ಪೊಲೀಸ್ ಅಧಿಕಾರಿಯಾದ ವೇಗದ ಓಟಗಾರ್ತಿ ಹಿಮಾ ದಾಸ್

  • ರಂಜಿತ್ ಶಿರಿಯಾರ್

ಚಿಗರೆಯಂತಹ ಓಟಗಾರ್ತಿ.. ದೇಶ ಕಂಡ ಶ್ರೇಷ್ಟ ಕ್ರೀಡಾಪಟುಗಳಲ್ಲಿ ಒಬ್ಬರು ಹಿಮಾದಾಸ್. ಬಡತನದ ಬೇಗೆಯಲ್ಲಿಯೇ ಬೆಳೆದ ಹಿಮಾ ದಾಸ್ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದರು. ಇದೀಗ ವೇಗದ ಓಟಗಾರ್ತಿ ಪೊಲೀಸ್ ಅಧಿಕಾರಿಯಾಗಿ ಜನ ಸೇವೆಗೆ ನಿಂತಿದ್ದಾರೆ.

ಬಾಲ್ಯದಿಂದಲೂ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದ ಹಿಮಾದಾಸ್ ಕನಸು ಇದೀಗ ನನಸಾಗಿದೆ. ಗುಹಾಹಟಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಅವರು ಅವರಿಗೆ ನೇಮಕಾತಿ ಪತ್ರವನ್ನು ವಿತರಿಸಿದ್ದಾರೆ. ಈ ಮೂಲಕ ದೇಶದ ಖ್ಯಾತ ಅಥ್ಲಿಟ್ ಇದೀಗ ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕವಾಗಿದ್ದಾರೆ.

ಅಸ್ಸಾಂನ ನಾಗಾಂವ್ ಜಿಲ್ಲೆಯ ಧಿಂಗ್ ಏನ್ನುವ ಸಣ್ಣ ಹಳ್ಳಿ ಅದು ರಂಜಿತ್ ದಾಸ್ ಮತ್ತು ಜುನಾಲಿ ದಂಪತಿಯ ಆರು ಮಕ್ಕಳಲ್ಲಿ ಈಕೆ ಕಡೆಯವಳು. ಕಣ್ತೆರೆಯುತ್ತಲೇ ಕಡು ಬಡತನ, ಹೊತ್ತಿನ ಊಟಕ್ಕೂ ಕಷ್ಟ. ತಂದೆ ತಮ್ಮ ಹತ್ತಿಪ್ಪತ್ತು ಸೆಂಡ್ಸ್ ಭೂಮಿಯಲ್ಲಿ ಭತ್ತ ಬೆಳೆಯುತ್ತಾ ಜೀವನ ನಡೆಸುತ್ತಿದ್ದ ಬಡ ರೈತ. ಬಾಲ್ಯದಿಂದಲೂ ಈಕೆಗೆ ಆಡುವುದೆಂದರೆ ಪರಪಂಚ. ಓಡುವುದೆಂದ್ರೆ ಹುಚ್ಚು, ಮನೆಯ ಪಕ್ಕದ ದೊಡ್ಡ ದೊಡ್ಡ ಹುಡುಗರ ಜೊತೆ ಗದ್ದೆಯಲ್ಲಿ ಕಾಲ್ಚೆಂಡು ಆಡುತ್ತಾ ಬೆಳೆದ ಈಕೆಯನ್ನ, ಶಾಲೆಯ ಆಟೋಟದಲ್ಲಿ ಮೀರಿಸುವವರು ಯಾರು ಇರ್ಲಿಲ್ಲ.

ಪಿಟಿ ಮಾಷ್ಟರ್ ಅವತ್ತೆ ನೀನು ದೊಡ್ಡ ಕ್ರೀಡಾ ಪಟು ಆಗ್ತೀಯ ಅಂತ ಭವಿಷ್ಯ ನುಡಿದಿದ್ರು. ಊರಿನ ಹಬ್ಬದ ಕ್ರೀಡಾಕೂಟದಲ್ಲಿ ಈಕೆಯನ್ನ ಗಮನಿಸಿದ ಕೋಚ್ ನಿಪ್ಸೋನ್ ದಾಸ್, ಗುಹಾಹಟಿಗೆ ಕರೆದುಕೊಂಡು ಹೋದ್ರು. ಆಗ ಕಾಲಿಗೆ ಹಾಕುವ ” ಶೂ” ಖರೀದಿಸಲಾಗದಷ್ಟು ಬಡತನ ಈಕೆ ಮನೆಯಲ್ಲಿತ್ತು. ಅದ್ರೆ ಇಂದು ಈಕೆ ಬ್ರಾಂಡೆಡ್ puma,adidas ನಂತ ಕಂಪೆನಿಗಳಿಗೆ ತಾನೆ ಬ್ರಾಂಡ್ ಅಂಬಾಸಿಡರ್.

