ಬೆಂಗಳೂರು : ಇಷ್ಟು ದಿನ ಜನಸಾಮಾನ್ಯರ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದ ಸೈಬರ್ ಖದೀಮರು ಇದೀಗ ನಿವೃತ್ತ ಪೊಲೀಸ್ ಅಧಿಕಾರಿಯೋರ್ವರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದಾರೆ. ಬ್ಯಾಂಕ್ ಖಾತೆಯಿಂದ ಬರೋಬ್ಬರಿ 2.13 ಲಕ್ಷ ರೂಪಾಯಿ ಎಗರಿಸಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ ಅಜಯ್ ಕುಮಾರ್ ಸಿಂಗ್ ಅವರ ಬ್ಯಾಂಕ್ ಖಾತೆಯನ್ನೇ ಹ್ಯಾಕ್ ಮಾಡಲಾಗಿದೆ. ಬೆಂಗಳೂರಿನ ರಿಚ್ ಮಂಡ್ ಟೌನ್ ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿರುವ ಅಜಯ್ ಕುಮಾರ್ ಸಿಂಗ್ ಅವರ ಖಾತೆಯಿಂದ ಹಣ ಅಪಹರಿಸಲಾಗಿದೆ.
ಅಜಯ್ ಕುಮಾರ್ ಸಿಂಗ್ ಅವರ ಖಾತೆಗೆ ಬರೋಬ್ಬರಿ 50ಕ್ಕೂ ಅಧಿಕ ಓಟಿಪಿ ಬಂದಿದ್ದು, ಅದನ್ನು ಪರಿಶೀಲಿಸಿದಾಗ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿಕೊಂಡು ಸುಮಾರು 60ಕ್ಕೂ ಅಧಿಕ ಬಾರಿ ಹಣದ ವಹಿವಾಟು ನಡೆಸಿರೋದು ಬಯಲಿಗೆ ಬಂದಿದೆ. ಇದುವರೆಗೆ ಒಟ್ಟು 2.13 ಲಕ್ಷಕ್ಕೂ ಅಧಿಕ ಹಣವನ್ನು ಖಾತೆಯಿಂದ ವಿಥ್ ಡ್ರಾ ಮಾಡಲಾಗಿದೆ. ಕೂಡಲೇ ಬ್ಯಾಂಕ್ ಸಿಬ್ಬಂಧಿಗಳನ್ನು ವಿಚಾರಿಸಿ ದಾಗ ಸೈಬರ್ ಖದೀಮರ ಕೈಚಳಕ ವಿರೋದು ಬಯಲಾಗಿದೆ. ಈ ಕುರಿತು ಬೆಂಗಳೂರು ಪೂರ್ವ ವಿಭಾಗದ ಸೈಬರ್ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸೈಬರ್ ಖದೀಮರು ಇಷ್ಟು ದಿನ ಅಮಾಯಕರ ಖಾತೆಯಿಂದ ಹಣ ಎಗರಿಸುತ್ತಿದ್ದರು. ಇದೀಗ ನಿವೃತ್ತ ಪೊಲೀಸ್ ಅಧಿಕಾರಿಯೋರ್ವರ ಖಾತೆಗೆ ಕನ್ನ ಹಾಕಿರೋದ್ರಿಂದಾಗಿ ಜನ ಸಾಮಾನ್ಯರು ಬೆಚ್ಚಿಬಿದ್ದಿದ್ದಾರೆ.