ಉಪ್ಪು Vs ಸಕ್ಕರೆ : ಹೃದಯದ ಆರೋಗ್ಯಕ್ಕೆ ಯಾವುದು ಹೆಚ್ಚು ಹಾನಿಕಾರಕ ?

ತಿಳಿದೋ ಅಥವಾ ತಿಳಿಯದೆಯೋ ದೇಹಕ್ಕೆ ಪ್ರತಿನಿತ್ಯ ಸೇರಿಸುವ ಉಪ್ಪು ಮತ್ತು ಸಕ್ಕರೆಯಲ್ಲಿ ಯಾವುದು ನಿಮ್ಮ ಹೃದಯಕ್ಕೆ ಹೆಚ್ಚು ಅಪಾಯ ತರುತ್ತದೆ?

By Archana V Bhat | ಅರ್ಚನಾ ವಿ ಭಟ್‌

1 min read

WhatsAppPost
Salt Vs Sugar
Salt Vs Sugar

ಇಂದಿನ ಆಧುನಿಕ ಜೀವನಶೈಲಿಯಲ್ಲಿ ಉತ್ತಮ ಆರೋಗ್ಯ ಎನ್ನುವುದು ಕನಸು ಎಂಬಂತಾಗಿದೆ. ಮಾನಸಿಕ ಒತ್ತಡ, ಆಹಾರ ಪದ್ಧತಿಯ ಬದಲಾವಣೆ, ಚಟುವಟಿಕೆ ರಹಿತ ಜೀವನ ಇವೆಲ್ಲವೂ ಅನಾರೋಗ್ಯಕ್ಕೆ ದಾರಿಯಾಗಿದೆ. ಅವುಗಳಲ್ಲಿ ಬಹುಪಾಲು ನಾವು ಸೇವಿಸುವ ಆಹಾರ ಎನ್ನುವದು ಬಹಳ ಮುಖ್ಯ. ತಿಳಿದೋ ಅಥವಾ ತಿಳಿಯದೆಯೋ ಪ್ರತಿನಿತ್ಯ ಒಂದಿಷ್ಟು ಆಹಾರಗಳನ್ನು ದೇಹಕ್ಕೆ ಸೇರಿಸುತ್ತಾ ಹೋಗುತ್ತೇವೆ. ಅವುಗಳಲ್ಲಿ ಪ್ರತಿದಿನ ಬಳಸುವ ಉಪ್ಪು ಮತ್ತು ಸಕ್ಕರೆಯೂ ಒಂದು. ಇವೆರಡೂ ಹೃದಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಪ್ರಮುಖ ಆಹಾರಗಳು. ಇವುಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಒಳ್ಳೆಯದು ಇಲ್ಲವಾದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ.

ಉಪ್ಪು Vs ಸಕ್ಕರೆ

ಉಪ್ಪು ಮತ್ತು ಸಕ್ಕರೆ ಎರಡೂ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುವ ಪ್ರಮುಖ ಆಹಾರಗಳು. ವಿಶೇಷವಾಗಿ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿರುವವರಿಗೆ ಅತಿಯಾದ ಉಪ್ಪು ಮತ್ತು ಸಕ್ಕರೆ ಅಪಾಯಕಾರಿಯಾಗಿದೆ. ಹೆಚ್ಚುವರಿ ಉಪ್ಪು ದೇಹದಲ್ಲಿ ನೀರನ್ನು ಉಳಿಸಿಕೊಳ್ಳಲು ಕಾರಣವಾಗುತ್ತದೆ. ಇದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಇದು ಹೃದಯ ಮತ್ತು ಹೃದಯ ರಕ್ತನಾಳಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಇದೇ ಮುಂದುವರಿದು ಹೃದಯ ಕಾಯಿಲೆ, ಹೃದಯಾಘಾತ ಮತ್ತು ಪಾರ್ಶವಾಯು ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದರಲ್ಲೂ ಮೂತ್ರಪಿಂಡದ ಸಮಸ್ಯೆಯಿರುವವರು ಉಪ್ಪಿನ ಬಗ್ಗೆ ಹೆಚ್ಚಿನ ಜಾಗ್ರತೆವಹಿಸಬೇಕು. ಸಕ್ಕರೆಯ ಅತಿಯಾದ ಸೇವನೆ ರಕ್ತದೊತ್ತಡದ ಜೊತೆಗೆ ಮಧುಮೇಹ, ಕೊಲೆಸ್ಟ್ರಾಲ್‌, ಮೂತ್ರಪಿಂಡದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಯಾವುದು ಹೆಚ್ಚು ಅಪಾಯಕಾರಿ?

