Lalu Prasad Yadav: ಲಾಲು ಕುಟುಂಬದಲ್ಲಿ ಬಿರುಕು ಮೂಡಲು ಕಾರಣ ಇದೇ ವ್ಯಕ್ತಿ!
ಪಟ್ನಾ: ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ (Bihar Assembly Results) ರಾಷ್ಟ್ರೀಯ ಜನತಾ ದಳ (RJD) ಪಕ್ಷದ ಕಳಪೆ ಪ್ರದರ್ಶನದ ಕಾರಣದಿಂದಾಗಿ ಲಾಲೂ ಪ್ರಸಾದ್ ಯಾದವ್ ಅವರ ಕುಟುಂಬದಲ್ಲಿ ಭುಗಿಲೆದ್ದಿರುವ ಆಂತರಿಕ ಕಲಹವು ಇದೀಗ ಕುಟುಂಬದ ಆಪ್ತ ವಲಯದತ್ತ ತಿರುಗಿದೆ. ಸಿಂಗಾಪುರದಲ್ಲಿ ನೆಲೆಸಿರುವ ಲಾಲೂ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು (Rohini Acharya) ತಮ್ಮ ಸಹೋದರ ತೇಜಸ್ವಿ ಯಾದವ್ ಅವರ ( Tejaswi Yadav) ರಾಜಕೀಯ ಸಲಹೆಗಾರರು ಮತ್ತು ಸ್ನೇಹಿತರ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ತಮ್ಮ ರಾಜಕೀಯ ನಿವೃತ್ತಿಯನ್ನು ಘೋಷಿಸಿದ ರೋಹಿಣಿ, ಈ ನಿರ್ಧಾರಕ್ಕೆ ನೇರವಾಗಿ ತೇಜಸ್ವಿ ಅವರ ಆಪ್ತ ಸಹಾಯಕ ಸಂಜಯ್ ಯಾದವ್ ಮತ್ತು ಮತ್ತೊಬ್ಬ ಆಪ್ತ ವಲಯದ ವ್ಯಕ್ತಿ ರಮೀಜ್ ಖಾನ್ ಅಲಿಯಾಸ್ ರಮೀಜ್ ನೆಮತ್ ಖಾನ್ ಕಾರಣ ಎಂದು ದೂರಿದ್ದಾರೆ.
ಯಾರು ಈ ರಮೀಜ್ ಖಾನ್?
ಉತ್ತರ ಪ್ರದೇಶದ ಬಲರಾಂಪುರ ಮೂಲದ ರಮೀಜ್ ಖಾನ್ ಅವರು ತೇಜಸ್ವಿ ಯಾದವ್ ಅವರ ಬಹುಕಾಲದ ಸ್ನೇಹಿತ. ಕ್ರಿಕೆಟ್ ಲೋಕದ ಸಂಪರ್ಕದ ಮೂಲಕ ಇಬ್ಬರೂ ಸ್ನೇಹ ಬೆಳೆಸಿದ್ದರು. ರಾಜಕೀಯಕ್ಕೆ ಪ್ರವೇಶಿಸಿದ ನಂತರ, ರಮೀಜ್ ಅವರು ಪಕ್ಷದ ಪ್ರಚಾರ ಕಾರ್ಯ, ಸಾಮಾಜಿಕ ಮಾಧ್ಯಮ ಕಾರ್ಯಾಚರಣೆಗಳು ಮತ್ತು ಚುನಾವಣಾ ವಾರ್‌ರೂಮ್ ನಿರ್ವಹಣೆಯಂತಹ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು.
ಇದನ್ನೂ ಓದಿ: ಚಿನ್ನ vs ರಿಯಲ್ ಎಸ್ಟೇಟ್; ಯಾವುದು ಬೆಸ್ಟ್?
ಪಕ್ಷದ ಮೂಲಗಳ ಪ್ರಕಾರ, ರಮೀಜ್ ಖಾನ್ ಅವರು ಸಂಜಯ್ ಯಾದವ್ ಅವರೊಂದಿಗೆ ಸೇರಿಕೊಂಡು ತೇಜಸ್ವಿ ಯಾದವ್ ಅವರಿಗೆ ಪ್ರಮುಖ ರಾಜಕೀಯ ಸಲಹೆಗಳನ್ನು ನೀಡುವ ಕೆಲವೇ ಕೆಲವು ಆಪ್ತ ವ್ಯಕ್ತಿಗಳಲ್ಲಿ ಒಬ್ಬರು.
ಕುಟುಂಬ ಕಲಹಕ್ಕೆ ಕಾರಣ
ಚುನಾವಣಾ ಫಲಿತಾಂಶಗಳ ಕುರಿತು ಪ್ರಶ್ನೆ ಎತ್ತಿದಾಗ ರೋಹಿಣಿ ಆಚಾರ್ಯ ಅವರನ್ನು ನಿಂದಿಸಿ ಮನೆಯಿಂದ ಹೊರಹಾಕುವ ಬೆದರಿಕೆ ಹಾಕಲಾಗಿದೆ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. “ಸಂಜಯ್ ಯಾದವ್ ಮತ್ತು ರಮೀಜ್ ಹೀಗೆ ಮಾಡಲು ನನಗೆ ಹೇಳಿದ್ದರು. ಕುಟುಂಬವನ್ನು ಒಡೆಯಲು ಈ ಇಬ್ಬರೂ ವ್ಯಕ್ತಿಗಳು ಕಾರಣರಾಗಿದ್ದಾರೆ” ಎಂದು ರೋಹಿಣಿ ನೇರವಾಗಿ ಆರೋಪಿಸಿದ್ದಾರೆ.
ಈ ಘಟನೆಗಳ ನಂತರ ಲಾಲೂ ಯಾದವ್ ಅವರ ಕುಟುಂಬದಲ್ಲಿ ರಾಜಕೀಯ ಪ್ರಾಬಲ್ಯಕ್ಕಾಗಿ ನಡೆಯುತ್ತಿರುವ ಪೈಪೋಟಿ ಮತ್ತೊಮ್ಮೆ ಬಹಿರಂಗಗೊಂಡಿದೆ. ರೋಹಿಣಿಯವರ ಹೇಳಿಕೆಗಳು RJD ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.



