ಮಂಗಳೂರು : ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ನಿರೂಪಕಿ ಅನುಶ್ರೀ ವಿಚಾರಣೆಯ ಬೆನ್ನಲ್ಲೇ ಇದೀಗ ಮತ್ತಷ್ಟು ಕಿರುತೆರೆ ನಟ, ನಟಿಯರಿಗೆ ಸಂಕಷ್ಟ ಎದುರಾಗಿದೆ. ಅದ್ರಲ್ಲೂ ಬಿಗ್ ಬಾಸ್ ನಲ್ಲಿ ಭಾಗಿಯಾಗಿದ್ದ ಡ್ಯಾನ್ಸರ್ ಹಾಗೂ ಕರಾವಳಿ ಮೂಲದ ಕಿರುತೆರೆ ನಟಿಯನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಮಂಗಳೂರಿನ ಡ್ರಗ್ಸ್ ಪ್ರಕರಣ ಇದೀಗ ಕಿರುತೆರೆಯ ನಟ, ನಟಿಯರಿಗೆ ಕಂಟಕವಾಗೋದು ಗ್ಯಾರಂಟಿ. ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ಬಂಧನದಲ್ಲಿರುವ ಪೆಡ್ಲರ್ ಕಿಶೋರ್ ಅಮನ್ ಶೆಟ್ಟಿ ಹಾಗೂ ಸ್ಯಾಮ್ ಫೆರ್ನಾಂಡಿಸ್ ಹಲವರ ಹೆಸರನ್ನು ಬಾಯ್ಬಿಟ್ಟಿದ್ದಾರೆ. ಎರಡು ಸೀಸನ್ ಗಳಲ್ಲಿ ಬಿಗ್ ಬಾಸ್ ಶೋನಲ್ಲಿ ಬಾಗಿಯಾಗಿದ್ದ ನಟ, ನಟಿಯರ ಹೆಸರು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಇನ್ ಸ್ಪೆಕ್ಟರ್ ಶಿವಪ್ರಕಾಶ್ ಅವರ ನೇತೃತ್ವದ ತಂಡ ಈಗಾಗಲೇ ಬೆಂಗಳೂರಿನ ಹಲವೆಡೆಗಳಲ್ಲಿ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿದೆ.

ಡ್ರಗ್ಸ್ ಪಾರ್ಟಿ ಮಾಡಿರುವ ಜಾಗದಲ್ಲಿ ಈಗಾಗಲೇ ಪರಿಶೀಲನೆಯನ್ನು ನಡೆಸಿರುವ ಮಂಗಳೂರಿನ ಸಿಸಿಬಿ ಅಧಿಕಾರಿಗಳು ಪಾರ್ಟಿಯ ಕುರುಹುಗಳನ್ನು ಕಲೆ ಹಾಕುವ ಕಾರ್ಯವನ್ನು ಮಾಡುತ್ತಿದೆ. ಒಂದೊಮ್ಮೆ ಡ್ರಗ್ಸ್ ಪಾರ್ಟಿಯ ಕುರಿತು ಯಾವುದೇ ಸಾಕ್ಷಿ ಲಭ್ಯವಾದ್ರೂ ಕೂಡ ಕಿರುತೆರೆಯ ನಟ, ನಟಿಯರನ್ನು ವಿಚಾರಣೆಗೆ ಕರೆಯುವುದು ಗ್ಯಾರಂಟಿ.

ಇನ್ನೊಂದೆಡೆ ಹಲವು ಕಡೆಗಳಲ್ಲಿ ಡ್ರಗ್ಸ್ ಪಾರ್ಟಿಯಲ್ಲಿ ಆಯೋಜಿಸಿರುವ ಕುರಿತು ಪೆಡ್ಲರ್ ಸ್ಯಾಮ್ ಫೆರ್ನಾಂಡಿಸ್ ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಹಲವರನ್ನು ವಿಚಾರಣೆಗೆ ಹಾಜರು ಪಡಿಸುವ ಸಾಧ್ಯತೆಯಿದೆ. ಮಂಗಳೂರು ಡ್ರಗ್ಸ್ ಪ್ರಕರಣದಲ್ಲಿ ಕ್ಷಣಕ್ಕೊಬ್ಬರ ಹೆಸರು ಕೇಳಿಬರುತ್ತಿದ್ದು, ಇನ್ನಷ್ಟು ಮಂದಿಯ ಹೆಸರು ಬಹಿರಂಗವಾಗಲಿದೆ.