ಉಪ್ಪು ಮತ್ತು ಸಕ್ಕರೆ ಇವೆರಡಲ್ಲಿ ಯಾವುದು ಹೆಚ್ಚು ಅಪಾಯಕಾರಿ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಅಧಿಕ ರಕ್ತದೊತ್ತಡ ಇರುವವರು ಸೋಡಿಯಂ ಸೇವನೆಯನ್ನು ಕಡಿಮೆ ಮಾಡುವತ್ತ ಹೆಚ್ಚು ಗಮನ ಹರಿಸಬೇಕು. ಮಧುಮೇಹ ಇರುವವರು ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವುದು ಮುಖ್ಯವಾಗಿದೆ. ದೀರ್ಘಕಾಯಿಲೆಗಳಾದ ಇವೆರಡೂ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಹಾಗಾಗಿ ಇವೆರಡನ್ನು ಮಿತವಾಗಿ ಸೇವಿಸಬೇಕು.

ಹೀಗಿರಲಿ ನಿಮ್ಮ ಆಹಾರ ಪದ್ಧತಿ

ಹೃದಯದ ಆರೋಗ್ಯಕ್ಕಾಗಿ ಕೇವಲ ಉಪ್ಪು ಅಥವಾ ಸಕ್ಕರೆಯ ಮೇಲೆ ನಿಯಂತ್ರಣ ಸಾಧಿಸುವುದರ ಬದಲಿಗೆ ಇಡೀ ಆಹಾರಕ್ರಮವನ್ನು ಬದಲಾಯಿಸುವುದು ಮುಖ್ಯ. ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳಂತಹ ತಾಜಾ, ಕನಿಷ್ಠ ಸಂಸ್ಕರಿಸಿದ ಆಹಾರಗಳನ್ನು ಹೆಚ್ಚು ಸೇವಿಸಿ. ಪ್ಯಾಕ್ ಮಾಡಿದ ಆಹಾರಗಳು, ಹೆಚ್ಚು ಸಂಸ್ಕರಿಸಿದ ತಿಂಡಿಗಳು, ಸಕ್ಕರೆ ಇರುವ ಪಾನೀಯಗಳು ಮತ್ತು ಸಕ್ಕರೆ ಅಥವಾ ಸೋಡಿಯಂ ಅಧಿಕವಾಗಿರುವ ಆಹಾರಗಳನ್ನು ತಿನ್ನಬೇಡಿ ಅಥವಾ ಮಿತವಾಗಿ ತಿನ್ನಿ. ದೈಹಿಕ ಚಟುವಟಿಕೆ, ಆರೋಗ್ಯಕರ ತೂಕದ ಕಡೆಗೆ ಗಮನವಿರಲಿ. ಧೂಮಪಾನ, ಮಧ್ಯಪಾನದಿಂದ ದೂರವಿರಿ. ಇದರ ಜೊತೆಗೆ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ಸಹ ಹೃದಯದ ಆರೋಗ್ಯಕ್ಕೆ ಪ್ರಮುಖವಾಗಿದೆ.

Topics

ಸಂಬಂಧಿತ ಸುದ್ದಿಗಳು