- ಸುಶ್ಮಿತಾ ಸುಬ್ರಹ್ಮಣ್ಯ
ನವದೆಹಲಿ : ಅಫ್ಘಾನಿಸ್ತಾನದಲ್ಲಿ ಕಳೆದ ಕೆಲ ತಿಂಗಳುಗಳಲ್ಲಿ ಸ್ಫೋಟ, ಹಿಂಸಾಚಾರ, ವಿದ್ಯಾಸಂಸ್ಥೆಗಳ ಮೇಲೆ ದಾಳಿ ಪ್ರಕರಣಗಳು ಹೆಚ್ಚಿದ್ದವು. ಹಿಂಸಾಚಾರದ ಹಿಂದೆ ತಾಲಿಬಾನ್ ಕೈವಾಡ ಇದೆಯೆಂದು ಸರ್ಕಾರ ಆರೋಪಿಸಿತ್ತು. ಸರ್ಕಾರ ಮತ್ತು ತಾಲಿಬಾನ್ ನಾಯಕರ ನಡುವಿನ ಶಾಂತಿ ಮಾತುಕತೆ ಸಮಯದಲ್ಲಿ, ಅಮೆರಿಕ ಸೈನಿಕರು ದೇಶದಿಂದ ಕಾಲುಕಿತ್ತರೆ ಮಾತ್ರ ಶಾಂತಿ ನೆಲೆಸಲು ಅನುವು ಮಾಡಿಕೊಡುವುದಾಗಿ ತಾಲಿಬಾನ್ ನಾಯಕರು ಹೇಳಿದ್ದರು. ಅದರಂತೆ ಅಮೆರಿಕ ಅಫ್ಘಾನಿಸ್ತಾನದಿಂದ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಸಮ್ಮತಿ ಸೂಚಿಸಿತ್ತು.
ಅಫ್ಘಾನಿಸ್ತಾನದ ಮೂರು ಪ್ರಾಂತೀಯ ರಾಜಧಾನಿಗಳಾದ ಕುಂದುಜ್, ಸರ್ ಇ ಪುಲ್ ಮತ್ತು ತಲುಕನ್ ನಗರಗಳನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದುಕೊಂಡಿದೆ. ಕಳೆದ ಎರಡು ದಶಕಗಳಿಂದ ದೇಶದಲ್ಲಿ ಠಿಕಾಣಿ ಹೂಡಿದ್ದ ಅಮೆರಿಕ ಮತ್ತು ನ್ಯಾಟೊ ಪಡೆಗಳು ಅಫ್ಘಾನಿಸ್ತಾನದಿಂದ ಕಾಲ್ತೆಗೆದ ಬೆನ್ನಲ್ಲೇ ಪರಿಸ್ಥಿತಿ ಲಾಭ ಪಡೆದುಕೊಳ್ಳಲು ಮುಂದಾಗಿರುವ ತಾಲಿಬಾನ್ ಮತ್ತೆ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ವಶಪಡಿಸಿಕೊಳ್ಳಲು ಆಫ್ಘನ್ ಸೇನಾಪಡೆಗಳ ಮೇಲೆ ಯುದ್ಧ ಸಾರಿದ್ದವು.
ಇದರಿಂದಾಗಿ ದೇಶದಲ್ಲಿ ಮತ್ತೆ ತಾಲಿಬಾನ್ ಆಡಳಿತ ಶುರುವಾಗಿ, ಜನಸಾಮಾನ್ಯರು ಅಪಾಯಕ್ಕೆ ಸಿಲುಕುವ ಆತಂಕವನ್ನು ಅಂತಾರಾಷ್ಟ್ರೀಯ ಸಮುದಾಯ ವ್ಯಕ್ತಪಡಿಸಿತ್ತು. ಅದೀಗ ನಿಜವಾಗುತ್ತಿದೆ ಎಂದು ರಾಜಕೀಯ ಪರಿಣತರು ಆತಂಕ ವ್ಯಕ್ತಪಡಿಸಿದ್ದಾರೆ. ತಾಲಿಬಾನ್ ಶೇ.80 ಪ್ರತಿಶತ ದೇಶವನ್ನು ವಶಪಡಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ತಾಲಿಬಾನ್ ಮೂರು ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿರುವುದು ತಾಲಿಬಾನ್ ಮೇಲುಗೈ ಸಾಧಿಸಿರುವುದರ ಪ್ರತೀಕ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಸಾವಿರಾರು ಆಫ್ಘನ್ ಸೇನಾಪಡೆಯ ಸೈನಿಕರು ತಾಲಿಬಾನ್ ಬಂಡುಕೋರರ ನಡುವಿನ ಕಾದಾಟದಲ್ಲಿ ಹಿಮ್ಮೆಟ್ಟಿ ಪಾಕ್ ಗಡಿ ಪ್ರದೇಶದೊಳಕ್ಕೆ ನುಗ್ಗಿ ಅಲ್ಲಿನ ಆಶ್ರಯ ಪಡೆದುಕೊಂಡಿತ್ತು ಎನ್ನುವುದು ಗಮನಾರ್ಹ. ಇತ್ತೀಚಿಗಷ್ಟೆ ಕಂದಹಾರ್‌ನಲ್ಲಿ ಆಫ್ಘನ್ ಭದ್ರತಾಪಡೆಗಳು ಮತ್ತು ತಾಲಿಬಾನ್ ನಡುವಿನ ಸಂಘರ್ಷದ ವರದಿಗಾರಿಕೆಗೆಂದು ತೆರಳಿದ್ದ ಭಾರತೀಯ ಮೂಲದ ಪತ್ರಕರ್ತ ದಾನಿಶ್ ಸಿದ್ದಿಕಿ ತಾಲಿಬಾನಿಗಳ ಗುಂಡಿಗೆ ಬಲಿಯಾಗಿದ್ದಾರೆ ಎನ್ನುವುದು ಬೇಸರದ ಸಂಗತಿ.