KSRTC BMTC : ನೌಕರರ ಸಂಬಳಕ್ಕೆ, ಪಿಎಫ್ ಗೆ ದುಡ್ಡಿಲ್ಲ: ಹೊಸ ಬಸ್ ಖರೀದಿಸೋಕೆ ಮುಂದಾದ ಸಾರಿಗೆ ಸಂಸ್ಥೆ

ಬೆಂಗಳೂರು : ನಷ್ಟದಲ್ಲಿರೋ ಸಂಸ್ಥೆಗಳು ಸಹಜವಾಗಿಯೇ ಲಾಭ ಗಳಿಸೋಕೆ ಪ್ರಯತ್ನ ಮಾಡೋದು ವಾಡಿಕೆ.‌ಆದರೆ ಈ ಕರ್ನಾಟಕ ಸಾರಿಗೆ ಸಂಸ್ಥೆ (KSRTC) ಮಾತ್ರ ಇರೋ ಬಸ್ ಗಳೇ ನಷ್ಟದಲ್ಲಿರೋವಾಗ ಹೊಸ ಬಸ್ ಗಳನ್ನು ಖರೀದಿಸೋ ಮೂಲಕ ಮತ್ತಷ್ಟು ಸಾಲಕ್ಕೆ ಬೀಳಲು ಸಿದ್ಧತೆ ನಡೆಸಿದಂತಿದೆ. ಸದ್ಯ ರಾಜ್ಯದ ಬಿಎಂಟಿಸಿ (BMTC) ಹಾಗೂ ಕೆಎಸ್ಆರ್ಟಿಸಿ (KSRTC)ಎರಡೂ ಸಂಸ್ಥೆಗಳು ನಷ್ಟದಲ್ಲಿವೆ. ಕರ್ನಾಟಕ ಸಾರಿಗೆಯಂತೂ ನೌಕರರಿಗೆ ಸಂಬಳ ಕೊಡಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಅಡವಿಟ್ಟು ನೌಕರರನ್ನು ಸಾಕುತ್ತಿದೆ. ಹೀಗಿದ್ದರೂ, ಸಾರಿಗೆ ಇಲಾಖೆ ಬರೋಬ್ಬರಿಎಂಬತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಬಸ್ ಖರೀದಿಗೆ ಮುಂದಾಗಿದೆ. ಅಂದಾಜು 80 ಕೋಟಿ ರೂಪಾಯಿ ವೆಚ್ಚದಲ್ಲಿ 238 ಹೊಸ ಬಸ್ ಖರೀದಿಸಲು ಸಾರಿಗೆ ಇಲಾಖೆ ಸಿದ್ಧವಾಗಿದೆ.

2020-21 ನೇ ಬಜೆಟ್ ಭಾಷಣದಲ್ಲಿ ಘೋಷಿಸಿದ್ದ 160 ಸೇರಿ ಒಟ್ಟು 238 ಬಸ್ ಗಳನ್ನು ಖರೀದಿಸಲು ಸಾರಿಗೆ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಆರ್ಥಿಕ ಇಲಾಖೆ ಪ್ರತಿ ಬಸ್ ಗೆ 33.82 ಲಕ್ಷ ರೂಪಾಯಿಯಂತೆ 238 ಬಸ್ ಖರೀದಿಸಲು ಸಹಮತಿಸಿದೆ. ಇದರಿಂದ ಮತ್ತೆ ಸಾರಿಗೆ ಇಲಾಖೆಗೆ ಕೋಟ್ಯಾಂತರ ರೂಪಾಯಿ ಹೊರೆಯಾಗಲಿದ್ದು, ಈ ಬಗ್ಗೆ ಯೋಚಿಸುವ ಬದಲು ಮತ್ತೆ ಬಸ್ ಖರೀದಿಸಿ ಸಂಸ್ಥೆಯನ್ನು ಮತ್ತಷ್ಟು ನಷ್ಟಕ್ಕೆ ದೂಡುವ ಪ್ರಯತ್ನ ನಡೆದಿದೆ ಎಂದು ಹಲವು ಸಂಘಟನೆಗಳು ದೂರಿವೆ.

ಸದ್ಯ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಶಾಂತಿನಗರ ಸಂಚಾರಿ ಮತ್ತು ಸಾರಿಗೆ ನಿರ್ವಹಣಾ ಕೇಂದ್ರದ ಕಟ್ಟಡವನ್ನು ಕೆನರಾ ಬ್ಯಾಂಕ್‌ನಲ್ಲಿ 390.00 ಕೋಟಿ ರೂ. ಅಡ ಇಡಲಾಗಿದೆ. ಇದಲ್ಲದೇವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಹುಬ್ಬಳ್ಳಿ ನಗರದ ಹೊಸೂರುದಲ್ಲಿರು 14 ಎಕರೆ ಹಾಗೂ 2.32 ಎಕರೆಯನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ 100.00 ಕೋಟಿ ರೂ ಅಡವಿಡಲಾಗಿದೆ.

ಇನ್ನು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ಸೇರಿದ ಕಲ್ಬುರ್ಗಿಯಲ್ಲಿರುವ ಕೇಂದ್ರ ಬಸ್‌ ನಿಲ್ದಾಣದ 6.28 ಎಕರೆ ನಿವೇಶನವನ್ನು ಕೆನರಾ ಬ್ಯಾಂಕ್‌ನಲ್ಲಿ 50.00 ಕೋಟಿ ರೂ ಅಡ ಇಟ್ಟು ಹಣ ಪಡೆಯಲಾಗಿದೆ. ಸದ್ಯ ಸಾರಿಗೆ ಇಲಾಖೆಗೆ ಬೇಕಾಗಿರೋದು ಇರೋ ಬಸ್ ಗಳನ್ನು ಲಾಭದಾಯಕವಾಗಿ ಓಡಿಸಿ ದುಡಿಯುವ ಪ್ಲ್ಯಾನ್ ಗಳು ಅದನ್ನು ಹೊರತುಪಡಿಸಿ ಹೀಗೆ ಹೊಸ ಬಸ್ ಖರೀದಿಸಿ ಮತ್ತಷ್ಟು ಸಾಲ ಮಾಡಿಕೊಂಡು ಪರದಾಡುವ ಸ್ಥಿತಿ ಯಾಕೆ ಎಂದು ಸಾರ್ವಜನಿಕರು ಸಾರಿಗೆ ಇಲಾಖೆಗೆ ಛೀಮಾರಿ ಹಾಕ್ತಿದ್ದಾರೆ.

ಇದನ್ನೂ ಓದಿ : ಸಂಬಳಕ್ಕಾಗಿ ಸಾಲ, ಬಸ್‌ ನಿಲ್ದಾಣಗಳನ್ನೇ ಅಡವಿಡುತ್ತಿದೆ ಕೆಎಸ್‌ಆರ್‌ಟಿಸಿ

ಇದನ್ನೂ ಓದಿ : ಕಬ್ಬನ್ ಪಾರ್ಕ್ ಪ್ರಿಯರಿಗೆ ಶಬ್ದಮಾಲಿನ್ಯವೇ ಶತ್ರು: ಸದ್ಯದಲ್ಲೇ ಜಾರಿಯಾಗಲಿದೆ ನೋ ಹಾಂಕಿಂಗ್ ರೂಲ್ಸ್

KSRTC BMTC Pending Salary but Purchasing New Bus

Comments are closed.