ಭವಿಷ್ಯದ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ ಪ್ರಜಾಕೀಯ ಪಕ್ಷ

ಬೆಂಗಳೂರು : ಇದೇ ಬರುವ ಮೇ 10ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲ್ಲಿದ್ದು, ದೇಶ, ರಾಜ್ಯದಾದ್ಯಂತ ಪ್ರತಿ ಪಕ್ಷದಲ್ಲೂ ಚುನಾವಣೆ ಬಿಸಿ ಏರಿದೆ. ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದು, ಈಗಾಗಲೇ ಹೆಚ್ಚಿನ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲೂ ನಟ ಉಪೇಂದ್ರರಿಂದ ನಿರ್ಮಿತಗೊಂಡ ಪ್ರಜಾಕೀಯ ಪಕ್ಷದ (Prajaakeeya Party Rules) ಆಕಾಂಕ್ಷಿಗಳ ಪಟ್ಟಿ ತಯಾರಿ ನಡೆಸುತ್ತಿದ್ದು, ಅಭ್ಯರ್ಥಿಗಳ ಗಮನಕ್ಕೆ ಒಂದಷ್ಟು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟ ಉಪೇಂದ್ರ ತಮ್ಮ ಟ್ವೀಟರ್‌ ಖಾತೆಯಲ್ಲಿ, “ಆಯ್ಕೆಯಾದ ಆಕಾಂಕ್ಷಿಗಳ ಗಮನಕ್ಕೆ… 2023ನೇ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ಭಾಗವಹಿಸಲು ಇಚ್ಛಿಸಿರುವ ಆಕಾಂಕ್ಷಿಗಳ ಗಮನಕ್ಕೆ , ಮತದಾರರ ಶಿಫಾರಸ್ಸು ಪತ್ರದಲ್ಲಿರುವ ಸಹಿಗಳು, ಸಹಿ ಸಂಗ್ರಹಣೆ ಮಾಡಿತ್ತಿರುವ ಫೋಟೋ/ ವೀಡಿಯೋಗಳು, ಫೇಸ್‌ ಬುಕ್‌ನಲ್ಲಿರುವ ಪ್ರಜಾಕೀಯ ಕುರಿತಾದ ಚಟುವಟಿಕೆಗಳನ್ನು ಗಮನಿಸಿ ಮೊದಲನೇ , ಎರಡನೇ ಹಾಗೂ ಮೂರನೇ ಹಂತದಲ್ಲಿ ಅರ್ಜಿ ಸಲ್ಲಿಸಿದವರಿಗೆ ಆಯಾ ಹಂತದ ಪ್ರಕಾರ ಪ್ರಾಧಾನ್ಯತೆ ನೀಡಿ ಆಯ್ಕೆಯಾದ ಆಕಾಂಕ್ಷಿಗಳನ್ನು ಪರಿಗಣಿಸಲಾಗಿದೆ.

ಉತ್ತಮ ಪ್ರಜಾಕೀಯ ಪಕ್ಷದ ಸಿದ್ಧಾಂತಗಳು, ಸೂಚನೆಗಳು ಮತ್ತು ಪ್ರಕಟಣೆಗೊಂಡಿರುವ ಮಾಹಿತಿಗಳನ್ನು ಕಟ್ಟುನಿಟ್ಟಾಗಿ ಎಲ್ಲಾ ಆಯ್ಕೆಯಾದ ಆಕಾಂಕ್ಷಿಗಳು ಪಾಲಿಸಬೇಕು.. ಇಲ್ಲವಾದಲ್ಲಿ ನೇರವಾಗಿ ಅಂತಹ ಆಕಾಂಕ್ಷಿಗಳನ್ನು ಡಿಸ್ಕ್ವಾಲಿಫೈ ಮಾಡಲಾಗುವುದು/ಅನುರ್ಜಿತ/ ಅನರ್ಹಗೊಳಿಸಲಾಗುವುದು. ಸಂಬಳ ಪಡೆದು ಕೆಲಸ ಮಾಡುವ ಕಾರ್ಮಿಕರ ಹುಡುಕಾಟದಲ್ಲಿ ಪಾರದರ್ಶಕವಾಗಿ ನಡೆದಿರುವ 2023ನೇ ಸಾಲಿನ ಕರ್ನಾಟಕ ವಿಧಾನಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯ ಕುರಿತು ಯಾವುದೇ ಆಯ್ಕೆಯಾದ ಆಕಾಂಕ್ಷಿಗಳು ವದಂತಿಗಳನ್ನು ಹಬ್ಬಿಸುವುದು, ರಾಜಕೀಯ ಪ್ರೇರಿತವಾಗಿ ವರ್ತಿಸುವುದು, ಗೊಂದಲವನ್ನುಂಟು ಮಾಡುವುದು, ಪ್ರಜಾಕೀಯ ಸಿದ್ಧಾಂತಕ್ಕೆ ದಕ್ಕೆಯುಂಟು ಮಾಡುವಂತಹ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಕಂಡು ಬಂದಲ್ಲಿ ಅಂತಹ ಆಕಾಂಕ್ಷಿಗಳನ್ನು ನೇರವಾಗಿ ಅನರ್ಹಗೊಳಿಸಲಾಗುವುದು” ಎಂದು ಸುದೀರ್ಘವಾಗಿ ಬರೆದು ನಟ ಉಪೇಂದ್ರ ಆಕಾಂಕ್ಷಿಗಳಿಗೆ ಗಮನಕ್ಕೆ ತಂದಿದ್ದಾರೆ.

