ಮಳೆಗಾಲದ ಸ್ಪೆಷಲ್ :  ಗರಿಗರಿಯಾದ ಈರುಳ್ಳಿ ಪಕೋಡ”

ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡೇ ಮಾಡಬಹುದಾದ ಬೆಸ್ಟ್ ಸ್ನ್ಯಾಕ್ಸ್

ಕಿಟಕಿಯ ಹೊರಗೆ ಜಿಟಿಜಿಟಿ ಮಳೆ ಹನಿಗಳು ಬೀಳುತ್ತಿದ್ದರೆ, ತಂಪಾದ ಗಾಳಿ ಮೈಮನವನ್ನು ತಣಿಸುತ್ತಿದ್ದರೆ ಮನಸ್ಸು ತಾನಾಗಿಯೇ ಏನಾದರೂ ಬಿಸಿಬಿಸಿಯಾಗಿ, ಗರಿಗರಿಯಾಗಿರುವ ತಿಂಡಿಯನ್ನು ಬಯಸುತ್ತದೆ. ಮಳೆಯ ಸದ್ದಿಗೆ ಹಿನ್ನೆಲೆಯಾಗಿ ಅಡುಗೆ ಮನೆಯಲ್ಲಿ ಎಣ್ಣೆ ಕರ್ರನೆ ಕಾಯುವ ಶಬ್ದ ಕೇಳುವುದೇ ಒಂದು ಆನಂದ. ಇಂತಹ ಹಿತಕರವಾದ ವಾತಾವರಣಕ್ಕೆ ಅತಿ ಕಡಿಮೆ ಸಮಯದಲ್ಲಿ, ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡೇ ಮಾಡಬಹುದಾದ ಬೆಸ್ಟ್ ಸ್ನ್ಯಾಕ್ಸ್ ಎಂದರೆ ಅದು ಗರಿಗರಿಯಾದ ಈರುಳ್ಳಿ ಪಕೋಡ”

ಕೇವಲ ಹತ್ತೇ ನಿಮಿಷದಲ್ಲಿ ಸಿದ್ಧವಾಗುವ ಈ ಪಕೋಡ, ಮಳೆಗಾಲದ ಸಂಜೆಯ ಕಾಫಿ ಅಥವಾ ಟೀ ಸಮಯದ ಗಮ್ಮತ್ತನ್ನು ನೂರರಷ್ಟು ಹೆಚ್ಚಿಸುತ್ತದೆ. ಬಿಸಿ ಚಹಾದ ಪ್ರತಿ ಸಿಪ್ ಜೊತೆಗೆ, ಖಾರ ಹಾಗೂ ಗರಿಗರಿಯಾದ ಪಕೋಡದ ಪ್ರತಿ ಬೈಟ್ ಮಳೆಯ ಮಜಾವನ್ನು ದುಪ್ಪಟ್ಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಬನ್ನಿ, ಹಾಗಾದರೆ ತಡ ಮಾಡದೆ ಈ ಸುಲಭ ಹಾಗೂ ರುಚಿಕರವಾದ ರೆಸಿಪಿಯನ್ನು ಹೇಗೆ ಮಾಡುವುದು ಅಂತ ನೋಡೋಣ.

ಬೇಕಾಗುವ ಸಾಮಗ್ರಿಗಳು:

  • ಈರುಳ್ಳಿ: 2 ರಿಂದ 3 (ಉದ್ದಕ್ಕೆ ಮತ್ತು ತೆಳ್ಳಗೆ ಹೆಚ್ಚಿದ್ದು)
  • ಕಡಲೆಹಿಟ್ಟು: 1 ಕಪ್
  • ಅಕ್ಕಿಹಿಟ್ಟು: 2 ರಿಂದ 3 ಚಮಚ (ಪಕೋಡಾ ಗರಿಗರಿಯಾಗಲು ಮುಖ್ಯ)
  • ಹಸಿಮೆಣಸಿನಕಾಯಿ: 2 (ಸಣ್ಣಗೆ ಹೆಚ್ಚಿದ್ದು)
  • ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು: ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)
  • ಅಚ್ಚ ಖಾರದ ಪುಡಿ: ಅರ್ಧ ಚಮಚ
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್: ಅರ್ಧ ಚಮಚ
  • ಉಪ್ಪು: ರುಚಿಗೆ ತಕ್ಕಷ್ಟು

