ಚೀನಾ: Covid in China: ಕಳೆದ ಕೆಲ ದಿನಗಳಿಂದ ಚೀನಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ದಾಖಲೆಯ ಪ್ರಮಾಣದಲ್ಲಿ ಕೋವಿಡ್ ಕೇಸ್ ಗಳು ವರದಿಯಾಗುತ್ತಿದ್ದು, ಪರಿಸ್ಥಿತಿ ನಿಯಂತ್ರಿಸಲು ಚೀನಾ ಸರ್ಕಾರ ವಿಫಲವಾಗಿದೆ. ಸದ್ಯದ ಮಟ್ಟಿಗೆ ಚೀನಾ ಆರೋಗ್ಯ ತುರ್ತುಪರಿಸ್ಥಿತಿ ಎದುರಿಸುತ್ತಿದೆ ಎಂದು ಖಾಸಗಿ ಸುದ್ದಿ ಪತ್ರಿಕೆಯೊಂದು ವರದಿ ಮಾಡಿದೆ. ಸತತ 5ನೇ ದಿನವೂ ಚೀನಾದಲ್ಲಿ ದಾಖಲೆಯ 40 ಸಾವಿರ ಪ್ರಕರಣಗಳು ದಾಖಲಾಗಿದ್ದು, ಸರ್ಕಾರ ಹಾಗೂ ಜನರು ಆತಂಕಕ್ಕೀಡಾಗಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಕೋವಿಡ್ ಪರಿಸ್ಥಿತಿ ನಿಯಂತ್ರಿಸಲಾಗದೇ ಹೈರಾಣಾಗಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕಠಿಣ ಕ್ವಾರಂಟೈನ್ ನಿಯಮ ಜಾರಿಗೆ ತಂದಿದ್ದರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಚೀನಾ ಅಧ್ಯಕ್ಷರ ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಜನ ರೊಚ್ಚಿಗೆದ್ದಿದ್ದು, ಕೆಲ ದಿನಗಳಿಂದ ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಕ್ಸಿ ಜಿನ್ ಪಿಂಗ್ ಅಧಿಕಾರದಿಂದ ಕೆಳಗಿಳಿಯುವಂತೆ ಒಕ್ಕೊರಲ ಕೂಗು ಕೇಳಿಬರುತ್ತಿದೆ.
ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇನ್ನು ಬಹುತೇಕ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಬೆಡ್, ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ಗಳ ಕೊರತೆ ಎದುರಾಗಿದ್ದು, 2019ರ ಕೋವಿಡ್ ಅಲೆಯನ್ನು ನೆನಪಿಸುತ್ತಿದೆ. ಸೋಂಕು ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯವನ್ನು ಮನಗಂಡಿರುವ ಜನರು ಮುಂಜಾಗ್ರತಾ ಕ್ರಮವಾಗಿ ತಮ್ಮ ತಮ್ಮ ಮನೆಗಳಲ್ಲೇ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಇದರ ಪರಿಣಾಮವಾಗಿ ನವೆಂಬರ್ 11ರಿಂದ ಕೋವಿಡ್ ಗೆ ಚಿಕಿತ್ಸೆ ನೀಡುವ ಸಾಧನಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. ಆಕ್ಸಿಜನ್ ಸಿಲಿಂಡರ್, ಆಕ್ಸಿಮೀಟರ್, ಮತ್ತು ವೆಂಟಿಲೇರ್ ಗಳನ್ನು ಜನ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ಎಲ್ಲಾ ಪರಿಕರಗಳ ಮಾರಾಟದಲ್ಲಿ ಶೇಕಡಾ 90ರಷ್ಟು ಏರಿಕೆ ಕಂಡುಬಂದಿದ್ದು, ಮಾರುಕಟ್ಟೆಯಲ್ಲಿ ಉಪಕರಣಗಳ ಕೊರತೆ ಎದುರಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ ಒಂದು ವೇಳೆ ಕೋವಿಡ್ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ಕೈ ಬಿಟ್ಟರೆ ಕೊರೋನಾ ಸ್ಫೋಟಗೊಂಡು ಸುಮಾರು 1:2 ಮನೆಗಳಲ್ಲಿ ವೆಂಟಿಲೇಟರ್ ಹಾಗೂ ಆಕ್ಸಿಜನ್ ಮೆಷಿನ್ ಗಳ ಅಗತ್ಯ ಬೀಳಲಿದೆ ಎಂದು ಕೂಡಾ ವರದಿ ಹೇಳಿದೆ.