2018 ಮಾರ್ಚ್ ನಲ್ಲಿ ಪ್ರಜಾಕೀಯ ಪಕ್ಷ ಸ್ಥಾಪಿಸಿ ರಾಜಕೀಯವಾಗಿಯೂ ಸಕ್ರಿಯವಾಗಿದ್ದಾರೆ. ಮುಂಬರುವ 2023ನೇ ಸಾಲಿನ ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯಲು ಅರ್ಜಿಗಳನ್ನು ಸಲ್ಲಿಸಲು ಈ ಹಿಂದೆ ಫೆಬ್ರವರಿ 28 ಕೊನೆಯ ದಿನಾಂಕವೆಂದು ನಿಗದಿಪಡಿಸಲಾಗಿತ್ತು. ಆದರೆ ಹಲವಾರು ಆಕಾಂಕ್ಷಿಗಳು ಪ್ರತಿದಿನ ಅರ್ಜಿಗಳನ್ನು ಸಲ್ಲಿಸುತ್ತಿದ್ದು, ಮಾರ್ಚ್ 25 ರ ವರೆಗೆ ಹೆಚ್ಚಿನ ಕಾಲಾವಕಾಶವನ್ನು ನೀಡಲಾಗಿದೆ. ಮಾರ್ಚ್‌ 25, 2023 ರ ವರೆಗೆ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಏಪ್ರಿಲ್ ಎರಡನೇ ವಾರದಲ್ಲಿ ಆಯ್ಕೆಯಾದ ಆಕಾಂಕ್ಷಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಶಿಗ್ಗಾಂವಿ, ಚನ್ನಗಿರಿ, ಚಿಕ್ಕಬಳ್ಳಾಪುರ : ಸಿಎಂ ಬಸವರಾಜ್ ಬೊಮ್ಮಾಯಿಗೆ ಬಿಜೆಪಿಯಲ್ಲಿ ಭರ್ಜರಿ ಆಫರ್

ಉತ್ತಮ ಪ್ರಜಾಕೀಯ ಪಕ್ಷವು ಮತದಾರರ ಪಕ್ಷವಾಗಿರುವುದರಿಂದ ಇಲ್ಲಿ ಮತದಾರರೇ ನಾಯಕರು. ಉತ್ತಮ ಪ್ರಜಾಕೀಯ ಪಕ್ಷದಲ್ಲಿ ನಾಯಕತ್ವದ ಸಂಸ್ಕೃತಿ ಇರುವುದಿಲ್ಲ. ನಮಗೆ ಬೇಕಿರುವುದು ಪ್ರಜೆಗಳಾದ ನಾವು ಹೇಳಿದಂತೆ ಕೆಲಸ ಮಾಡುವಂತಹ ಉತ್ತಮ ಕಾರ್ಮಿಕರು. ಇಲ್ಲಿ ನಮಗೆ ಬೇಕಿರುವುದು ಕಾಯಕತ್ವದ ಸಂಸ್ಕೃತಿ ಎಂದು ಹೇಳಿದ್ದಾರೆ. ತಮ್ಮದೇ ಆದ ವಿಶೇಷ ನಿಲುವುವನ್ನು ಹೊಂದಿರುವ ಇವರು ರಾಜಕೀಯ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರುತ್ತಾರೆ ಎನ್ನುವುದು ಸಾಕಷ್ಟು ಜನರ ಅಭಿಪ್ರಾಯವಾಗಿದೆ. ಯಾವುದೇ ಹೆಚ್ಚಿನ ಪ್ರಚಾರವಿಲ್ಲದೇ, ಯಾವುದೇ ಖರ್ಚು ಇಲ್ಲದೇ ಒಬ್ಬ ಪೂರ್ಣ ಪ್ರಮಾಣದ ನಾಯಕ ದೇಶದ ಜನತೆಗಾಗಿ ಕೆಲಸ ಮಾಡಬೇಕು ಎನ್ನುವುದು ಎಲ್ಲರಿಗೂ ಇಷ್ಟವಾಗುವಂತಹ ವಿಚಾರವಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗಲಿದೆ ಎನ್ನುವುದು ಎಲ್ಲರ ಕುತೂಹಲವಾಗಿದೆ.

Prajaakeeya Party Rules : Prajaakeeya Party which laid a solid foundation for future democracy

Comments are closed.