ಇದನ್ನೂ ಓದಿ : ಬಾಯಲ್ಲಿ ನೀರೂರಿಸುವ ಕುಂದಾಪ್ರ ಚಿಕನ್‌ ಸುಕ್ಕ ಮನೆಯಲ್ಲೇ ಮಾಡುವುದು ಹೇಗೆ?

ಮಾಡುವ ವಿಧಾನ:

  1. ಮೊದಲು ಒಂದು ಪಾತ್ರೆಯಲ್ಲಿ ಉದ್ದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿ, ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕೈಯಿಂದ ಚೆನ್ನಾಗಿ ಹಿಸುಕಿ (ಕಿವುಚಿ). ಇದರಿಂದ ಈರುಳ್ಳಿ ನೀರು ಬಿಡುತ್ತದೆ ಮತ್ತು ಪಕೋಡಾ ಚೆನ್ನಾಗಿ ಬರುತ್ತದೆ.
  2. ಈಗ ಅದೇ ಈರುಳ್ಳಿಗೆ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ.
  3. ನಂತರ ಅದಕ್ಕೆ ಕಡಲೆಹಿಟ್ಟು ಮತ್ತು ಅಕ್ಕಿಹಿಟ್ಟು ಸೇರಿಸಿ ನೀರನ್ನು ಮೊದಲೇ ಹಾಕಬೇಡಿ. ಈರುಳ್ಳಿಯಲ್ಲಿರುವ ನೀರಿನಂಶದಲ್ಲೇ ಹಿಟ್ಟನ್ನು ಚೆನ್ನಾಗಿ ಕಲಸಿ. ತೀರಾ ಒಣ ಎನಿಸಿದರೆ ಮಾತ್ರ 1-2 ಚಮಚ ನೀರನ್ನು ಚಿಮುಕಿಸಿಕೊಳ್ಳಿ (ಮಿಶ್ರಣ ಗಟ್ಟಿಯಾಗಿರಬೇಕು).
  4. ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಎಣ್ಣೆ ಚೆನ್ನಾಗಿ ಕಾದ ನಂತರ, ಸಿದ್ಧಪಡಿಸಿದ ಮಿಶ್ರಣವನ್ನು ಪಕೋಡಾ ಆಕಾರದಲ್ಲಿ (ಉಂಡೆ ಮಾಡದೆ ಬಿಡಿಬಿಡಿಯಾಗಿ) ಎಣ್ಣೆಗೆ ಚಿಮುಕಿಸಿದಂತೆ ಹಾಕಿ.
  5. ಮಧ್ಯಮ ಉರಿಯಲ್ಲಿ ಪಕೋಡಾ ಗೋಲ್ಡನ್ ಬ್ರೌನ್ ಮತ್ತು ಕ್ರಿಸ್ಪಿ ಆಗುವವರೆಗೆ ಚೆನ್ನಾಗಿ ಕರಿದು ತೆಗೆಯಿರಿ.

ಕೊನೆಯಲ್ಲಿ ಪಕೋಡಾ ಜೊತೆಗೆ 3-4 ಹಸಿಮೆಣಸಿನಕಾಯಿ ಮತ್ತು ಸ್ವಲ್ಪ ಕರಿಬೇವನ್ನ ಎಣ್ಣೆಯಲ್ಲಿ ಕರಿದು ಪಕೋಡಾ ಮೇಲೆ ಹಾಕಿದರೆ ಬೇಕರಿ ಶೈಲಿಯ ಲುಕ್ ಮತ್ತು ಟೇಸ್ಟ್ ಸಿಗುತ್ತದೆ.

 

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories