Zydus Cadil : ಕೊರೊನಾ ವಿಚಾರದಲ್ಲಿ ಗುಡ್‌ನ್ಯೂಸ್‌ : 12-18 ವರ್ಷದವರಿಗೆ ಬರಲಿದೆ ಜೈಡಸ್ ಕೋವಿಡ್ ಲಸಿಕೆ

  • ಸುಶ್ಮಿತಾ ಸುಬ್ರಹ್ಮಣ್ಯ

ನವದೆಹಲಿ : ದೇಶದಲ್ಲಿ ಕೋವಿಡ್-19 3ನೇ ಅಲೆಯ ಭೀತಿ ಎದುರಾಗಿದ್ದು ಮೂರನೇ ಅಲೆ ವೇಳೆ ಮಕ್ಕಳಿಗೆ ಹೆಚ್ಚಾಗಿ ಸೋಂಕು ತಗಲುವ ಅಪಾಯವಿದೆ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಮಕ್ಕಳಿಗೂ ಕೋವಿಡ್ ಲಸಿಕೆ ನೀಡುವ ಕುರಿತು ಕೇಂದ್ರ ಸರ್ಕಾರ ಗಂಭೀರ ಆಲೋಚನೆಯಲ್ಲಿತ್ತು. ಇದೀಗ ಲಸಿಕೆ ನಿರ್ವಹಣೆಗೆ ಸಂಬಂಧಿಸಿದ ರಾಷ್ಟ್ರೀಯ ತಜ್ಞರ ಸಮಿತಿ ಮುಖ್ಯಸ್ಥ ಡಾ. ಎನ್‌.ಕೆ. ಆರೋರಾ ಈ ಕುರಿತು ಗುಡ್‌ ನ್ಯೂಸ್‌ ಕೊಟ್ಟದ್ದಾರೆ.

ಶಾಲೆ ತೆರೆಯುವ ವಿಷಯ ಮತ್ತು ಇತರ ವಿಷಯಗಳು ಬಹಳ ಮುಖ್ಯ ಮತ್ತು ಅವುಗಳನ್ನು ಸಕ್ರಿಯವಾಗಿ ಚರ್ಚಿಸಲಾಗುತ್ತಿದೆ. ಲಸಿಕೆ ವಿಭಾಗದ ಮುಖ್ಯಸ್ಥರ ರಾಷ್ಟ್ರೀಯ ತಜ್ಞರ ಗುಂಪು ದೇಶದ ಮಕ್ಕಳಿಗೆ ಲಸಿಕೆ ಹಾಕುವತ್ತ ಗಮನ ಹರಿಸಿದೆ. ಏಕೆಂದರೆ ಕೋವಿಡ್-19 ನ ಮೂರನೇ ತರಂಗವು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಮಕ್ಕಳನ್ನು ಕೋವಿಡ್‌ ಸಂಕಷ್ಟದಿಂದ ರಕ್ಷೀಸಲಿರುವ ಈ ಲಸಿಕೆಯ ಹೆಸರು ಜೈಡಸ್ ಕ್ಯಾಡಿಲಾ ಕೋವಿಡ್ ಲಸಿಕೆ. ಈ ಲಸಿಕೆಯು ಸೆಪ್ಟೆಂಬರ್ ವೇಳೆಗೆ 12 ರಿಂದ 18 ವರ್ಷ ವಯಸ್ಸಿನವರಿಗೆ ಲಭ್ಯವಾಗಲಿದೆ ಎಂದು ಲಸಿಕೆ ನಿರ್ವಹಣೆಗೆ ಸಂಬಂಧಿಸಿದ ರಾಷ್ಟ್ರೀಯ ತಜ್ಞರ ಸಮಿತಿ ಮುಖ್ಯಸ್ಥ ಡಾ. ಎನ್‌.ಕೆ. ಆರೋರಾ ಹೇಳಿದ್ದಾರೆ.

ಜೈಡಸ್ ಕ್ಯಾಡಿಲಾ ಲಸಿಕೆಯ ತುರ್ತು ಬಳಕೆಗೆ ಕೆಲವೇ ವಾರಗಳಲ್ಲಿ ಅನುಮೋದನೆ ದೊರೆಯಲಿದೆ ಎಂದು ಅವರು ಸಂದರ್ಶನ ವೊಂದರಲ್ಲಿ ಹೇಳಿದ್ದಾರೆ. ‘ಸೆಪ್ಟೆಂಬರ್‌ ಅಂತ್ಯದ ವೇಳೆಗೆ 12 ರಿಂದ 18 ವರ್ಷ ವಯಸ್ಸಿನವರಿಗೆ ಕೋವ್ಯಾಕ್ಸಿನ್ ಲಸಿಕೆ ಕೂಡ ಲಭ್ಯವಾಗುವ ನಿರೀಕ್ಷೆ ಇದೆ. ಈ ವಯಸ್ಸಿನವರಿಗಾಗಿ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ. ಮೂರನೇ ತ್ರೈಮಾಸಿಕ ಅವಧಿಯಲ್ಲಿ ಅಥವಾ ಜನವರಿ-ಫೆಬ್ರವರಿ ಆರಂಭದ ವೇಳೆಗೆ 2 ವರ್ಷ ಮೇಲ್ಪಟ್ಟವರ ಬಳಕೆಗೂ ಕೋವ್ಯಾಕ್ಸಿನ್ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಇನ್ನು ನೂತನ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದು, ದೇಶದ 736 ಜಿಲ್ಲೆಗಳಲ್ಲಿ ಮಕ್ಕಳ ಕೇಂದ್ರಗಳನ್ನು ಸ್ಥಾಪಿಸಲು ಆರೋಗ್ಯ ಮೂಲಸೌಕರ್ಯ ಪ್ಯಾಕೇಜ್ ಜಾರಿಗೆ ತರಲು ಸರ್ಕಾರ ಯೋಜಿಸುತ್ತಿದೆ. ಹಲವಾರು ರಾಜ್ಯ ಸರ್ಕಾರಗಳು ಸಹ ಮಕ್ಕಳಿಗಾಗಿ ಸುಲಭವಾಗಿ ವ್ಯವಸ್ಥೆ ಮಾಡುತ್ತಿವೆ ಎಂದು ಅವರು ಹೇಳಿದರು.

Comments are closed.