ನೆಮ್ಮದಿ ಬೇಕಾ? ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ

ಯಾವಾಗ್ಲೂ ಬ್ಯುಸಿ.. ಬ್ಯುಸಿ.. ಅನ್ನುವ ಜನರು ಆಗಾಗ ಹೇಳುವ ಒಂದೇ ಒಂದು ಮಾತು “ನೆಮ್ಮದಿಯೇ ಇಲ್ಲ!”. ಕೆಲವರಂತೂ ʼಆಫೀಸಲ್ಲೂ ನೆಮ್ಮದಿ ಇಲ್ಲ, ಮನೆಯಲ್ಲೂ ನೆಮ್ಮದಿ ಇಲ್ಲʼ ಅಂತ ಒಂದೇ ಸಮನೆ ಗೋಳಾಡ್ತಾನೇ ಇರ್ತಾರೆ. ಹಾಗಾದ್ರೆ ಈ ನೆಮ್ಮದಿ ನಿಮಗೆಲ್ಲಿಂದ ಸಿಗುತ್ತೆ ಅನ್ನೋ ಸತ್ಯ ಗೊತ್ತಾ?!. ಅಂತವರಿಗಾಗಿಯೇ ಕೆಲವೊಂದಿಷ್ಟು ಟಿಪ್ಸ್‌ಗಳಿವೆ.

ನಿಮಗೆ ಕೆಲಸ ಮಾಡಿ ಮಾಡಿ ಸುಸ್ತಾಗಿರಬಹುದು, ಮನೆಯ ಜವಾಬ್ದಾರಿ ಹೆಗಲೇರಿ ಕೂತು ನೆಮ್ಮದಿ ಕೆಟ್ಟಿರಬಹುದು, ಪ್ರತಿನಿತ್ಯ ಮನೆಯವರೊಂದಿಗೆ ಜಗಳ ಆಡಿ ಮನಸ್ಸು ಚಂಚಲವಾಗಿರಬಹುದು, ಆಫೀಸಲ್ಲಿ ಕೆಲಸದ ಒತ್ತಡದಿಂದ ಮಂಡೆ ಬಿಸಿಯೂ ಆಗಿರಬಹುದು. ಇದೆಲ್ಲ ಒಟ್ಟಿಗೆ ಸೇರಿ ನೆಮ್ಮದಿಯೇ ಇಲ್ಲ! ಅನ್ನುವ ಸಂಕಷ್ಟವೂ ನಿಮಗೀಗಾಲೇ ಅಂಟಿಕೊಂಡಿರಬಹುದು. ಹಾಗಾದ್ರೆ ಏನು ಮಾಡ್ಬೇಕು ಅನ್ನುವ ಕುರಿತು ಒಂದಿಷ್ಟು ಮಾಹಿತಿ ತಿಳಿಯೋಣ.

ಸಂಗೀತ ಕೇಳಿ ;

ಸಂಗೀತ ನಿಮ್ಮ ಮನಸ್ಸಿನ ನೆಮ್ಮದಿಯನ್ನ ಹೆಚ್ಚಿಸುತ್ತೆ. ನಿಮಗೆ ಸಿಟ್ಟು ಬಂದಾಗ, ಬೇಜಾರಾದಾಗ, ಒತ್ತಡವಿದ್ದಾಗ ಸಂಗೀತ ಕೇಳಿ. ನಿಮಗಿಷ್ಟವಾದ ಹಾಡನ್ನು ಹಚ್ಚಿಕೊಂಡು ಒಂದಿಷ್ಟು ಸಮಯ ಸಂಗೀತದೊಟ್ಟಿಗೆ ಕಳೆದು ಬಿಡಿ. ಮೃದುವಾದ ಧ್ವನಿಯು ರಾಗಬದ್ಧವಾಗಿ ಹಾಡಿದಾಗ, ಅರ್ಥಪೂರ್ಣ ಪದದಿಂದ ಹುಟ್ಟಿಕೊಂಡ ಭಾವನೆಯು ನಿಮಗೆ ಸಾಮಾಧಾನವನ್ನು ನೀಡುತ್ತದೆ. ಸಂಗೀತ ನಿಮ್ಮ ಆರೋಗ್ಯದ ಮಟ್ಟವನ್ನೂ ಸುಧಾರಿಸುತ್ತದೆ.

ಪ್ರಾಣಾಯಾಮ ;

ಬ್ಯುಸಿ ಲೈಫ್‌ನಲ್ಲಿ ಒಂದರ್ಧ ಗಂಟೆಯನ್ನು ನೀವು ನಿಮಗಾಗಿಯೇ ಇಟ್ಟುಕೊಳ್ಳಬೇಕು. ಒತ್ತಡದ ಬದುಕು ನಿಮ್ಮ ಆರೋಗ್ಯ ಮಟ್ಟವನ್ನ ಕೆಡಿಸಿಬಿಟ್ಟಿರುತ್ತದೆ. ಆರೋಗ್ಯ ಚೆನ್ನಾಗಿದ್ದರೆ, ಇಡೀ ದಿನ ನೀವು ಒಳ್ಳೆಯ ಮನಸ್ಸಿನೊಂದಿಗೆ ಕೆಲಸ ಮಾಡಬಹುದು. ನಿಮ್ಮ ಸುಸ್ತು, ಒತ್ತಡದಂತಹ ಪರಿಸ್ಥಿತಿಯನ್ನು ಸುಧಾರಿಸಲು ಪ್ರಾಣಾಯಾಮ ಅನುಕೂಲಕರ.

ಕಥೆ / ಕಾದಂಬರಿ ಓದಿ ;

ಓದುವ ಆಸಕ್ತಿ ಇರುವವರಿಗಂತೂ ಇದು ಉತ್ತಮ ಅವಕಾಶ. ಮನಸ್ಸು ಕೆಟ್ಟಾಗ, ಜೋರು ಸಿಟ್ಟು ಬಂದಾಗ, ಹೆಚ್ಚು ಒತ್ತಡವಿದ್ದಾಗ ಒಂದಿಷ್ಟು ಸಮಯ ಓದುವುದನ್ನು ರೂಢಿಸಿಕೊಳ್ಳಿ. ಇದು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನಿಮ್ಮ ಕೆಲಸವನ್ನು ನೀವು ಏಕಾಗ್ರತೆಯಿಂದ ಆರಾಮವಾಗಿ ನಿಭಾಯಿಸಲು ಸಹಾಯಕವಾಗಿದೆ.

ಆಪ್ತರೊಂದಿಗೆ ಮಾತನಾಡಿ ;

ನಿಮ್ಮ ನೆಮ್ಮದಿ ಕೆಟ್ಟಿದ್ದಾಗ ನಿಮಗಿಷ್ಟವಾದ ವ್ಯಕ್ತಿಯೊಂದಿಗೆ ನೀವು ಮಾತಾಡುವ ಮೂಲಕ ನೆಮ್ಮದಿಯನ್ನು ಕಂಡುಕೊಳ್ಳಬಹುದು. ಮನಸ್ಸಿಗೆ ಇಷ್ಟವಾದವರ ಜೊತೆ ನಾಲ್ಕಾರು ಮಾತುಗಳು ಸಾಕು ನೆಮ್ಮದಿ ಸಿಗಲು. ಆಪತ್ಕಾಲಕ್ಕೆ ಆಪ್ತರೇ! ಅನ್ನುವ ಮಾತಿನಂತೆ, ನಿಮ್ಮ ಖುಷಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ನಿಮ್ಮ ನೆಮ್ಮದಿಯನ್ನು ಉಳಿಸಿಕೊಳ್ಳಿ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories