ಕರಾವಳಿಯತ್ತ ಬೆರಳು ಮಾಡುವ ಮುನ್ನ ಕಲಬುರ್ಗಿಯ ದಯನೀಯ ಸ್ಥಿತಿ ನೋಡಿ: ಸಚಿವ ಪ್ರಿಯಾಂಕ್ ಖರ್ಗೆಗೆ ಸುನೀಲ್ ಕುಮಾರ್ ತಪರಾಕಿ

Mangaluru Investment Row: ಬೆಂಗಳೂರು: ಕರಾವಳಿಯಲ್ಲಿ ಕೋಮುವಾದದ ಕಾರಣಕ್ಕೆ ಹೂಡಿಕೆ ಬರುತ್ತಿಲ್ಲ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಸುನೀಲ್ ಕುಮಾರ್ ಕಾರ್ಕಳ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕರಾವಳಿ ಜಿಲ್ಲೆಗಳ ಬಗ್ಗೆ ಮಾತನಾಡುವ ಮೊದಲು ತಮ್ಮದೇ ಉಸ್ತುವಾರಿಯ ಕಲಬುರ್ಗಿ ವಿಭಾಗದ ‘ಅಭಿವೃದ್ಧಿ ಶೂನ್ಯ’ ಸ್ಥಿತಿಯ ಕಡೆಗೆ ಒಮ್ಮೆ ಕಣ್ಣು ಹಾಯಿಸಿ ಎಂದು ಅವರು ಅಂಕಿಅಂಶಗಳ ಸಮೇತ ಸವಾಲು ಹಾಕಿದ್ದಾರೆ.

ಪ್ರಿಯಾಂಕ್ ಖರ್ಗೆಗೆ ಸುನೀಲ್ ಕುಮಾರ್ ಕೇಳಿದ ಪ್ರಶ್ನೆಗಳು:

ಸೋಷಿಯಲ್ ಮೀಡಿಯಾ ಎಕ್ಸ್ (X) ನಲ್ಲಿ ಅಂಕಿಅಂಶಗಳನ್ನು ಹಂಚಿಕೊಂಡಿರುವ ಸುನೀಲ್ ಕುಮಾರ್, ಕಲ್ಯಾಣ ಕರ್ನಾಟಕದ ಹಿಂದುಳಿದಿರುವಿಕೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅವರ ಟ್ವೀಟ್‌ನ ಪೂರ್ಣಪಾಠ ಇಲ್ಲಿದೆ:

“ಕಲ್ಬುರ್ಗಿ ರಿಪಬ್ಲಿಕ್ “ನ ಈ ಸರ್ವಾಧಿಕಾರಿಯನ್ನು ಎರಡು ಬಾರಿ ಐಟಿ – ಬಿಟಿ ಸಚಿವನನ್ನಾಗಿ ಮಾಡಿದ್ದು, ಆಡುವ ಮಕ್ಕಳಿಗೆ ಮದುವೆ ಮಾಡಿದಂತಾಗಿದೆ. “ಮಾತಾಡುವವನೇ ಮಹಾಶೂರ ” ಎಂಬುದನ್ನು ಬದುಕಿನ ಧ್ಯೇಯವಾಗಿಸಿಕೊಂಡಿರುವ ಸಚಿವ @PriyankKharge ಕಲಬುರ್ಗಿಯನ್ನು ಸಿಲಿಕಾನ್ ಸಿಟಿ ಮಾಡಿದವರಂತೆ ಪೋಸು ಕೊಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಇವರು ಅಧಿಕಾರಕ್ಕೆ ಬಂದ ನಂತರ ಇಡಿ‌ ಕಲಬುರ್ಗಿ ವಿಭಾಗವೇ ಸುಡಾನ್ ದೇಶದ ರೀತಿ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ.
ಪ್ರಾದೇಶಿಕ ಅಸಮತೋಲನ ನಿವಾರಣೆಯ ಅಧ್ಯಯನಕ್ಕಾಗಿ ಸರ್ಕಾರ ನೇಮಿಸಿದ್ದ ಪ್ರೊ.ಗೋವಿಂದರಾವ್ ಸಮಿತಿಯ ವರದಿಯ ಪ್ರಕಾರ ಅಭಿವೃದ್ಧಿ ಮಾನದಂಡಗಳ ಆಧಾರದ ಮೇಲೆ ರಾಜ್ಯದಲ್ಲಿ ಎಂಟು ಜಿಲ್ಲೆಗಳನ್ನು ಅತ್ಯಂತ ಹಿಂದುಳಿದ ಎಂದು ಗುರುತಿಸಲಾಗಿದ್ದು, ಈ ಪೈಕಿ 6 ಕಲಬುರ್ಗಿ ವಿಭಾಗದಲ್ಲಿದೆ. ಕಲಬುರ್ಗಿ ವಿಭಾಗದ 51 ತಾಲೂಕುಗಳಲ್ಲಿ 39 ಅತ್ಯಂತ ಹಿಂದುಳಿದ, 9 ಅತಿ ಹಿಂದುಳಿದ ತಾಲೂಕು ಎಂದು ಪರಿಗಣಿಸಲ್ಪಟ್ಟಿದೆ.

ತನ್ನ ತವರು ಜಿಲ್ಲೆಯನ್ನೇ ಅಭಿವೃದ್ಧಿಪಡಿಸಲು ಸಾಧ್ಯವಾಗದ ವ್ಯಕ್ತಿ ಕೋಮುವಾದದ ಕಾರಣಕ್ಕೆ ಕರಾವಳಿಗೆ ಐಟಿ ಕಂಪನಿಗಳು ಬರುತ್ತಿಲ್ಲ ಎಂದು ಉಯಿಲಿಡುತ್ತಿದ್ದಾರೆ. ಆದರೆ ಕರಾವಳಿ ಜಿಲ್ಲೆಗಳು ಹಿಂದುಳಿದ ಜಿಲ್ಲೆಗಳಲ್ಲ, ಏಕೆಂದರೆ ಇಲ್ಲಿ ಖರ್ಗೆ ಕುಟುಂಬ ಪಾರುಪಥ್ಯ ಸ್ಥಾಪಿಸಿಲ್ಲ. ಹೀಗಾಗಿ ಪ್ರಿಯಾಂಕ ಖರ್ಗೆ ಅಭಿವೃದ್ಧಿ ವಿಚಾರವನ್ನು ಮಾತನಾಡುವುದಕ್ಕೆ ಮುನ್ನವೇ ಕರಾವಳಿಯಲ್ಲಿ MRPL, Airport , SEZ , Port, Infosys , MCF, ONGC ಯಂಥ ಸಂಸ್ಥೆಗಳು ಬಂದಿವೆ. ತಲಾದಾಯದಲ್ಲಿ ಬೆಂಗಳೂರು ನಂತರದ ಸ್ಥಾನದಲ್ಲಿ ಕರಾವಳಿ ಜಿಲ್ಲೆಗಳಿವೆ.

ಕರ್ನಾಟಕದ ರೈತರಿಗೆ ಶುಭ ಸುದ್ದಿ: 22,000 ಕನ್ನಡಿಗ ಕೃಷಿಕರ ಖಾತೆಗೆ ಶೀಘ್ರವೇ ಹಣ ಬಿಡುಗಡೆ

ಸ್ವಾಮಿ ಪ್ರಿಯಾಂಕ ಖರ್ಗೆಯವರೇ, ನೀವು ಹಾಗೂ ನಿಮ್ಮ ಪಿತಾಶ್ರೀಯವರ ಎಪ್ಪತ್ತು ವರ್ಷಗಳ ಸರ್ವಾಧಿಕಾರದ ಫಲವಾಗಿ ಕಲಬುರ್ಗಿ ವಿಭಾಗದ ಜಿಲ್ಲೆಗಳು ರಕ್ತಕಣ್ಣೀರು ಸುರಿಸುತ್ತಿವೆ. ತಲಾದಾಯ ಹಾಗೂ ಶಿಕ್ಷಣದಲ್ಲಿ ನಿಮ್ಮ ವಿಭಾಗ ರಾಜ್ಯದಲ್ಲೇ ಕನಿಷ್ಠ ಸ್ಥಾನದಲ್ಲಿದೆ. ಇದಕ್ಕೆ ನಿಮ್ಮ ಉತ್ಕೃಷ್ಟ ಆಡಳಿತವೇ ಕಾರಣವಲ್ಲವೇ ? ಸಂವಿಧಾನದ ಆಶೋತ್ತರಗಳನ್ನು ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿರುವ ನೀವು ” ಈದಿ ಅಮಿನ್ ” ಮಾದರಿಯಲ್ಲಿ ಕಲ್ಬುರ್ಗಿಯ ಜನತೆಯ ಜೀವ ಹೀರುವ ದೆವ್ವಗಳಾಗಿದ್ದೀರಿ. ಅದು ಸರಿ ನೀವು ಐಟಿ ಸಚಿವರಾದ ನಂತರ ಕಲಬುರ್ಗಿ ವಿಭಾಗದಲ್ಲಿ ಆದ ಐಟಿ ಬೆಳವಣಿಗೆ, ವಿದೇಶಿ ಬಂಡವಾಳ ಹೂಡಿಕೆ, ಉತ್ಕೃಷ್ಟತಾ ಕೇಂದ್ರಗಳ ಬಗ್ಗೆ ಸ್ವಲ್ಪ ವಿವರಣೆ ನೀಡಬಹುದಲ್ಲ…?

  • ಹಿಂದುಳಿದಿರುವಿಕೆಯ ದಾಖಲೆ: ಕಲಬುರ್ಗಿ ವಿಭಾಗದ ಒಟ್ಟು 51 ತಾಲೂಕುಗಳ ಪೈಕಿ 48 ತಾಲೂಕುಗಳು ಹಿಂದುಳಿದಿವೆ.
  • ಅಂಕಿಅಂಶಗಳ ಭೀಕರತೆ: ಇದರಲ್ಲಿ 39 ತಾಲೂಕುಗಳು ‘ಅತ್ಯಂತ ಹಿಂದುಳಿದ’ ಮತ್ತು 9 ತಾಲೂಕುಗಳು ‘ಅತಿ ಹಿಂದುಳಿದ ಪಟ್ಟಿಯಲ್ಲಿವೆ.
  • ಯಾರ ವೈಫಲ್ಯ?: “ನಿಮ್ಮ ತವರು ಜಿಲ್ಲೆ ಮತ್ತು ವಿಭಾಗದ ಸ್ಥಿತಿಯೇ ಹೀಗಿರುವಾಗ, ಪ್ರಗತಿ ಪಥದಲ್ಲಿರುವ ಕರಾವಳಿಯ ಬಗ್ಗೆ ಕೀಳಾಗಿ ಮಾತನಾಡುವ ನೈತಿಕತೆ ನಿಮಗಿದೆಯೇ?” ಎಂದು ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.

“ನಿಮ್ಮ ಅಸಮರ್ಥತೆ ಮುಚ್ಚಿಕೊಳ್ಳಲು ಕರಾವಳಿಯ ಮೇಲೆ ಗೂಬೆ ಕೂಡಿಸಬೇಡಿ”

“ಕರಾವಳಿ ಕರ್ನಾಟಕ ತನ್ನ ಸ್ವಂತ ಶಕ್ತಿಯಿಂದ, ಉದ್ಯಮಶೀಲತೆಯಿಂದ ಬೆಳೆದಿದೆ. ಅಲ್ಲಿನ ಜನರ ಶ್ರಮವನ್ನು ಅವಮಾನಿಸುವ ಬದಲು, ನಿಮ್ಮ ಆಡಳಿತದ ಅಸಮರ್ಥತೆಯಿಂದ ರಾಜ್ಯದಿಂದ ಹೊರಹೋಗುತ್ತಿರುವ ಕಂಪನಿಗಳನ್ನು ಉಳಿಸಿಕೊಳ್ಳುವತ್ತ ಗಮನಹರಿಸಿ” ಎಂದು ಸುನೀಲ್ ಕುಮಾರ್ ಕಿಡಿಕಾರಿದ್ದಾರೆ. ಕಲಬುರ್ಗಿಯ ಯುವಕರಿಗೆ ಉದ್ಯೋಗ ನೀಡಲು ವಿಫಲವಾಗಿರುವ ಸಚಿವರು, ಕರಾವಳಿಗೆ ‘ಕೋಮುವಾದ’ದ ಹಣೆಪಟ್ಟಿ ಹಚ್ಚಿ ತಮ್ಮ ವೈಫಲ್ಯವನ್ನು ಮುಚ್ಚಿಡಲು ಯತ್ನಿಸುತ್ತಿದ್ದಾರೆ ಎಂಬುದು ಬಿಜೆಪಿಯ ಆರೋಪವಾಗಿದೆ.

ಈ ವಾಗ್ಯುದ್ಧವು ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರ ಹೂಡಿಕೆ ಕುರಿತಾದ ಹೇಳಿಕೆ ಅವರಿಗೇ ತಿರುಗುಬಾಣವಾದಂತಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories