ಅಕ್ರಮ ಮದ್ದು ಮಾರಾಟಕ್ಕೆ ಅಂಕುಶ..! ವೈದ್ಯರ ಚೀಟಿಯಿಲ್ಲದೇ ಔಷಧಿ ನೀಡಿದ್ರೆ ಮೆಡಿಕಲ್ ಶಾಪ್ ಲೈಸೆನ್ಸ್ ರದ್ದು
ತೂಕ ಇಳಿಕೆ ಎನ್ನುವುದು ಕಷ್ಟ ಸಾಧ್ಯವಾಗುವಂತಹ ಕೆಲಸ. ಇದಕ್ಕೆ ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಶೈಲಿ, ಬಾಯಿ ಚಪಲದ ನಿಯಂತ್ರಣ ಹೀಗೆ ನಾನಾ ಮಾರ್ಗಗಳಿವೆ. ಈ ಎಲ್ಲಾ ಮಾರ್ಗಗಳಲ್ಲಿ ಯಶಸ್ಸು ಕಂಡ ಬಳಿಕ ಮಾತ್ರ ತೂಕ ಇಳಿಕೆ ಸಾಧ್ಯ. ಆದರೆ ಅನೇಕರು ತೂಕ ಇಳಿಕೆಗೆ ಅಡ್ಡದಾರಿಯನ್ನು ಕಂಡುಕೊಂಡಿದ್ದು ಹಾರ್ಮೋನ್ ನಿಯಂತ್ರಿಸುವ ಮಾತ್ರೆಯ (Weight Loss Medicine) ಸೇವನೆ ಮೂಲಕ ತ್ವರಿತ ತೂಕ ಇಳಿಕೆಯ ಮಾರ್ಗ ಕಂಡುಕೊಂಡಿದ್ದಾರೆ. ಅನೇಕ ಮೆಡಿಕಲ್ಗಳಲ್ಲಿ ಇಂತಹ ಮಾತ್ರೆ ಲಭ್ಯವಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದ್ದು, ಇದೀಗ ಅಕ್ರಮ ತೂಕ ನಿಯಂತ್ರಣ ಔಷಧಿಗಳಿಗೆ ಲಗಾಮು ಹಾಕಲು ಮುಂದಾಗಿದೆ.
ಹಾರ್ಮೋನ್ ಆಧಾರಿತ ಔಷಧಿಗಳಾದ GLP-1 ರಿಸೆಪ್ಟರ್ ಅಗೋನಿಸ್ಟ್‌ಗಳ ಬಳಕೆ ಎಲ್ಲೆಂದರಲ್ಲಿ ಹೆಚ್ಚಿದ್ದು, ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ಔಷಧ ನಿಯಂತ್ರಣ ಮಂಡಳಿ ಇದರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ವೈದ್ಯರ ಚೀಟಿ ಇಲ್ಲದೇ ಔಷಧಿಗಳನ್ನು ಮಾರಾಟ ಮಾಡಿದಲ್ಲಿ ಅಂತಹ ಮೆಡಿಕಲ್ ಶಾಪ್ಗಳ ಲೈಸೆನ್ಸ್ ರದ್ದುಗೊಳಿಸಲು ನಿರ್ಧರಿಸಲಾಗಿದೆ.
ತ್ವರಿತ ತೂಕ ಇಳಿಕೆ ಎಂಬ ಜಾಹೀರಾತುಗಳನ್ನು ನೀಡಿ ಜನರನ್ನು ತೂಕ ಇಳಿಕೆಯ ಔಷಧಿ ಸೇವಿಸುವಂತೆ ಪ್ರೇರೇಪಿಸುವ ಜಾಹಿರಾತುಗಳ ಪ್ರದರ್ಶನಕ್ಕೂ ಕಡಿವಾಣ ಹಾಕಲಾಗಿದೆ. ವೈದ್ಯರು ಸೂಚನೆ ನೀಡದ ವಿನಃ ಯಾವುದೇ ಮೆಡಿಕಲ್ ಶಾಪ್‌ಗಳು, ಆನ್‌ಲೈನ್ ಫಾರ್ಮಸಿಗಳು ಮತ್ತು ಕ್ಲಿನಿಕ್‌ಗಳಲ್ಲಿ ಹಾರ್ಮೋನ್ ಆಧಾರಿತ ತೂಕ ಇಳಿಕೆಯ ಯಾವುದೇ ಔಷಧಿಗಳನ್ನು ನೀಡುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಇಂತಹ ಔಷಧಿಗಳ ಅಕ್ರಮ ಮಾರಾಟವಾಗುತ್ತಿರುವುದು ಗಮನಕ್ಕೆ ಬಂದಲ್ಲಿ, ಕ್ರಿಮಿನಲ್ ಮೊಕ್ಕದ್ದಮೆಯನ್ನು ಹೂಡುವುದರ ಜೊತೆಯಲ್ಲಿ ಪರವಾನಿಗೆ ರದ್ದು ಹಾಗೂ ಭಾರೀ ಮೊತ್ತದ ದಂಡ ಕೂಡ ವಿಧಿಕೆಯಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಖಡಕ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಹೃದಯ ಜೋಪಾನ..! ಹದಿಹರೆಯದವರಲ್ಲಿ ಹೃದಯಾಘಾತ ಹಿಂದಿನ ಅಸಲಿ ಕಾರಣ ಬಯಲು
ಮಧುಮೇಹ ತಜ್ಞರು ಹಾಗೂ ಹೃದ್ರೋಗ ತಜ್ಞರ ಶಿಫಾರಸ್ಸಿನ ಮೇಲೆ ಸೆಮಾಗ್ಲುಟೈಡ್ನಂತಹ ಔಷಧಿಗಳನ್ನು ಗ್ರಾಹಕರಿಗೆ ನೀಡಬಹುದಾಗಿದೆ. ಆದರೆ ಸ್ವಯಂ ಚಿಕಿತ್ಸೆಗಾಗಿ ಮೆಡಿಕಲ್ಗಳಲ್ಲಿ ಬೇಡಿಕೆಯಿಡುವ ಗ್ರಾಹಕರಿಗೆ ಇಂತಹ ಔಷಧಿಗಳನ್ನು ವಿತರಿಸುವುದು ಕಾನೂನು ಬಾಹಿರ ಕ್ರಮ ಆಗಿರಲಿದೆ. ಹೀಗಾಗಿ ಇನ್ಮೇಲೆ ತೂಕ ಇಳಿಕೆಯ ಔಷಧಿ ಖರೀದಿ ಮಾಡುವ ಮುನ್ನ ಗ್ರಾಹಕರು ಹಾಗೂ ಅಕ್ರಮವಾಗಿ ಇಂತಹ ಔಷಧಿಗಳನ್ನು ಮಾರಾಟ ಮಾಡುವ ಮೆಡಿಕಲ್ ಶಾಪ್ ಮಾಲೀಕರು ಎಚ್ಚರಿಕೆಯಿಂದಿರುವುದು ಉತ್ತಮ.