ಇನ್ನೊಂದೆಡೆ ಜನರ ಭಾರೀ ಪ್ರತಿಭಟನೆಗೆ ಮಣಿದಿರುವ ಚೀನಾ ಸರ್ಕಾರವು ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕಠಿಣ ಲಾಕ್ ಡೌನ್ ನಿಯಮ ಸಡಿಲಗೊಳಿಸಿದೆ. ಕಳೆದೊಂದು ವಾರದಿಂದ ಮನೆಯಲ್ಲೇ ಬಂಧಿಯಾಗಿದ್ದ ಕ್ಸಿನ್ ಜಿಯಾಂಗ್ ಜಿಲ್ಲೆಯ 40 ಲಕ್ಷ ನಿವಾಸಿಗಳಿಗೆ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಆದರೆ ಜನರು ಜಿಲ್ಲೆಯೊಳಗಷ್ಟೆ ಬಸ್ ನಲ್ಲಿ ಸಂಚರಿಸಬಹುದಾಗಿದೆ. ಪ್ರಕರಣಗಳಿ ಕಡಿಮೆಯಿರುವ ಪ್ರದೇಶಗಳಲ್ಲಿ ವ್ಯಾಪಾರಿಗಳಿಗೆ ಶೇ.50ರಷ್ಟು ಸಾಮಥ್ರ್ಯದೊಂದಿಗೆ ವ್ಯವಹಾರ ಆರಂಭಿಸಲು ಅನುಮತಿ ನೀಡಲಾಗಿದೆ. ಅಲ್ಲದೇ ಸಾರ್ವಜನಿಕ ಸಾರಿಗೆ ಹಾಗೂ ವಿಮಾನಗಳ ಸಂಚಾರದ ಮೇಲಿನ ನಿರ್ಬಂಧಗಳನ್ನು ಕೂಡಾ ತೆಗೆದು ಹಾಕಲಾಗಿದ್ದು, ಇಂದಿನಿಂದ ಸಾರ್ವಜನಿಕ ವಾಹನಗಳು ಯಥಾಸ್ಥಿತಿಯಂತೆ ಓಡಾಡುತ್ತಿವೆ.
ಇದನ್ನೂ ಓದಿ: NCIB Headquarters: ಮಹಿಳೆಯನ್ನು 14 ಸೆಕೆಂಡ್ ಗಿಂತ ಹೆಚ್ಚು ಗುರಾಯಿಸುವಂತಿಲ್ಲ.. ಕವಿತೆ ಹೇಳುವಂತಿಲ್ಲ.. ಏನಿದು ಹೊಸ ರೂಲ್ಸ್
ತೈಲ ಪ್ರಮಾಣದಲ್ಲಿ ಇಳಿಕೆ
ಇನ್ನೊಂದೆಡೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿದೆ. ಒಂದು ಬ್ಯಾರೆಲ್ ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯಟ್ ಕಚ್ಚಾ ತೈಲ ದರ 74 ಡಾಲರ್ ಗೆ (6,040 ರೂ) ಇಳಿಕೆಯಾಗಿದೆ. ಡಿಸೆಂಬರ್ ಬಳಿಕ ಉಕ್ರೇನ್-ರಷ್ಯಾ ಯುದ್ಧದಿಂದ 139 ಡಾಲರ್ ಗೆ ಏರಿಕೆ ಆಗಿದ್ದ ದರ ಇದೀಗ ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.
Covid in China: Covid cases are increasing in China no ventilator and beds in hospitals so people are protesting against government