ನಿಮಗೆಲ್ಲಾ ನೆನಪಿದೆ. ಅಂದು ಇದೇ 18 ವರ್ಷದ ಪೋರಿ ಪಿಯುಸಿ ಓದುತ್ತಿದ್ಲು. ಆವತ್ತು ನಡೆದ ವಿಶ್ವ ಜೂನಿಯರ್ ಚಾಂಪಿಯನಶಿಪ್ನಲ್ಲಿ ಈಕೆಯ ಚೀತಾ ವೇಗ ಹೇಗಿತ್ತು ಅಂತ. 400 ಮೀಟರ್ ಓಟದ ಆ ನಾಲ್ಕನೇ ಲೇನ್ ನಲ್ಲಿ ಓಟ ಆರಂಭಿಸಿ 350 ಮೀಟರ್ ವರೆಗೂ 4-5 ನೇ ಸ್ಥಾನದಲ್ಲಿದ್ದು ಮುಕ್ತಾಯಕ್ಕೆ 50 ಮೀ ಬಾಕಿ ಉಳಿದಿರುವಾಗ ಆಕೆಯ ಚಿರತೆ ವೇಗಕ್ಕೆ ಎಲ್ಲರೂ ಒಂದು ಕ್ಷಣ ನಿಬ್ಬೆರಗಾಗಿದ್ದರು. ಅವಳ ಆ ಕೊನೆಕ್ಷಣದ ಶರವೇಗಕ್ಕೆ ರೊಮೆನಿಯಾದ ಆಂಡ್ರೆಸ್ ಮಿಲ್ಕೋಸ್ ಮಕಾಡೆ ಮಲಗಿದ್ದು ನಮ್ಗೆಲ್ಲ ನೆನಪಿದೆ ಅಂದವಳು. ಚಿನ್ನದ ಪದಕಕ್ಕೆ ಕೊರಲೊಡ್ಡೊ ಕ್ಷಣದಲ್ಲಿ ಅವಳ ಕಣ್ಂಚಲ್ಲಿ ಕಂಡ ಕಣ್ಣೀರು. 130 ಕೋಟಿ ಭಾರತೀಯರ ದೇಶ ಭಕ್ತಿಯನ್ನ ಪುಟಿದೇಳಿಸಿದ್ದು ಸತ್ಯ. ರಾಷ್ಟ್ರಪತಿ,ಪ್ರಧಾನಿ ಸೇರಿದಂತೆ ಇಡೀ ವಿಶ್ವವೇ ಈಕೆಯ ಸಾಧನೆಯನ್ನ ಕೊಂಡಾಡಿತ್ತು. ಅವಳ ಕ್ರೀಡಾ ಸಾಧನೆಯ ಬಗ್ಗೆ ಬರೆಯುತ್ತಾ ಹೋದ್ರೆ ಲೇಖನಕ್ಕೆ ಪೂರ್ಣವಿರಾಮ ಇಡಲು ಸಾಧ್ಯವಿಲ್ಲ ಬಿಡಿ.

ಅಂತ “ದಿ ಗ್ರೇಟ್ ಅಥ್ಲೇಟ್ ನಮ್ಮ ಹೆಮ್ಮೆಯ ಹಿಮಾ ದಾಸ್” ಇಂದು ಅದೇ ಹಿಮಾ ದಾಸ್ ರನ್ನ ಅಸ್ಸಾಂ ಸರ್ಕಾರ ಗುರುತಿಸಿ ಉನ್ನತ ಪೊಲೀಸ್ ಅಧಿಕಾರಿಯನ್ನಾಗಿ ಮಾಡಿದ್ದು ನಾವೆಲ್ಲರು ಹೆಮ್ಮೆಪಡುವ ವಿಚಾರ. ಭಾರತದ ಬೆಳಕು ನಿಮ್ಮಿಂದ ಇನ್ನಷ್ಟು ಬೆಳಗಲಿ ಸಿಸ್ಟರ್.

Comments are closed.