ಕೇದರನಾಥ ದರ್ಶನ ಆರಂಭಕ್ಕೆ ದಿನಾಂಕ ನಿಗದಿ : ಚಾರ್ಧಾಮ್ ಯಾತ್ರೆಗೂ ಮುಹೂರ್ತ ಫಿಕ್ಸ್
CharDham Yatra 2026: ಚಳಿಗಾಲದ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ಕೇದಾರನಾಥ ದರ್ಶನಕ್ಕೆ ಕೊನೆಗೂ ಕಾಲ ಕೂಡಿಬಂದಿದೆ. ಸಂಪ್ರದಾಯದ ಪ್ರಕಾರ ಶಿವರಾತ್ರಿಯ ದಿನದಂದು ಉಖೀಮಠದ ಓಂಕಾರೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಸಭೆ ನಡೆಸಿ ಬಳಿಕ ಕೇದರನಾಥ ದೇಗುಲದ ಬಾಗಿಲು ತೆರೆಯುವ ದಿನಾಂಕವನ್ನು ಘೋಷಣೆ ಮಾಡಲಾಯಿತು.
ವಿದ್ವಾಂಸರು ಹಾಗೂ ಪುರೋಹಿತರು ಪಂಚಾಂಗ ಆಧರಿಸಿ ಏಪ್ರಿಲ್ 22ರ ಬೆಳಗ್ಗೆ 8ರಂದು ದೇವಸ್ಥಾನದ ಬಾಗಿಲು ತೆರೆಯಲಾಗುವುದು ಎಂದು ಘೋಷಣೆ ಮಾಡಿದ್ದಾರೆ.ಇನ್ನು ಗಂಗೋತ್ರಿ ಹಾಗು ಯಮುನೋತ್ರಿ ಏಪ್ರಿಲ್ 19ರಂದು ಬಾಗಿಲು ತೆರೆಯಲಿದೆ. ಬದರಿನಾಥ ದೇಗುಲವು ಏಪ್ರಿಲ್ 23ರಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಧಾಮಿ, ಚಾರ್ಧಾಮ್ ಯಾತ್ರೆಗೆ ಬರುತ್ತಿರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಭಕ್ತರ ಸುರಕ್ಷತೆಗೆ ನಮ್ಮ ಸರ್ಕಾರ ಬದ್ಧವಾಗಿರಲಿದೆ. ರಸ್ತೆಗಳ ದುರಸ್ಥಿ ಕಾರ್ಯ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಈಗಾಗಲೇ ಆರಂಭಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ರಿಷಬ್ ಶೆಟ್ಟಿ ದಂಪತಿ: ದೇವಿಯ ರಥ ಎಳೆದ ಡಿವೈನ್ ಸ್ಟಾರ್
ಕೇದಾರನಾಥ ಹಾಗೂ ಚಾರ್ಧಾಮ್ ಯಾತ್ರೆ ಲಕ್ಷಾಂತರ ಹಿಂದೂಗಳ ಕನಸು. ಹೀಗಾಗಿ ಹಿಮಾಲಯದ ತಪ್ಪಲಿನಲ್ಲಿ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ಉತ್ತರಾಖಂಡ್ನ ಪ್ರವಾಸೋದ್ಯಮಕ್ಕೂ ಇದು ಸಾಕಷ್ಟು ಇಂಬು ನೀಡುವ ಸ್ಥಳವಾಗಿದೆ.



