ಅಧಿಕಾರಕ್ಕೆ ಬಂದರೆ ಕೆಎಂಎಫ್‌ ಉನ್ನತೀಕರಣಕ್ಕೆ ಆದ್ಯತೆ : ಕಾಂಗ್ರೆಸ್‌ ಹೊಸ ಭರವಸೆ

ಬೆಂಗಳೂರು : (Congress New Guarantee) ರಾಜ್ಯದಲ್ಲಿ ಚುನಾವಣೆ ರಂಗೇರುತ್ತಿದ್ದು, ಈ ನಡುವಲ್ಲೆ ಅಮುಲ್‌ ಹಾಗೂ ನಂದಿನಿ ಹಾಲಿನ ವಿಚಾರದಲ್ಲಿ ರಣರಂಗವೇ ಸೃಷ್ಟಿಯಾಗಿದೆ. ಕೆಲವು ದಿನಗಳಿಂದ ರಾಜಕೀಯ ಸ್ವರೂಪ ಪಡೆದುಕೊಂಡಿರುವ ಅಮುಲ್‌, ನಂದಿನಿ ವಿವಾದ ಇದೀಗ ಚುನಾವಣೆವರೆಗೂ ಬಂದು ನಿಂತಿದೆ. ಈಗಾಗಲೇ ಬಿಜೆಪಿ ಮೇಲೆ ಅಪವಾದಗಳ ಸುರಿಮಳೆಯನ್ನೇ ಸುರಿಸಿರುವ ಕಾಂಗ್ರೆಸ್‌ ನಾಡಿನ ಜನತೆಗೆ ಹೊಸ ಭರವಸೆಗಳನ್ನು ನೀಡುವುದರ ಮೂಲಕ ಚುನಾವಣೆಯಲ್ಲಿ ಗೆಲ್ಲುವ ಹುನ್ನಾರ ನಡೆಸುತ್ತಿದೆ. ಅಮುಲ್‌ ನಂದಿನಿ ವಿಚಾರವನ್ನೆ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್‌ ಚುನಾವಣೆಯಲ್ಲಿ ಗೆಲ್ಲಲು ಹೊರಟಿದೆ.

ಒಂದು ಕಡೆ ಕರ್ನಾಟಕದಾದ್ಯಂತ ಚುನಾವಣೆ ಬಿಸಿ ಏರಿದ್ದು, ಈ ಹೊತ್ತಲ್ಲೇ ರಾಜ್ಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೇವ್‌ ನಂದಿನಿ, ಗೋ ಬ್ಯಾಕ್‌ ಅಮುಲ್‌ ಅಭಿಯಾನ ಜೋರಾಗಿದೆ. ಗುಜರಾತ್‌ ಮೂಲದ ಅಮುಲ್‌ ಕರ್ನಾಟಕದ ಮಾರುಕಟ್ಟೆಯನ್ನು ಆಳಲಿದೆ ಅನ್ನೋ ಮಾತುಗಳು ಇದೀಗ ರಾಜ್ಯದ ರೈತರ ಆತಂಕಕ್ಕೆ ಕಾರಣವಾಗಿದೆ. ಈ ನಡುವಲ್ಲೇ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಪಕ್ಷಗಳು ಅಮುಲ್‌, ನಂದಿನಿ ವಿಚಾರದಲ್ಲಿ ಕಿತ್ತಾಟ ಶುರುವಿಟ್ಟುಕೊಂಡಿವೆ. ರಾಜ್ಯದಲ್ಲಿನ ಬಿಜೆಪಿ ಸರಕಾರ ನಂದಿನಿಯನ್ನು ಮುಗಿಸಲು ಹೊರಟಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದರೆ, ಅಮೂಲ್ ವಿಷಯದಲ್ಲಿ ಸರಕಾರ ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ನಡುವೆ ಕಾಂಗ್ರೆಸ್‌ ತಾನು ಈ ಬಾರಿ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಕೆಎಂಎಫ್‌ ಸಂಸ್ಥೆಯ ಉನ್ನತೀಕರಣಕ್ಕೆ ಆದ್ಯತೆಯನ್ನು ನೀಡುವುದಾಗಿ ಜನರಿಗೆ ಹೊಸ ಭರವಸೆಯನ್ನು ನೀಡಿದ್ದಾರೆ. ರಾಜ್ಯದ ರೈತರಿಗೆ ಹೈನುಗಾರಿಕೆ ಪ್ರೋತ್ಸಾಹದ ಯೋಜನೆಗಳನ್ನು ರೂಪಿಸುವುದರ ಜೊತೆಗೆ ಕೆಎಂಎಫ್‌ ಸಂಸ್ಥೆಯ ಉನ್ನತೀಕರಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವುದಾಗಿ ಕಾಂಗ್ರೆಸ್‌ ಭರವಸೆ ನೀಡಿದೆ. ಇದಲ್ಲದೇ ನಂದಿನಿ ಬ್ರಾಂಡ್‌ ನ ಉತ್ಪನ್ನಗಳನ್ನು ಮಾರುಕಟ್ಟೆಗೆ ವಿಸ್ತರಿಸಲು ಕ್ರಮ ತೆಗೆದುಕೊಂಡು, ನಂದಿನಿಯನ್ನು ಗುಜರಾತಿನ ಹಿತಾಸಕ್ತಿಗೆ ಬಲಿ ಕೊಡುವುದವನ್ನು ಶತಾಯಗತಾಯ ತಡೆಯುತ್ತೇವೆ ಎನ್ನುವುದಾಗಿ ಭರವಸೆ ನೀಡಿ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಇದಕ್ಕೆ ಪ್ರತ್ಯುತ್ತರವಾಗಿ ಜನಸಾಮಾನ್ಯರು ಟ್ವೀಟ್‌ ಮಾಡಿದ್ದು, ಕಾಂಗ್ರೆಸ್‌ ವಿರುದ್ದ ಸಿಡಿದೆದ್ದಿದ್ದಾರೆ. ಗೋ ಕಳ್ಳರನ್ನು ರಕ್ಷಿಸುವ ನೀವು ಯಾವ ರೀತಿಯಲ್ಲಿ ನಂದಿನಿಯನ್ನು ಉಳಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆಯಾಗಿ ಅಧಿಕಾರಕ್ಕೆ ಬರುವ ಸಲುವಾಗಿ ಕಾಂಗ್ರೆಸ್‌ ಅಮುಲ್‌ ವಿವಾದವನ್ನೆ ತನ್ನ ಅಸ್ತ್ರವಾಗಿಸಿಕೊಂಡಿರುವುದಕ್ಕೆ ಏನು ಹೇಳಬೇಕೋ ತಿಳಿಯದು.

ಇದನ್ನೂ ಓದಿ : ಸಿಆರ್‌ಪಿಎಫ್‌ ನೇಮಕಾತಿ ಪರೀಕ್ಷೆ 2023 : ಹಿಂದಿ, ಇಂಗ್ಲಿಷ್‌ ಕಡ್ಡಾಯ ತಕ್ಷಣವೇ ಸಡಿಲಿಸಿ ; ಸಿದ್ದು ಆಗ್ರಹ

Priority for KMF upliftment if comes to power : Congress New Guarantee

Comments are closed.