಳನ್ನು ಪಡೆದಿರುವುದು ಇಡೀ ರಾಜ್ಯದ ಗಮನ ಸೆಳೆದಿದೆ. ಕರಾವಳಿಯಲ್ಲಿ ಬಿಜೆಪಿಯ ಸಂಘಟನೆಯ ಮುಂದೆ ಒದ್ದಾಡುತ್ತಿರುವ ಕಾಂಗ್ರೆಸ್ ನಿಂದ ಭಿನ್ನವಾದ ತಂತ್ರಗಾರಿಕೆಯಿಂದ ಪ್ರಬಲ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಡಾ. ಮಂತರ್ ಗೌಡ ವಿಜಯದ ಪತಾಕೆಯನ್ನು ಹಾರಿಸಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.

Madikeri Assembly Constituency: 50,000 more votes in BJP stronghold Madikeri: Dr.Mantar Gowda gave a surprising result in the state.

Comments are closed.