ಬೆಂಗಳೂರು : ಕಳೆದ ಒಂದು ವಾರದ ಹಿಂದೆಯಷ್ಟೇ ಹಳೆಯ ಕಟ್ಟಡವೊಂದು ಕುಸಿದ ಘಟನೆಯ ಕಹಿನೆನಪು ಮಾಸುವ ಮುನ್ನವೇ ಹೊಸ ಕಟ್ಟಡವೊಂದು ಪಕ್ಕಕ್ಕೆ ವಾಲಿರುವ ಘಟನೆ ಬೆಂಗಳೂರಿನ ನಾಗರಬಾವಿಯಲ್ಲಿ ನಡೆದಿದೆ. ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಈ ಘಟನೆ ನಡೆದಿದ್ದು, ಕಟ್ಟಡ ತೆರವು ಮಾಡುವಂತೆ ಮನೆ ಮಾಲೀಕರಿಗೆ ಬಿಬಿಎಂಪಿ ನೋಟಿಸ್ ನೀಡಿದೆ.

ಕಳೆದ ರಾತ್ರಿ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ನಾಗರಬಾವಿ ಪ್ರದೇಶಕ್ಕೆ ಭೇಟಿಯನ್ನು ನೀಡಿದ್ದರು. ಈ ವೇಳೆಯಲ್ಲಿ ಮೂರು ಅಂತಸ್ತಿನ ವಸತಿ ಕಟ್ಟಡ ವೊಂದು ಪಕ್ಕಕ್ಕೆ ವಾಲಿರುವುದು ಪತ್ತೆಯಾಗಿತ್ತು. ಅಲ್ಲದೇ ಮನೆಯ ಗೋಡೆಯಲ್ಲಿ ಬಿರುಕು ಬಿಟ್ಟಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಬಾಡಿಗೆಗೆ ಇದ್ದವರನ್ನು ತೆರವುಗೊಳಿಸಿದ್ದಾರೆ. ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಮನೆಯನ್ನು ನಿರ್ಮಾಣ ಮಾಡಿದ್ದು, ಮನೆಯನ್ನು ತೆರವು ಮಾಡುವಂತೆಯೂ ಸೂಚನೆಯನ್ನು ನೀಡಲಾಗಿದೆ.

ಆದರೆ ಮನೆ ಮಾಲೀಕ ರಾಜೇಶ್ ರಾಮಕೃಷ್ಣ ಅವರು ತಾನು ಈ ಮನೆಯನ್ನು ನಿರ್ಮಾಣ ಮಾಡಿಲ್ಲ. ಬದಲಾಗಿ ತನ್ನ ಪತ್ನಿಯ ಅಣ್ಣ ಮನೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ. ಆದರೆ ಬಿಬಿಎಂಪಿ ಆದೇಶವನ್ನು ಪಾಲಿಸುತ್ತೇವೆ. ಮನೆ ನೆಲಸಮ ಮಾಡಿ ಹೊಸ ಮನೆ ಕಟ್ಟುವಂತೆ ಹೇಳಿದ್ರೂ ಆದೇಶ ಪಾಲನೆ ಮಾಡುತ್ತೇವೆ ಎಂದಿದ್ದಾರೆ.

ಬೆಂಗಳೂರಲ್ಲಿ ಕಟ್ಟಡ ದುರಂತ ಸಂಭವಿಸುತ್ತಿರುವ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಅಪಾಯದಲ್ಲಿರುವ ಕಟ್ಟಡಗಳಿಗೆ ನೋಟಿಸ್ ನೀಡುವ ಕಾರ್ಯವನ್ನು ಮಾಡುತ್ತಿದೆ.
( 3 storey building at risk: BBMP notice for sloped building clearance )